ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ ಖಂಡಿಸಿ ಸಂಸತ್ತಿನ ಆವರಣದಲ್ಲಿ ಡಿಎಂಕೆ ಸಂಸದರಿಂದ ಪ್ರತಿಭಟನೆ

Photo: PTI
ಹೊಸದಿಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿ, ತ್ರಿಭಾಷಾ ಸೂತ್ರ ಹಾಗೂ ತ್ರಿಭಾಷಾ ಸೂತ್ರದ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಮಂಗಳವಾರ ಕನಿಮೋಳಿ ಸೇರಿದಂತೆ ಡಿಎಂಕೆಯ ಸಂಸದರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ, ವಿಶೇಷವಾಗಿ, ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡುವ ಹುನ್ನಾರ ಎಂಬ ಆರೋಪಕ್ಕೆ ಗುರಿಯಾಗಿರುವ ತ್ರಿಭಾಷಾ ಸೂತ್ರವನ್ನು ಡಿಎಂಕೆ ವಿರೋಧಿಸುತ್ತಿದೆ.
ಕೇಂದ್ರ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ತಮಿಳುನಾಡಿನ ಮಕ್ಕಳ ಭವಿಷ್ಯವನ್ನು ಹಾಳುಗೆಡವಲು ಯತ್ನಿಸುತ್ತಿದೆ ಎಂದು ಡಿಎಂಕೆ ಸಂಸದೆ ಕನಿಮೋಳಿ ಆರೋಪಿಸಿದ್ದಾರೆ.
“ನಾವು ತ್ರಿಭಾಷಾ ಸೂತ್ರ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಹಿ ಮಾಡಬೇಕು ಎಂದು ಹೇಳುತ್ತಿರುವ ಕೇಂದ್ರ ಸರಕಾರ, ತಮಿಳುನಾಡಿಗೆ ನೀಡಬೇಕಾದ ಹಣವನ್ನು ತಡೆ ಹಿಡಿದಿದೆ. ಅವರು ತಮಿಳುನಾಡಿನ ಮಕ್ಕಳ ಭವಿಷ್ಯವನ್ನು ಹಾಳುಗೆಡವುತ್ತಿದ್ದಾರೆ. ತಮಿಳುನಾಡಿನ ಮಕ್ಕಳಿಗೆ ಬರಬೇಕಾದ ಅನುದಾನವನ್ನು ತಡೆಹಿಡಿಯುವ ಯಾವ ಅಧಿಕಾರವೂ ಅವರಿಗೆ ಇಲ್ಲ. ನಿನ್ನೆ ತಮಿಳುನಾಡಿನ ಜನರು ಅನಾಗರಿಕರು ಎಂದು ಹೇಳುವ ಮೂಲಕ ಸಚಿವ ಧರ್ಮೇಂದ್ರ ಪ್ರಧಾನ್ ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ನಾವು ಅವರಿಂದ ಇಂತಹ ಭಾಷೆಯನ್ನು ನಿರೀಕ್ಷಿಸಿರಲಿಲ್ಲ. ಇದು ಸಂಪೂರ್ಣವಾಗಿ ಅಪ್ರಜಾಸತ್ತಾತ್ಮಕವಾಗಿದ್ದು, ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ಕೆ.ಸುರೇಶ್, ರಾಜ್ಯ ಸರಕಾರಗಳು ಹಾಗೂ ಶಿಕ್ಷಣ ತಜ್ಞರನ್ನು ಸಂಪರ್ಕಿಸದೆ ಈ ನೀತಿಯನ್ನು ಹೇರಲಾಗುತ್ತಿದೆ ಎಂದು ಆರೋಪಿಸಿದರು. ಸರಕಾರದ ನೈಜ ಉದ್ದೇಶ ಇಡೀ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣವಾಗಿಸುವುದಾಗಿದೆ ಎಂದೂ ಅವರು ಆಪಾದಿಸಿದರು.
ಈ ಕುರಿತು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕೆ.ಸುರೇಶ್, “ಶಿಕ್ಷಣ ನೀತಿಯ ಮಾರ್ಪಾಡು ತುಂಬಾ ಗಂಭೀರ ವಿಷಯವಾಗಿದೆ. ರಾಜ್ಯ ಸರಕಾರಗಳು ಹಾಗೂ ಶಿಕ್ಷಣ ತಜ್ಞರನ್ನು ಸಂಪರ್ಕಿಸದೆ ಕೇಂದ್ರ ಸರಕಾರ ಈ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ತಮಿಳುನಾಡು ಮೊದಲಿನಿಂದಲೂ ತ್ರಿಭಾಷಾ ಸೂತ್ರವನ್ನು ವಿರೋಧಿಸುತ್ತಿದ್ದರೂ, ಅವರ ಸಹಮತ ಪಡೆಯದೆ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ. ತಮಿಳುನಾಡಿನ ನಮ್ಮ ಪಕ್ಷದ ಸದಸ್ಯರು ಈ ವಿಷಯದಲ್ಲಿ ಡಿಎಂಕೆಯನ್ನು ಬೆಂಬಲಿಸಲಿದ್ದಾರೆ” ಎಂದು ಹೇಳಿದ್ದಾರೆ.