ಕೋಟಾ ಆತ್ಮಹತ್ಯೆಗಳಿಗೂ ನೀಟ್ ಫಲಿತಾಂಶಗಳಿಗೂ ಸಂಬಂಧ ಕಲ್ಪಿಸಬೇಡಿ: ಸುಪ್ರೀಂ ಕೋರ್ಟ್
►ನೀಟ್ ಅವ್ಯವಹಾರಗಳ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ನೋಟಿಸ್ ಜಾರಿ ► ನೀಟ್ ಕೌನ್ಸೆಲಿಂಗ್ಗೆ ತಡೆ ಹೇರಲು ಸುಪ್ರೀಂ ನಕಾರ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಕೋಚಿಂಗ್ ಸಂಸ್ಥೆಗಳ ಆರವಾಗಿರುವ ಕೋಟಾದಿಂದ ವರದಿಯಾದ ಆತ್ಮಹತ್ಯೆ ಘಟನೆಗಳು ನೀಟ್-ಯುಜಿ 2024 ಫಲಿತಾಂಗಳಿಂದಾಗಿಲ್ಲ, ನೀಟ್ ಪರೀಕ್ಷೆಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳ ಕುರಿತಂತೆ ಸಿಬಿಐ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿದವರು ಇಂತಹ ಭಾವನಾತ್ಮಕ ವಾದಗಳನ್ನು ಮಂಡಿಸಬಾರದು ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ಕೋಟಾದಲ್ಲಿರುವ ಕೋಚಿಂಗ್ ಸೆಂಟರ್ಗಳ ವಿದ್ಯಾರ್ಥಿಗಳು ಆತ್ಮಹತ್ಯೆಗೈಯ್ಯುತ್ತಿದ್ದಾರೆ ಎಂದು ಅರ್ಜಿದಾರರಲ್ಲೊಬ್ಬರ ವಕೀಲರು ಹೇಳಿದಾಗ ಆಕ್ಷೇಪಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಮೇಲಿನಂತೆ ಹೇಳಿದೆ.
ನೀಟ್ ಕೌನ್ಸೆಲಿಂಗ್ಗೆ ತಡೆ ಹೇರುವುದಿಲ್ಲ ಎಂದೂ ಸುಪ್ರಿಂ ಕೋರ್ಟ್ ಹೇಳಿದೆ.
ನೀಟ್ ಅವ್ಯವಹಾರಗಳ ಕುರಿತು ತನಿಖೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ನೋಟಿಸ್ ಜಾರಿಗೊಳಿಸಿದೆ. ನ್ಯಾಷನಲ್ ಟೆಸ್ಟಿಂಗ್ ಏಜನ್ಸಿಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದರೆ, ಇತರ ಪ್ರತಿವಾದಿಯಾಗಿರುವ ಕೇಂದ್ರಕ್ಕೆ ಮುಂದಿನ ವಿಚಾರಣಾ ದಿನಾಂಕವಾದ ಜುಲೈ 8ರ ತನಕ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ.
ಅರ್ಜಿದಾರರು ಸಿಬಿಐ ತನಿಖೆಗೆ ಕೋರಿರುವುದರಿಂದ ಎನ್ಟಿಎ ಪ್ರತಿಕ್ರಿಯೆ ದೊರೆಯದೆ ಆದೇಶ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.