ದೆಹಲಿಯಲ್ಲಿ ಆಮ್ ಆದ್ಮಿ ಕಳೆದುಕೊಂಡ ಮತ ಪ್ರಮಾಣ ಎಷ್ಟು ಗೊತ್ತೇ?

PC: x.com/9670amitpandey
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಹತ್ತು ವರ್ಷಗಳ ಆಡಳಿತ ಅಂತ್ಯಗೊಂಡಿದ್ದು, ಎರಡು ಚುನಾವಣೆಗಳಲ್ಲಿ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದ್ದ ಎಎಪಿ ಈ ಬಾರಿ ಹೀನಾಯ ಸೋಲು ಕಂಡಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಪಕ್ಷ ಶೇಕಡ 10ರಷ್ಟು ಮತಗಳನ್ನು ಕಳೆದುಕೊಂಡಿರುವುದು ಈ ಬಾರಿಯ ಸೋಲಿಗೆ ಪ್ರಮುಖ ಕಾರಣ. ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ಕಳೆದ ಮೂರು ಚುನಾವಣೆಗಳಲ್ಲಿ ಪಡೆದ ಮತಗಳ ಅಂತರದ ವಿವರ ಇಲ್ಲಿದೆ.
2025ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇಕಡ 45.76ರಷ್ಟು ಮತಗಳನ್ನು ಪಡೆದಿದ್ದು, ಆಮ್ ಆದ್ಮಿ ಪಕ್ಷ ಶೇಕಡ 43.55 ಹಾಗೂ ಕಾಂಗ್ರೆಸ್ ಪಕ್ಷ ಶೇಕಡ 6.36ರಷ್ಟು ಪಾಲು ಗಳಿಸಿವೆ. ಕಳೆದ ಚುನಾವಣೆಯಲ್ಲಿ 62 ಸ್ಥಾನಗಳನ್ನು ಗೆದ್ದಿದ್ದ ಆಮ್ ಆದ್ಮಿ ಪಕ್ಷದ ಮತಗಳಿಕೆ ಶೇಕಡ 53.57ರಷ್ಟಾಗಿತ್ತು. ಈ ಬಾರಿ ಕೇವಲ 22 ಸ್ಥಾನಗಳನ್ನು ಗೆದಿದ್ದು, ಶೇಕಡ 10ರಷ್ಟು ಮತ ಕಳೆದುಕೊಂಡಿರುವುದರಿಂದ 40 ಸ್ಥಾನಗಳು ನಷ್ಟವಾಗಿವೆ.
ಕಳೆದ ಚುನಾವಣೆಯಲ್ಲಿ ಅಂದರೆ 2020ರಲ್ಲಿ ಬಿಜೆಪಿಯ ಗಳಿಕೆ ಶೇಕಡ 38.51 ಆಗಿದ್ದು, ಈ ಬಾರಿ ಶೇಕಡ 7ರಷ್ಟು ಅಧಿಕ ಮತ ಪಡೆದು 40 ಸ್ಥಾನಗಳನ್ನು ಹೆಚ್ಚುವರಿಯಾಗಿ ಬುಟ್ಟಿಗೆ ಹಾಕಿಕೊಂಡಿದೆ. ಕಾಂಗ್ರೆಸ್ ಪಕ್ಷ ತನ್ನ ಮತ ಗಳಿಕೆಯನ್ನು ಶೇಕಡ 4.6ರಿಂದ 6.36ಕ್ಕೆ ಹೆಚ್ಚಿಸಿಕೊಂಡು ಆಮ್ ಆದ್ಮಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಮುಸ್ಲಿಂ ಬಾಹುಳ್ಯದ ಏಳು ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಆರು ಸ್ಥಾನಗಳನ್ನು ಗೆದ್ದರೂ, ಮುಸ್ಲಿಂ ಮತಗಳಲ್ಲಿ ವಿಭಜನೆಯಾಗಿರುವುದನ್ನು ಚುನಾವಣಾ ಫಲಿತಾಂಶ ಸ್ಪಷ್ಟಪಡಿಸುತ್ತದೆ. ದೆಹಲಿ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಈ ಬಾರಿ ಐದಕ್ಕೆ ಇಳಿದಿದೆ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯದ ಎಲ್ಲ ಏಳು ಕ್ಷೇತ್ರಗಳಲ್ಲಿ ಕೇಜ್ರಿವಾಲ್ ಪಕ್ಷ ಜಯ ಸಾಧಿಸಿತ್ತು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28