ಅಮೇಥಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಲ್.ಶರ್ಮಾ ಯಾರು ಗೊತ್ತೇ?
ಕೆ.ಎಲ್.ಶರ್ಮಾ | PC: ANI
ಅಮೇಥಿ: ಕಾಂಗ್ರೆಸ್ ಮುಖಂಡ ಕಿಶೋರ್ ಲಾಲ್ ಶರ್ಮಾ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. 2019ರ ವರೆಗೂ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ರಾಹುಲ್ ಎರಡು ಕ್ಷೇತ್ರಗಳಿಂದಲೂ ಸೋಲುತ್ತಾರೆ ಎಂದು ಬಿಜೆಪಿ ಹೇಳಿಕೆ ನೀಡಿತ್ತು.
2004ರಿಂದ 2019ರವರೆಗೆ ರಾಹುಲ್ಗಾಂಧಿ ಲೋಕಸಭೆಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಬಾರಿ ಅವರು ಪಕ್ಷದ ಮತ್ತೊಂದು ಭದ್ರಕೋಟೆ ರಾಯ್ ಬರೇಲಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.
ಸೋನಿಯಾ ಗಾಂಧಿಯವರು 2004 ರಿಂದ 2024ರವರೆಗೂ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅವರು ತಮ್ಮ ಸ್ಥಾನವನ್ನು ತೆರವುಗೊಳಿಸಿ ರಾಜ್ಯಸಭಾ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದರು. ಈ ಕ್ಷೇತ್ರದಿಂದ ಪ್ರಿಯಾಂಕಾ ಸ್ಪರ್ಧಿಸುತ್ತಾರೆ ಎಂಬ ವದಂತಿ ಹಬ್ಬಿತ್ತು.
ಇದೀಗ ಅಮೇಥಿಯಿಂದ ಸ್ಪರ್ಧಿಸಿರುವ ಕೆ.ಎಲ್.ಶರ್ಮಾ ಗಾಂಧಿ ಕುಟುಂಬದ ನಿಷ್ಠಾವಂತ ಮುಖಂಡ. ಇವರು ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿಯವರ ಕ್ಷೇತ್ರ ಪ್ರತಿನಿಧಿಯಾಗಿದ್ದರು. ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳಿಗೆ ಈ ಎರಡು ಕ್ಷೇತ್ರಗಳಲ್ಲಿ ಅವರು ಸಂಪರ್ಕ ವ್ಯಕ್ತಿಯಾಗಿದ್ದರು.
ಈ ಬಾರಿ ಸ್ಮೃತಿ ಇರಾನಿಯವರನ್ನು ಎದುರಿಸಲಿರುವ ಕೆ.ಎಲ್.ಶರ್ಮಾ ಪಂಜಾಬ್ ಮೂಲದವರು. 1983ರಲ್ಲಿ ಅಮೇಥಿಗೆ ಕಾಂಗ್ರೆಸ್ ಕಾರ್ಯಕರ್ತರಾಗಿ ಆಗಮಿಸಿದರು. ರಾಜೀವ್ ಗಾಂಧಿಯವರ ನಿಕಟವರ್ತಿಯಾಗಿದ್ದ ಅವರು, 1991ರಲ್ಲಿ ರಾಜೀವ್ ಹತ್ಯೆ ಬಳಿಕ, ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. 1990ರ ದಶಕದಲ್ಲಿ ಗಾಂಧಿ ಕುಟುಂಬ ಚುನಾವಣಾ ರಾಜಕೀಯದಿಂದ ಹೊರಗಿದ್ದಾಗ ಇತರ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದರು.
ಅಮೇಥಿಯಿಂದ 1999ರಲ್ಲಿ ಸೋನಿಯಾ ಮೊದಲ ಬಾರಿಗೆ ಗೆಲುವು ಸಾಧಿಸಲು ಶರ್ಮಾ ನೆರವಾಗಿದ್ದರು. ಬಳಿಕ ಅಮೇಥಿ ತೊರೆದು ರಾಯ್ ಬರೇಲಿಗೆ ಸೋನಿಯಾ ಆಗಮಿಸಿದಾಗ ಅವರು ಕೂಡಾ ರಾಯ್ ಬರೇಲಿಗೆ ಆಗಮಿಸಿದ್ದರು.
2004ರಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದ ಲೋಕಸಭೆಗೆ ಆಯ್ಕೆಯಾದಾಗ ಕೆ.ಎಲ್.ಶರ್ಮಾ ಎರಡೂ ಕ್ಷೇತ್ರಗಳನ್ನು ನಿಭಾಯಿಸುತ್ತಾ ಬಂದಿದ್ದರು. ಬಿಹಾರ ಹಾಗೂ ಪಂಜಾಬ್ನಲ್ಲೂ ಪಕ್ಷಕ್ಕಾಗಿ ದುಡಿದಿದ್ದಾರೆ. ಅಮೇಥಿ ಹಾಗೂ ರಾಯಬರೇಲಿಯಲ್ಲಿ ಮೇ 20ರಂದು ಮತದಾನ ನಡೆಯಲಿದೆ.