ಲೋಕಸಭಾ ಚುನಾವಣೆ: ವಯನಾಡ್ ನಲ್ಲಿ ರಾಹುಲ್ ಗಾಂಧಿಗೆ ಬಿಜೆಪಿ ಎದುರಾಳಿ ಯಾರು ಗೊತ್ತೇ?
Rahul Gandhi (Photo: PTI )
ಕೊಚ್ಚಿನ್: ಅಚ್ಚರಿಯ ನಡೆಯೊಂದರಲ್ಲಿ ಭಾರತೀಯ ಜನತಾ ಪಕ್ಷ, ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರನ್ನು ವಯನಾಡ್ ಕ್ಷೇತ್ರದಿಂದ ಕಣಕ್ಕೆ ಇಳಿಸಿದೆ. ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಮತ್ತು ಸಿಪಿಐನ ಆ್ಯನಿ ರಾಜಾ ಈ ಕ್ಷೇತ್ರದಲ್ಲಿ ಈಗಾಗಲೇ ಸ್ಪರ್ಧೆಯಲ್ಲಿದ್ದು, ಪ್ರಬಲ ತ್ರಿಕೋನ ಸ್ಪರ್ಧೆಗೆ ಕ್ಷೇತ್ರ ಸಜ್ಜಾಗಿದೆ.
ಕೇರಳದ ಉಳಿದ ಮೂರು ಕ್ಷೇತ್ರಗಳಿಗೂ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಅಂತಿಮಪಡಿಸಿದ್ದು, ಎರ್ನಾಕುಲಂದಿಂದ ಡಾ.ಕೆ.ಎಸ್.ರಾಧಾಕೃಷ್ಣನ್, ಅಳತ್ತೂರು ಕ್ಷೇತ್ರದಿಂದ ಡಾ.ಟಿ.ಎನ್.ಸರಸು ಹಾಗೂ ಕೊಲ್ಲಂನಿಂದ ನಟ ಜಿ.ಕೃಷ್ಣಕುಮಾರ್ ಸ್ಪರ್ಧಿಸುತ್ತಿದ್ದಾರೆ.
ಇಂಡಿಯಾ ಮೈತ್ರಿಕೂಟದ ಎರಡು ಘಟಕ ಪಕ್ಷಗಳಿಂದ ಪರಸ್ಪರ ವಾಕ್ಸಮರ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಯನಾಡ್ ಕ್ಷೇತ್ರ ಇಡೀ ದೇಶದ ಗಮನ ಸೆಳೆಯುತ್ತಿದೆ. ರಾಹುಲ್ಗಾಂಧಿ ಸ್ಪರ್ಧೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಸಿಪಿಐ ಪರಸ್ಪರ ಸೆಣೆಸಲಿವೆ. ಈ ಬೆಟ್ಟ ಕ್ಷೇತ್ರದಲ್ಲಿ ದೊಡ್ಡ ಹೋರಾಟಕ್ಕೆ ಬಿಜೆಪಿ ಸಜ್ಜಾಗಿದೆ ಎಂಬ ಪ್ರಬಲ ಸಂದೇಶವನ್ನು ಬಿಜೆಪಿ ಸುರೇಂದ್ರನ್ ಆಯ್ಕೆ ಮೂಲಕ ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2020ರ ಫೆಬ್ರುವರಿಯಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸುರೇಂದರ್ನ್, 2019ರಲ್ಲಿ ಪಟ್ಟಣಂತಿಟ್ಟ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್ ಹಾಗೂ ಸಿಪಿಎಂ ಬಳಿಕ ಮೂರನೇ ಸ್ಥಾನ ಪಡೆದಿದ್ದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಸುರೇಂದ್ರನ್ ಕೊನ್ನಿ ಹಾಗೂ ಮಂಜೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿ ಕ್ರಮವಾಗಿ 32811 ಹಾಗೂ 67 ಸಾವಿರ ಮತಗಳನ್ನು ಪಡೆದಿದ್ದರು.
ಕೋಝಿಕ್ಕೋಡ್ ಜಿಲ್ಲೆಯ ಉಳ್ಳಿಯೇರಿಯಲ್ಲಿ ಜನಿಸಿದ ಸುರೇಂದ್ರನ್, ಕಳೆದ 10 ವರ್ಷಗಳಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು.