ಮಧ್ಯ ಪ್ರದೇಶದಲ್ಲಿ ಪ್ರವಾಹ: ಫೋನ್ ಮೂಲಕವೇ ಮಹಿಳೆಯ ಹೆರಿಗೆಗೆ ನೆರವು ನೀಡಿದ ವೈದ್ಯೆ
ʼತ್ರೀ ಈಡಿಯಟ್ಸ್ʼ ಸಿನಿಮಾ ನೆನಪಿಸಿದ ಘಟನೆ
Photo credit: IANS
ಸಿಯೋನಿ (ಮಧ್ಯಪ್ರದೇಶ): ‘ತ್ರೀ ಈಡಿಯಟ್ಸ್’ ಸಿನಿಮಾ ನೋಡಿದವರಿಗೆ ಚಿತ್ರದ ನಾಯಕ ನಟ ಅಮೀರ್ ಖಾನ್ ಫೋನ್ ಸೂಚನೆಯ ಮೂಲಕವೇ ಮಹಿಳೆಯೊಬ್ಬರಿಗೆ ಸುರಕ್ಷಿತ ಹೆರಿಗೆ ಮಾಡಿಸುವ ದೃಶ್ಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ಅಂತಹುದೇ ಸಿನಿಮೀಯ ಘಟನೆಯೊಂದು ನೆರೆಪೀಡಿತ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ ಎಂದು ಆರೋಗ್ಯಾಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಗ್ರಾಮದ ರಸ್ತೆಗಳೆಲ್ಲ ಪ್ರವಾಹಪೀಡಿತವಾಗಿ, ಯಾರೂ ಹೊರಗೆ ಹೆಜ್ಜೆ ಇಡಲು ಸಾಧ್ಯಸವಾಗದಂಥ ಸಂದರ್ಭ ಸೃಷ್ಟಿಯಾಗಿದ್ದಾಗ, ವೈದ್ಯರೊಬ್ಬರು, ಹಂತಹಂತವಾಗಿ ಗರ್ಭಿಣಿ ಮಹಿಳೆಯೊಬ್ಬಳ ಹೆರಿಗೆಗೆ ಸಲಹೆ ಸೂಚನೆಗಳನ್ನು ನೀಡಿ, ಸುರಕ್ಷಿತ ಹೆರಿಗೆಯಾಗಲು ಸಹಕರಿಸಿದ್ದಾರೆ.
ಸೋಮವಾರ ಜೋರವಾಡಿ ಗ್ರಾಮದಲ್ಲಿ ಪ್ರವಾಹದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ರವೀನಾ ಉಯ್ಕೆ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಆಕೆಯ ಕುಟುಂಬದ ಸದಸ್ಯರು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಆದರೆ, ರಸ್ತೆಗಳೆಲ್ಲ ನೀರಿನಿಂದ ಜಲಾವೃತಗೊಂಡಿದ್ದುದರಿಂದ ಅದು ಸಾಧ್ಯವಾಗಿಲ್ಲ. ಆಗ ವೈದ್ಯರೊಬ್ಬರು ಗ್ರಾಮಕ್ಕೆ ತೆರಳಲು ಸಾಧ್ಯವಾಗದ ಕಾರಣ, ಸೂಲಗಿತ್ತಿಗೆ ಫೋನ್ ನಲ್ಲೇ ಹಂತಹಂತವಾಗಿ ಹೆರಿಗೆಯ ವಿಧಾನದ ಕುರಿತು ಸಲಹೆಗಳನ್ನು ನೀಡಿದ್ದಾರೆ. ಕೊನೆಗೆ ಆ ಗರ್ಭಿಣಿ ಮಹಿಳೆಗೆ ಸುರಕ್ಷಿತ ಹೆರಿಗೆಯಾಗಿದ್ದು, ತಾಯಿ ಮತ್ತು ಅವಳಿ ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರವಾಹದ ಪ್ರಮಾಣವು ತಗ್ಗಿ, ರಸ್ತೆಗಳು ವಾಹನ ಚಾಲನೆಗೆ ಯೋಗ್ಯವಾದ ನಂತರ, ಬಾಣಂತಿ ಮಹಿಳೆ ಹಾಗೂ ಆಕೆಯ ಇಬ್ಬರು ನವಜಾತ ಅವಳಿ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪರೂಪದ ಹೆರಿಗೆಯಲ್ಲಿ ಪಾಲ್ಗೊಂಡ ಡಾ. ಸಿರ್ಸಮ್ ಹಾಗೂ ಸೂಲಗಿತ್ತಿ ರೇಶ್ನಾ ವಂಶ್ಕರ್ ಅವರ ವೃತ್ತಿಪರತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯಾಧಿಕಾರಿಯೊಬ್ಬರು, “ತ್ರೀ ಈಡಿಯಟ್ಸ್ ಸಿನಿಮಾದಲ್ಲಿ ಹೆರಿಗೆ ಮಾಡಿಸಲು ಕಾಲ್ಪನಿಕವಾಗಿ ವ್ಯಾಕ್ಯೂಮ್ ಕ್ಲೀನರ್ ಅನ್ನು ಬಳಸಲಾಗಿದ್ದರೂ, ಸಿಯೋನಿಯಲ್ಲಿನ ಹೆರಿಗೆಯು ಕೊಂಚ ನೈಜವಾಗಿತ್ತು” ಎಂದು ಹೇಳಿದ್ದಾರೆ.