ಕೇಂದ್ರ ಸರಕಾರ ನಿರ್ಧಿಷ್ಟ ಧರ್ಮಕ್ಕೆ ಸೇರಿದೆಯೇ?: ಸಂಸತ್ತಿನಲ್ಲಿ ಎಐಎಂಐಎಂ ನಾಯಕ ಉವೈಸಿ ಪ್ರಶ್ನೆ
“ದೇಶಕ್ಕೆ ಬಾಬಾ ಮೋದಿಯ ಅಗತ್ಯವಿಲ್ಲ”
ಅಸಾದುದ್ದೀನ್ ಉವೈಸಿ Photo : NDTV
ಹೊಸ ದಿಲ್ಲಿ: “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವೇನಾದರೂ ನಿರ್ದಿಷ್ಟ ಸಮುದಾಯ, ಧರ್ಮಕ್ಕೆ ಸೇರಿದೆಯೆ ಅಥವಾ ಇಡೀ ದೇಶಕ್ಕೆ ಸೇರಿದೆಯೆ?” ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ರಾಜ್ಯಸಭೆಯಲ್ಲಿ ನಡೆದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕೆ ಬಾಬಾ ಮೋದಿಯ ಅಗತ್ಯವಿಲ್ಲ ಎಂದೂ ವ್ಯಂಗ್ಯವಾಡಿದ್ದಾರೆ. ರಾಮಮಂದಿರ ನಿರ್ಮಾಣ ಹಾಗೂ ಜನವರಿ 22ರಂದು ನಡೆದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಉವೈಸಿ, “ಭಾರತ ಸರಕಾರಕ್ಕೇನಾದರೂ ಧರ್ಮವಿದೆಯೆ?” ಎಂದೂ ಪ್ರಶ್ನಿಸಿದರು.
“ಈ ದೇಶಕ್ಕೆ ಯಾವುದೇ ಧರ್ಮವಿಲ್ಲ ಎಂದು ನಾನು ಭಾವಿಸಿದ್ದೇನೆ. ಜನವರಿ 22ರ ಹೊರತಾಗಿಯೂ, ಈ ಸರಕಾರವೇನಾದರೂ ಒಂದು ಧರ್ಮವು ಇತರ ಧರ್ಮಗಳ ಮೇಲೆ ದಿಗ್ವಿಜಯ ಸಾಧಿಸಿದೆ ಎಂಬ ಸಂದೇಶ ನೀಡಲು ಹೊರಟಿದೆಯೆ? ಈ ದೇಶದ 17 ಕೋಟಿ ಮುಸ್ಲಿಮರಿಗೆ ನೀವೇನು ಸಂದೇಶ ನೀಡಲಿದ್ದೀರಿ?” ಎಂದು ಉವೈಸಿ ಹರಿಹಾಯ್ದರು.
“ನಾನೇನಾದರೂ ಬಾಬರ್, ಜಿನ್ನಾ ಅಥವಾ ಔರಂಗಜೇಬನ ವಕ್ತಾರನೆ? ನಾನು ಶ್ರೀರಾಮನನ್ನು ಗೌರವಿಸುತ್ತೇನಾದರೂ, ತಮ್ಮ ಕೊನೆಯ ಪದವನ್ನು ‘ಹೇ ರಾಮ್’ ಎಂದು ಉಚ್ಚರಿಸಿದ್ದ ವ್ಯಕ್ತಿಯನ್ನು ಹತ್ಯೆಗೈದ ನಾಥೂರಾಂ ಗೋಡ್ಸೆಯನ್ನು ನಾನು ದ್ವೇಷಿಸುತ್ತೇನೆ” ಎಂದು ಅವರು ಹೇಳಿದರು.
ವಂದನಾ ನಿರ್ಣಯದ ಮೇಲಿನ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವುದಕ್ಕೂ ಮುನ್ನ, “ಬಾಬ್ರಿ ಮಸೀದಿ ಝಿಂದಾಬಾದ್.. ಬಾಬ್ರಿ ಮಸೀದಿ ಹಿಂದೆ, ಮುಂದೆ ಹಾಗೂ ಎಂದೆಂದಿಗೂ ಉಳಿಯಲಿದೆ” ಎಂದು ಉವೈಸಿ ಘೋಷಿಸಿದರು.