ಬಿಜೆಪಿಯ 'ಮಹಾ ಪ್ರಯೋಗ' ದಿಂದ ಆತಂಕದಲ್ಲಿ ಜೆಡಿಯು!
ನಿತೀಶ್ ಕುಮಾರ್ | PC : PTI
ಪಾಟ್ನಾ: ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಬಹುಮತ ಪಡೆದುಕೊಂಡು ಬಿಜೆಪಿ ನಾಯಕ ದೇವೇಂದ್ರ ಪಡ್ನವೀಸ್ ಮುಖ್ಯಮಂತ್ರಿಯಾಗಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದಲ್ಲಿ ಮಹಾಯುತಿ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಚುನಾವಣೆಯನ್ನು ಎದುರಿಸಿದ್ದರೂ, ಆ ಬಳಿಕದ ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳು ಬಿಹಾರದ ಮೇಲೆ ಕರಿನೆರಳು ಬೀರುವ ಸಾಧ್ಯತೆ ಇದೆ ಎಂದು Times of India ವರದಿ ಮಾಡಿದೆ.
2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ನಾಯಕತ್ವದಲ್ಲಿ ಎನ್ ಡಿಎ ಮೈತ್ರಿಕೂಟ ಚುನಾವಣೆ ಎದುರಿಸಿದರೂ, ಬಿಜೆಪಿಯು ಬಿಹಾರದ 243 ಕ್ಷೇತ್ರಗಳಲ್ಲಿ 122ರ ಬಹುಮತದ ಅಂಕಿ-ಅಂಶವನ್ನು ಸಮೀಪಿಸಿದರೆ ಮಹಾರಾಷ್ಟ್ರದಲ್ಲಿ ಮಾಡಿದ ತಂತ್ರವನ್ನೇ ಪುನರಾವರ್ತಿಸಬಹುದೇ ಎನ್ನುವುದು ಈಗ ಜೆಡಿಯು ಮುಂದಿರುವ ಪ್ರಶ್ನೆಯಾಗಿದೆ.
ಬಿಹಾರದಂತೆ ಸಮ್ಮಿಶ್ರ ಮಾದರಿಯ ಅಧಿಕಾರ ಹಂಚಿಕೆ ಕುರಿತು ಶಿಂಧೆ ಅವರ ಪ್ರಸ್ತಾಪವನ್ನು ಬಿಜೆಪಿ ತಿರಸ್ಕರಿಸಿದೆ ಎಂದು ಜೆಡಿಯು ಹಿರಿಯ ನಾಯಕರು ಹೇಳಿದ್ದಾರೆ. ಬಿಹಾರದಲ್ಲಿ ನಿತೀಶ್ ಅವರು ಬಿಜೆಪಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದ್ದರೂ ಕೂಡ ಸಿಎಂ ಹುದ್ದೆಯನ್ನು ಅವರಿಗೆ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಮಹಾಯುತಿ ಮೈತ್ರಿಕೂಟವನ್ನು ಮುನ್ನಡೆಸಿದ್ದರು. ಏಕನಾಥ್ ಶಿಂಧೆ ಅಧಿಕಾರಕ್ಕೆ ಮರಳುವ ಭರವಸೆ ಹೊಂದಿದ್ದರು. 2020ರ ಬಿಹಾರ ಚುನಾವಣೆಯಲ್ಲಿ, ಜೆಡಿಯು ಕೇವಲ 43 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿತ್ತು. ಬಿಜೆಪಿ 74 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿತ್ತು. ಬಿಜೆಪಿಗಿಂತ ಜೆಡಿಯು 31 ಸ್ಥಾನಗಳನ್ನು ಕಡಿಮೆ ಪಡೆದುಕೊಂಡಿದ್ದರೂ ಜೆಡಿಯುಗೆ ಸಿಎಂ ಸ್ಥಾನವನ್ನು ನೀಡಲಾಗಿದೆ. ಆದರೆ ಇದೀಗ ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳ ಬಳಿಕ ಬಿಹಾರದಲ್ಲಿನ ರಾಜಕೀಯದ ಬಗ್ಗೆ ಚರ್ಚೆ ನಡೆಯುತ್ತಿದೆ.
ಜೆಡಿ(ಯು) ಹಿರಿಯ ನಾಯಕರೋರ್ವರು ಮಾತನಾಡುತ್ತಾ, ನಿತೀಶ್ ಅವರು ಅಧಿಕಾರದ ದಾಹ ಹೊಂದಿಲ್ಲ. ಪಕ್ಷದ ಕಳಪೆ ಪ್ರದರ್ಶನದಿಂದಾಗಿ 2020ರಲ್ಲಿ ಸಿಎಂ ಆಗಲು ಆರಂಭದಲ್ಲಿ ಅವರು ನಿರಾಕರಿಸಿದ್ದರು. ಆದರೆ, ಬಿಜೆಪಿ ನಾಯಕರಾದ ರಾಜನಾಥ್ ಸಿಂಗ್, ಜೆಪಿ ನಡ್ಡಾ ಮತ್ತು ಭೂಪೇಂದ್ರ ಯಾದವ್ ಅವರು ಜವಾಬ್ದಾರಿಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು ಎಂದು ಹೇಳಿದ್ದಾರೆ.
ಇನ್ನೋರ್ವ ಜೆಡಿಯು ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಿ ಬಿಹಾರದ ರಾಜಕೀಯವು ವಿಭಿನ್ನವಾಗಿದೆ. ಶಿವಸೇನೆಯ ಎರಡೂ ಬಣಗಳು ಹಿಂದುತ್ವವನ್ನು ಅನುಸರಿಸುವುದರಿಂದ ಶಿಂಧೆ ಅವರಿಗೆ ಆಯ್ಕೆಗಳ ಕೊರತೆಯಿದೆ ಮತ್ತು ಅವರ ಸಾಮಾಜಿಕ ತಳಹದಿ ಜೆಡಿಯುಗಿಂತ ದುರ್ಬಲವಾಗಿದೆ ಎಂದು ಹೇಳಿದ್ದಾರೆ.
ರಾಜಕೀಯ ವಿಶ್ಲೇಷಕ ಡಿ.ಎಂ.ದಿವಾಕರ್ ಮಾತನಾಡಿ, ಬಿಜೆಪಿ ವಿವಿಧ ತಂತ್ರಗಳ ಮೂಲಕ ನಿತೀಶ್ ಅವರನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ನಿತೀಶ್ ಮತ್ತು ಬಿಜೆಪಿ ಒಬ್ಬರನ್ನೊಬ್ಬರು ನಂಬುವುದಿಲ್ಲ ಎಂದು ಹೇಳಿದ್ದಾರೆ.