ಡಾಲರ್ ಕನಸು ನುಚ್ಚುನೂರು: ಭಾರತಕ್ಕೆ ಮತ್ತೆ 112 ಅಕ್ರಮ ವಲಸಿಗರ ಗಡಿಪಾರು

PC: x.com/abplive
ಅಮೃತಸರ: ಡಾಲರ್ ಗಳಿಕೆಯ ಕನಸಿನ ಬೆನ್ನತ್ತಿ ಅಮೆರಿಕ ಸೇರಿದ್ದ 112 ಮಂದಿ ಅಕ್ರಮ ವಲಸಿಗರನ್ನು ಕರೆತಂದ ಮೂರನೇ ವಿಮಾನ ಭಾನುವಾರ ರಾತ್ರಿ 10.05ಕ್ಕೆ ಅಮೃತಸರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.
ಇದರಿಂದ ವಾರಾಂತ್ಯದಲ್ಲಿ 228 ಮಂದಿ ಅಕ್ರಮ ವಲಸಿಗರನ್ನು ಅಮೆರಿಕ ಭಾರತಕ್ಕೆ ವಾಪಾಸು ಕಳುಹಿಸಿದಂತಾಗಿದೆ. ಟ್ರಂಪ್ ಆಡಳಿತ ಅಧಿಕಾರ ವಹಿಸಿಕೊಂಡ ಬಳಿಕ ಫೆಬ್ರುವರಿ 5ರಂದು ಆರಂಭವಾದ ಕಾರ್ಯಾಚರಣೆಯಲ್ಲಿ ಒಟ್ಟು 332 ಮಂದಿ ಭಾರತಕ್ಕೆ ಇದುವರೆಗೆ ಗಡಿಪಾರುಗೊಂಡಿದ್ದಾರೆ.
ಮೂರನೇ ಬ್ಯಾಚ್ ನಲ್ಲಿ ಹರ್ಯಾಣದ 44 ಮಂದಿ, ಗುಜರಾತ್ ನ 31 ಮಂದಿ, ಪಂಜಾಬ್ ನ 31 ಮಂದಿ, ಉತ್ತರ ಪ್ರದೇಶದ ಇಬ್ಬರು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಇಬ್ಬರು ಸೇರಿದ್ದಾರೆ ಎಂದು ಮೂಲಗಳು ಹೇಳಿವೆ. ರಾಜ್ಯವಾರು ಮಾಹಿತಿಯ ಬಗ್ಗೆ ಅಧಿಕೃತ ಅಂಕಿ ಅಂಶಗಳು ಬಹಿರಂಗವಾಗಿಲ್ಲ. ಪಂಜಾಬ್ ನ 65 ಮಂದಿ ಸೇರಿದಂತೆ 119 ಮಂದಿಯನ್ನು ಹೊತ್ತು ತಂದ ಅಮೆರಿಕದ ಸೇನಾ ವಿಮಾನ ಶನಿವಾರ ರಾತ್ರಿ ಬಂದಿಳಿದಿತ್ತು.
ಗಡಿಪಾರುಗೊಂಡವರನ್ನು ತಮ್ಮ ತಮ್ಮ ಹುಟ್ಟೂರಿಗೆ ಕರೆದೊಯ್ಯಲು ಹರ್ಯಾಣ ಸರ್ಕಾರ ಜೈಲು ವಾಹನಗಳನ್ನು ಕಳುಹಿಸಿದ ಕ್ರಮವನ್ನು ಪಂಜಾಬ್ ಸರ್ಕಾರ ಟೀಕಿಸಿದ ಬಳಿಕ, ಬಿಜೆಪಿ ನೇತೃತ್ವದ ಸರ್ಕಾರ ಹೊಸದಾಗಿ ಬಂದವರನ್ನು ಕರೆದೊಯ್ಯಲು ವೋಲ್ವೋ ಬಸ್ ಗಳನ್ನು ಕಳುಹಿಸಿದೆ. ಹಿಂದಿನ ಎರಡು ಬ್ಯಾಚ್ ಗಳ ಆಗಮನ ಸಂದರ್ಭದಲ್ಲಿ ಇದ್ದಂತೆ, ಭಾನುವಾರ ರಾತ್ರಿ ಭಗವಂತ್ ಮಾನ್ ಸರ್ಕಾರದ ಯಾವ ಪ್ರತಿನಿಧಿಗಳೂ ವಿಮಾನ ನಿಲ್ದಾಣದಲ್ಲಿ ಹಾಜರಿರಲಿಲ್ಲ. ಸ್ವದೇಶಕ್ಕೆ ಮರಳಿದವರ ಕುಟುಂಬದವರು ಕೂಡಾ ಹಾಜರಿರಲಿಲ್ಲ. ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರು ಫೆಬ್ರುವರಿ 5ರಂದು ಮೊದಲ ಬ್ಯಾಚನ್ನು ಕರೆಸಿಕೊಂಡಿದ್ದರು. ಶನಿವಾರದ ತಂಡವನ್ನು ಸಂಪುಟ ಸಹೋದ್ಯೋಗಿ ಹರ್ಭಜನ್ ಸಿಂಗ್ ಸ್ವಾಗತಿಸಿದ್ದರು.
ಫೆಬ್ರುವರಿ 5ರಂದು ಆಗಮಿಸಿದ್ದ ಎಲ್ಲ 104 ಮಂದಿಗೆ ಕೈಕೋಳ ತೊಡಿಸಿ ಕಾಲುಗಳನ್ನು ಸರಪಣಿಯಿಂದ ಬಿಗಿಯಲಾಗಿತ್ತು. 119 ಮಂದಿಯನ್ನು ಕರೆತಂದ ಎರಡನೇ ವಿಮಾನದಲ್ಲಿ ಪುರುಷರನ್ನು ಹೊರತುಪಡಿಸಿ ಎಲ್ಲ ಮಹಿಳೆಯರು ಮತ್ತು ಮಕ್ಕಳನ್ನು ಸರಪಣಿಯಿಂದ ಬಿಗಿಯಲಾಗಿತ್ತು. ಗಡಿಪಾರುಗೊಂಡವರನ್ನು ಉತ್ತಮವಾಗಿ ನಡೆಸಿಕೊಳ್ಳುವಂತೆ ಪಂಜಾಬ್ ಸಿಎಂ ಭಗವಂತ್ ಮಾನ್ ಆಗ್ರಹಿಸಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28