ಸಂಸತ್ತಿನ ಆವರಣದಲ್ಲಿ ರೈತರು ಮಾಧ್ಯಮದೊಂದಿಗಿನ ಮಾತನಾಡಿದ್ದನ್ನು ಉಲ್ಲಂಘನೆ ಎಂದು ಕರೆಯದಿರಿ | ಓಂ ಬಿರ್ಲಾರನ್ನು ಆಗ್ರಹಿಸಿದ ಕಾಂಗ್ರೆಸ್
ಓಂ ಬಿರ್ಲಾ | PTI
ಹೊಸದಿಲ್ಲಿ: ಕಳೆದ ವಾರ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ, ಸಂಸತ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತುಕತೆ ನಡೆಸಿದ ರೈತ ನಾಯಕರ ನಡೆಯನ್ನು ಸಂಸತ್ ಕಲಾಪ ನಿಯಮಗಳ ಉಲ್ಲಂಘನೆ ಎಂದು ಕರೆಯಬಾರದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನು ಆಗ್ರಹಿಸಿರುವ ಕಾಂಗ್ರೆಸ್, ಈ ಹಿಂದೆ ಸದನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದಾಗ ಮಹಿಳಾ ಚಿತ್ರ ತಾರೆಯರು ಹಾಗೂ ಮತ್ತಿತರರು ವರದಿಗಾರರೊಂದಿಗೆ ಸಂವಾದ ನಡೆಸಿದ್ದ ನಿದರ್ಶನವನ್ನು ಉಲ್ಲೇಖಿಸಿದೆ.
ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಜುಲೈ 29ರಂದು ರಾಹುಲ್ ಗಾಂಧಿ ಅವರು 2024-25ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಮಾತನಾಡುವಾಗ, ಅವರನ್ನು ಭೇಟಿ ಮಾಡಲು ಬಂದಿದ್ದ ರೈತರು ಮಾಧ್ಯಮಗಳೊಂದಿಗೆ ಮಾತನಾಡುವ ಮೂಲಕ ಸಂಸತ್ ಕಲಾಪ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರಿಗೆ ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.
“ ಈ ಮೊದಲೂ ಕೂಡಾ ಸಂಸದೀಯ ಪಟುಗಳಲ್ಲದವರು ಮಾಧ್ಯಮಗಳೊಂದಿಗೆ ಹಲವಾರು ಬಾರಿ ಮಾತನಾಡಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ಸದನದಲ್ಲಿ ಮಂಡಿಸಿದಾಗ ಹಲವಾರು ಮಹಿಳಾ ಚಿತ್ರ ತಾರೆಯರು, ಕಲಾವಿದರು ಹಾಗೂ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿತ್ತು. ಆಗ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸರಕಾರದ ನಡೆಯನ್ನು ಶ್ಲಾಘಿಸಿದ್ದರು” ಎಂದು ವೇಣುಗೋಪಾಲ್ ತಮ್ಮ ಪತ್ರದಲ್ಲಿ ನೆನಪಿಸಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿಗಳು, ಮಾಜಿ ಸಂಸದರು ಸೇರಿದಂತೆ ಸಂಸತ್ತಿನ ಸಂದರ್ಶನಕಾರರು ಆ ಸಂದರ್ಭದಲ್ಲಾಗಲಿ ಅಥವಾ ಇನ್ನಾವುದೇ ಸಮಯದಲ್ಲಾಗಲಿ ಮಾಧ್ಯಮಗಳೊಂದಿಗೆ ಮಾತನಾಡಿರುವುದನ್ನು ಕಾಂಗ್ರೆಸ್ ಪಕ್ಷವು ಆಕ್ಷೇಪಿಸಿಲ್ಲ ಎಂಬುದರತ್ತ ವೇಣುಗೋಪಾಲ್ ತಮ್ಮ ಪತ್ರದಲ್ಲಿ ಬೊಟ್ಟು ಮಾಡಿದ್ದಾರೆ ಎನ್ನಲಾಗಿದೆ.
ರೈತರಾಗಿರಲಿ ಅಥವಾ ರಾಜಕಾರಣಿಗಳಾಗಿರಲಿ, ಅವರೆಲ್ಲ ಪ್ರಜೆಗಳ ಧ್ವನಿಯಾಗಿದ್ದು, ಅವರು ಸಂಸತ್ತಿನ ಘನತೆಯೊಂದಿಗೆ ರಾಜಿ ಮಾಡಿಕೊಳ್ಳುವ ಬದಲು ಪ್ರಜಾತಂತ್ರವನ್ನು ಬಲಿಷ್ಠಗೊಳಿಸುತ್ತಾರೆ ಎಂದು ಅವರು ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಜುಲೈ 29ರಂದು ರಾಹುಲ್ ಗಾಂಧಿ 2024-25ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಭಾಷಣ ಮಾಡುವಾಗ ಮಧ್ಯಪ್ರವೇಶಿಸಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸದನದಲ್ಲಿ ಸದನದ ಸದಸ್ಯರಲ್ಲದವರು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡುವಂತಿಲ್ಲ. ಆದರೆ, ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲೇ ರೈತರು ಮಾಧ್ಯಗಮಗಳಿಗೆ ಹೇಳಿಕೆ ನೀಡಿದ್ದರು ಎಂದು ಆಕ್ಷೇಪಿಸಿದ್ದರು.
ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕದ 12 ಮಂದಿ ರೈತ ನಾಯಕರ ನಿಯೋಗವು ಕಳೆದ ಬುಧವಾರ ಸಂಸತ್ ಭವನದ ಸಂಕೀರ್ಣದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ನಂತರ, ಮಾಧ್ಯಮಗಳೊಂದಿಗೆ ಮಾತುಕತೆ ನಡೆಸಿತ್ತು.