“ವಿದ್ಯಾರ್ಥಿಗಳ ಮೇಲೆ ಕ್ರೈಸ್ತ ಸಂಪ್ರದಾಯ ಹೇರಬೇಡಿ, ಸಂವಿಧಾನದ ಪೀಠಿಕೆ ಓದಿಸಿ”: ತನ್ನ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದ ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ
Photo: Screengrab via Mohammed Zubair (@zoo_bear)/X
ಹೊಸದಿಲ್ಲಿ: ವಿದ್ಯಾರ್ಥಿಗಳ ಮೇಲೆ ಕ್ರೈಸ್ತ ಸಂಪ್ರದಾಯಗಳನ್ನು ಹೇರದಂತೆ ಹಾಗೂ ಪ್ರತಿದಿನ ಬೆಳಗ್ಗಿನ ಅಸೆಂಬ್ಲಿ ವೇಳೆ ವಿದ್ಯಾರ್ಥಿಗಳಿಂದ ಸಂವಿಧಾನದ ಪೀಠಿಕೆ ಓದಿಸುವಂತೆ ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ ತನ್ನ ಅಧೀನದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.
ಶಾಲಾ ಕಟ್ಟಡದಲ್ಲಿ ಅಂತರ-ಧರ್ಮೀಯ ಪ್ರಾರ್ಥನಾ ಕೊಠಡಿ ಸ್ಥಾಪಿಸುವಂತೆ ಮತ್ತು ಎಲ್ಲಾ ಧರ್ಮಗಳಿಗೆ ಗೌರವ ನೀಡುವುದನ್ನು ಖಾತ್ರಿ ಪಡಿಸುವಂತೆ ಸಂಸ್ಥೆ ಶಾಲೆಗಳಿಗೆ ಸೂಚಿಸಿದೆ.
ದೇಶದಲ್ಲಿನ ಪ್ರಸ್ತುತ ಸಾಮಾಜಿಕ-ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಸನ್ನಿವೇಶದಿಂದ ಉದ್ಭವಿಸಿರುವ ಸವಾಲುಗಳ ಹಿನ್ನೆಲೆಯಲ್ಲಿ ಈ ಸಲಹೆಗಳನ್ನು ನೀಡಲಾಗಿದೆ ಎಂದು ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಹೇಳಿದೆ.
ಈ ಸಂಸ್ಥೆಯ ಅಧೀನದಲ್ಲಿ ಸುಮಾರು 14000 ಶಾಲೆಗಳು, 650 ಕಾಲೇಜುಗಳು, ಏಳು ವಿವಿಗಳು, ಐದು ವೈದ್ಯಕೀಯ ಕಾಲೇಜುಗಳು ಹಾಗೂ 450 ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಿವೆ
ತನ್ನ 36ನೇ ಸಾಮಾನ್ಯ ಸಭೆ ಬೆಂಗಳೂರಿನಲ್ಲಿ ಈ ವರ್ಷದ ಜನವರಿಯಲ್ಲಿ ನಡೆದ ನಂತರ ಸಂಸ್ಥೆ ಬಿಡುಗಡೆಗೊಳಿಸಿದ 13 ಪುಟಗಳ ಮಾರ್ಗಸೂಚಿ ಮತ್ತು ಸೂಚನಾ ದಾಖಲೆಯಲ್ಲಿ ಮೇಲಿನ ಸಲಹೆಗಳನ್ನು ನೀಡಲಾಗಿದೆ.
ಧಾರ್ಮಿಕ ಮತಾಂತರ ಆರೋಪ ಹೊರಿಸಿ ಕ್ರೈಸ್ತ ಸಂಸ್ಥೆಗಳ ಮೇಲೆ ಹಿಂದುತ್ವ ಸಂಘಟನೆಗಳ ದಾಳಿ ಹಾಗೂ ಪ್ರತಿಭಟನೆಗಳ ಹಲವು ಘಟನೆಗಳ ಹಿನ್ನೆಲೆಯಲ್ಲಿ ಇಂತಹ ಮಾರ್ಗಸೂಚಿ ಹೊರಡಿಸಲಾಗಿದೆ.
ಶಾಲೆಗಳು ಕೆಲ ಪ್ರಮುಖ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳು, ಕವಿಗಳು, ರಾಷ್ಟ್ರೀಯ ನಾಯಕರ ಫೋಟೋಗಳನ್ನು ಶಾಲೆಗಳ ಲಾಬಿಗಳಲ್ಲಿ, ಗ್ರಂಥಾಲಯಗಳು ಮತ್ತು ಕಾರಿಡಾರುಗಳಲ್ಲಿ ಅಳವಡಿಸುವಂತೆ ಸಂಸ್ಥೆ ಸೂಚಿಸಿದೆ.