“ನನ್ನ ಮಗ ಕ್ರಿಕೆಟಿಗನಾಗಬೇಕೆಂದು ನಾನು ಬಯಸುವುದಿಲ್ಲ” ಎಂದ ಯುವರಾಜ್ ಸಿಂಗ್!
Photo: PTI
ಹೊಸದಿಲ್ಲಿ: “ನನ್ನ ಮಗ ಕ್ರಿಕೆಟಿಗನಾಗಬೇಕೆಂದು ನಾನು ಬಯಸುವುದಿಲ್ಲ”, ಎಂದು ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ.
ಟಿಆರ್ಎಸ್ ಕ್ಲಿಪ್ಸ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಯುವರಾಜ್ ಸಿಂಗ್, ಕ್ರಿಕೆಟಿಗರ ಮಕ್ಕಳು ಮಾಧ್ಯಮ ಮತ್ತು ಸಾರ್ವಜನಿಕರಿಂದಾಗಿ ಎದುರಿಸುವ ಒತ್ತಡದ ಕುರಿತು ಮಾತನಾಡಿದರು.
“ನನ್ನ ಮಗ ಕ್ರಿಕೆಟಿಗನಾಗುವುದು ನನಗೆ ಬೇಕಿಲ್ಲ, ಈ ದಿನಗಳಲ್ಲಿ ಮಕ್ಕಳು, ಪ್ರಮುಖವಾಗಿ ಕ್ರಿಕೆಟಿಗರ ಮಕ್ಕಳು ಎದುರಿಸುವ ಒತ್ತಡ ಬಹಳಷ್ಟು ಎಂದು ನನಗನಿಸುತ್ತದೆ. ನಮ್ಮ ಜನರು ಮತ್ತು ಮಾಧ್ಯಮ ಅವರನ್ನು ಹೋಲಿಸುತ್ತಲೇ ಇರುವುದರಿಂದ (ಅವರ ಹೆತ್ತವರೊಂದಿಗೆ) ಅವರಿಗೆ ಅದು ಅಷ್ಟು ಸುಲಭವಲ್ಲ,” ಎಂದು ಯುವರಾಜ್ ಹೇಳಿದರು.
ತಮ್ಮ ಮಗನಿಗೆ ತಾವು ಗಾಲ್ಫ್ ಕಲಿಸಲು ಯತ್ನಿಸಿದರೂ ಆತ ಕ್ರಿಕೆಟ್ ಬ್ಯಾಟ್ ಮೇಲೆ ಆಸಕ್ತಿ ಹೊಂದಿದ್ದಾನೆ ಎಂದು ಯುವರಾಜ್ ಹೇಳಿದರು.
“ನನಗೆ ಗಾಲ್ಫ್ ಆಡುವುದು ಇಷ್ಟ, ಅದಕ್ಕೆ ಮಗನಿಗೆ ಒಂದು ಪ್ಲಾಸ್ಟಿಕ್ ಗಾಲ್ಫ್ ಸೆಟ್ ಖರೀದಿಸಿದೆ. ಅವನಿಗೆ ಕೆಲ ಶಾಟ್ಗಳನ್ನೂ ಕಲಿಸಿದೆ. ಆತ ಇನ್ನೂ ಚಿಕ್ಕವನು, ಕಲಿಯುತ್ತಿದ್ದಾನೆ. ಅವನು ಕೆಲ ಶಾಟ್ ಆಡಿ ನಂತರ ಅದನ್ನು ಎಸೆಯುತ್ತಿದ್ದ,” ಎಂದು ಯುವರಾಜ್ ಹೇಳಿದರು.
“ಒಂದು ದಿನ ಅವನು ನನ್ನ ನಾದಿನಿ ಮನೆಯಲ್ಲಿದ್ದ. ಅಲ್ಲಿ ಅವನು ಗಾಲ್ಫ್ ಸ್ಟಿಕ್ ಎತ್ತದೆ ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡು ಅತ್ತಿತ್ತ ಓಡಲಾರಂಭಿಸಿದ. ಕೆಲ ವಿಷಯಗಳು ಪ್ರಕೃತಿದತ್ತವಾಗಿರುತ್ತವೆ, ಅವುಗಳನ್ನು ಬದಲಾಯಿಸಲಾಗದು. ಅವನಿಗೆ ಕ್ರಿಕೆಟಿಗನಾಗಬೇಕಿದ್ದರೆ ನಾನು ಖಂಡಿತಾ ಬೆಂಬಲ ನೀಡುತ್ತೇನೆ, ಆದರೆ ನಾನು ಟರ್ಮಿನೇಟರ್ 4 ಸಹ ಆಗುತ್ತೇನೆ,” ಎಂದು ಯುವರಾಜ್ ನಗುತ್ತಾ ಹೇಳಿದರು