ಗೂಗಲ್ ಮ್ಯಾಪ್ ಬಳಸಿ ಕಾರು ಚಾಲನೆ; ನಿರ್ಮಾಣ ಹಂತದ ಸೇತುವೆಯಿಂದ ಕೆಳಕ್ಕೆ ಬಿದ್ದು ಮೂವರು ಮೃತ್ಯು
PC: x.com/jsuryareddy
ಬರೇಲಿ: ನಿರ್ಮಾಣ ಹಂತದಲ್ಲಿದ್ದ ಅಪೂರ್ಣ ಸೇತುವೆಯಿಂದ ಕಾರು ಕೆಳಕ್ಕೆ ಬಿದ್ದು ಸಂಭವಿಸಿದ ದುರಂತದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಫರೀದ್ಪುರದಲ್ಲಿ ಈ ಘಟನೆ ನಡೆದಿದೆ. ಗೂಗಲ್ ಮ್ಯಾಪ್ ಬಳಸಿ ಕಾರು ಚಲಾಯಿಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ದಾತಾಗಂಜ್ ನಿಂದ ಫರೀದ್ಪುರಕ್ಕೆ ಖಲ್ಲಾಪುರ ಮಾರ್ಗವಾಗಿ ಬರಲು ಗೂಗಲ್ ಮ್ಯಾಪ್ ನೆರವು ಪಡೆಯಲಾಗಿತ್ತು. ಆದರೆ ರಾಮಗಂಗಾ ನದಿಗೆ ಕಟ್ಟಲಾಗುತ್ತಿದ್ದ ಸೇತುವೆ ಅಪೂರ್ಣವಾಗಿತ್ತು ಎಂಬ ವಿಚಾರ ಅವರಿಗೆ ತಿಳಿದಿರಲಿಲ್ಲ ಎಂದು ವಿವರಿಸಿದ್ದಾರೆ.
ತಡರಾತ್ರಿ ಈ ದುರಂತ ಸಂಭವಿಸಿದ್ದರಿಂದ ಸಂತ್ರಸ್ತರಿಗೆ ಯಾವ ನೆರವೂ ಸಿಗಲಿಲ್ಲ. ಭಾನುವಾರ ಬೆಳಿಗ್ಗೆ ಖಲ್ಲಾಪುರ ಗ್ರಾಮಸ್ಥರು ಅಪೂರ್ಣ ಸೇತುವೆಯ ಕೆಳಗೆ ಕಾರು ಬಿದ್ದಿದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಬರೇಲಿ ಜಿಲ್ಲೆಯ ಫರೀದ್ಪುರ ಮತ್ತು ಬಡುವಾನ್ ಜಿಲ್ಲೆಯ ದಾತಾಗಂಜ್ ನಿಂದ ಪೊಲೀಸರು ಆಗಮಿಸಿದರು.
ದುರಂತ ನಡೆದ ಸ್ಥಳ ಫರೀದ್ಪುರ ಠಾಣೆ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ವೃತ್ತ ನಿರೀಕ್ಷಕ ಅಶುತೋಶ್ ಶಿವಂ ದೃಢಪಡಿಸಿದ್ದಾರೆ. ದೋಣಿಗಳನ್ನು ಬಳಸಿ ಮೃತದೇಹಗಳನ್ನು ಪತ್ತೆ ಮಾಡಲಾಯಿತು.
"ಗುರುಗ್ರಾಮ ಮೂಲದ ಭದ್ರತಾ ಕಂಪನಿಗೆ ಸೇರಿದ ಕಾರು ಇದು ಎನ್ನುವುದು ಪತ್ತೆಯಾಗಿದ್ದು, ನಿತಿನ್ ಕುಮಾರ್ (30) ಅವರ ಸಹೋದರ ಸಂಬಂಧಿಗಳಾದ ಅಜಿತ್ ಕುಮಾರ್ (35) ಮತ್ತು ಅಮಿತ್ ಕುಮಾರ್ (30) ಮೃತಪಟ್ಟಿದ್ದಾರೆ. ನಿತಿನ್ ಹಾಗೂ ಅಜಿತ್ ಫರೂಕಾಬಾದ್ ಮೂಲದವರಾಗಿದ್ದು ಭದ್ರತಾ ಕಂಪನಿಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೈನ್ ಪುರಿಯ ಅಮಿತ್ ಇವರ ದೂರದ ಸಂಬಂಧಿ" ಎಂದು ಠಾಣಾಧಿಕಾರಿ ರಾಹುಲ್ ಸಿಂಗ್ ತಿಳಿಸಿದ್ದಾರೆ.