ಕಳ್ಳತನಕ್ಕೆ ಬಂದಾತ ಕಂಠಪೂರ್ತಿ ಕುಡಿದು ಈಗ ಪೊಲೀಸರ ಅತಿಥಿ!
PC : NDTV
ಹೈದರಾಬಾದ್: ಮದ್ಯದಂಗಡಿಗೆ ನುಗ್ಗಿದ ಕಳ್ಳನೊಬ್ಬ ಹಣ ದೋಚಿದ ಬಳಿಕ ಕಂಠಪೂರ್ತಿ ಕುಡಿದು ನಿದ್ರೆಗೆ ಜಾರಿ ಪೊಲೀಸರ ಅತಿಥಿಯಾದ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಮದ್ಯದಂಗಡಿಗೆ ನುಗ್ಗಿದ ಆರೋಪಿ, ನಂತರ ಚಾವಣಿಯ ಹೆಂಚುಗಳನ್ನು ಎಚ್ಚರಿಕೆಯಿಂದ ತೆಗೆದು ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ್ದಾನೆ. ಬಳಿಕ ಡ್ರಾಯರ್ಗಳಿಂದ ನಗದು ತೆಗೆದು ಕಿಸೆಗೆ ಹಾಕಿಕೊಂಡಿದ್ದಾನೆ. ಅಷ್ಟರವರೆಗೂ ಎಲ್ಲವೂ ಅಂದುಕೊಂಡಂತೆ ನಡೆದಿದೆ. ಆದರೆ ಆರೋಪಿ ಮದ್ಯದ ಬಾಟಲಿಗಳನ್ನು ಕಾಣುತ್ತಿದ್ದಂತೆ ಆತ ʼನ್ಯೂನ್ಯತೆʼಗೊಳಗಾಗಿದ್ದಾನೆ. ಕಂಠಪೂರ್ತಿ ಕುಡಿದ ಆತ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ ಎಂದು ವರದಿಯಾಗಿದೆ.
ಪ್ರಜ್ಞೆ ಕಳೆದುಕೊಂಡ ಆರೋಪಿಯನ್ನು ಮರುದಿನ ಬೆಳಿಗ್ಗೆ ಮದ್ಯದಂಗಡಿಯ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ನಗದು ಹಾಗೂ ಮದ್ಯದ ಬಾಟಲಿಗಳು ಆತನ ಸುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದರೋಡೆಯ ವೇಳೆ ಆತನ ಮುಖದಲ್ಲಿ ಸಣ್ಣ ಗಾಯವೂ ಆಗಿರುವುದು ಕಂಡುಬಂದಿದೆ. ಆರೋಪಿಗೆ ಇನ್ನೂ ಎಚ್ಚರಿಕೆ ಬಂದಿಲ್ಲ. ಆತನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳತನ ಮಾಡಲು ಒಬ್ಬನೇ ಬಂದಿದ್ದನೇ ಅಥವಾ ಆತನ ಸಹಚರರಿದ್ದರೆ ಎಂಬ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಂಠಪೂರ್ತಿ ಕುಡಿದು ಪ್ರಜ್ಞೆ ಕಳೆದುಕೊಂಡಿರುವ ಆರೋಪಿಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ತನಿಖೆ ನಡೆಸಲು ಪೊಲೀಸರು ಆರೋಪಿಗೆ ಪ್ರಜ್ಞೆ ಬರುವುದನ್ನು ಕಾಯುತ್ತಿದ್ದಾರೆ!