ಹೈದರಾಬಾದ್ | ಪ್ರಕರಣ ದಾಖಲಿಸಿ 14 ವರ್ಷದ ಬಳಿಕ 800 ಕೋಟಿ ರೂ. ಮೌಲ್ಯದ ಜಗನ್ ಮೋಹನ್ ರೆಡ್ಡಿಯ ಆಸ್ತಿ ಮುಟ್ಟುಗೋಲು

ಜಗನ್ ಮೋಹನ್ ರೆಡ್ಡಿ (Photo: PTI)
ಹೈದರಾಬಾದ್ : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿಯವರಿಗೆ ಸೇರಿದ 27.5 ಕೋಟಿ ರೂ. ಮೌಲ್ಯದ ಷೇರುಗಳನ್ನು ಹಾಗೂ ದಾಲ್ಮಿಯಾ ಸಿಮೆಂಟ್ಸ್ (ಭಾರತ್) ಲಿಮಿಟೆಡ್ (ಡಿಸಿಬಿಎಲ್) ಹೊಂದಿದ 377.2 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಕಾನೂನು ಜಾರಿ ನಿರ್ದೇಶನಾಲಯದ ಹೈದರಾಬಾದ್ ಘಟಕ ತಾತ್ಕಾಲಿಕವಾಗಿ ವಶಕ್ಕೆ ಪಡೆದಿದೆ.
ಪ್ರತಿಫಲದ ರೂಪದಲ್ಲಿ ಹೂಡಿಕೆಯ ಸೌಲಭ್ಯ ಪಡೆದು ಅವ್ಯವಹಾರ ಎಸಗಿದ್ದಾರೆ ಎಂದು ಆಪಾದಿಸಿ ಪ್ರಕರಣ ದಾಖಲಿಸಿದ 14 ವರ್ಷಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ವಶಪಡಿಸಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 793.3 ಕೋಟಿ ರೂ. ಗಳು ಎಂದು ಡಿಸಿಬಿಎಲ್ ಸ್ಪಷ್ಟಪಡಿಸಿದೆ.
ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) 2011ರಲ್ಲಿ ಜಗನ್ ವಿರುದ್ಧ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿದೆ. ಡಿಸಿಬಿಎಲ್ ಈ ಸಂದರ್ಭದಲ್ಲಿ ಭಾರತಿ ಸಿಮೆಂಟ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ನಲ್ಲಿ ಹೂಡಿಕೆ ಮಾಡಿತ್ತು. ಕಾರ್ಮೆಲ್ ಏಷ್ಯಾ ಹೋಲ್ಡಿಂಗ್ಸ್ ಲಿಮಿಟೆಡ್, ಸರಸ್ವತಿ ಪವರ್ ಅಂಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಹರ್ಷಾ ಫರ್ಮ್ಗಳಲ್ಲಿ ಜಗನ್ಮೋಹನ್ ರೆಡ್ಡಿ ಹೊಂದಿದ್ದ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಸಂಬಂಧ ಮಾ.31ರಂದು ತಾತ್ಕಾಲಿಕ ಮುಟ್ಟುಗೋಲು ಆದೇಶ ಹೊರಡಿಸಲಾಗಿದ್ದು, 2025ರ ಎ.15ರಂದು ಈ ಆದೇಶ ಡಿಸಿಬಿಎಲ್ ಕೈಸೇರಿದೆ. ಭೂಮಿಯ ಆರಂಭಿಕ ಖರೀದಿ ಮೌಲ್ಯ 377 ಕೋಟಿ ರೂ. ಆಗಿತ್ತು.
ಜಗನ್ ಮೋಹನ್ ಪ್ರತಿನಿಧಿಸುವ ರಘುರಾಮ್ ಸಿಮೆಂಟ್ಸ್ ನಲ್ಲಿ ಡಿಸಿಬಿಎಲ್ 95 ಕೋಟಿ ರೂ. ಹೂಡಿಕೆ ಮಾಡಿದೆ ಎಂದು ಸಿಬಿಐ ಮತ್ತು ಈಡಿ ತನಿಖೆಯಿಂದ ತಿಳಿದುಬಂದಿದೆ. ಅಂದಿನ ಮುಖ್ಯಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿಯವರ ಪ್ರಭಾವ ಬಳಸಿಕೊಂಡು ಕಡಪಾ ಜಿಲ್ಲೆಯಲ್ಲಿ ಡಿಸಿಬಿಎಲ್ಗೆ 407 ಹೆಕ್ಟೇರ್ ಪ್ರದೇಶವನ್ನು ಗಣಿಗಾರಿಕೆಗಾಗಿ ಲೀಸ್ ಆಧಾರದಲ್ಲಿ ಮಂಜೂರು ಮಾಡಿಸಿದ್ದಕ್ಕೆ ಪ್ರತಿಫಲವಾಗಿ ಡಿಸಿಬಿಎಲ್ ಈ ಹೂಡಿಕೆ ಮಾಡಿದೆ ಎಂದು ಸಿಬಿಐ ಆರೋಪಿಸಿದೆ.
ಇದಕ್ಕೆ ಸಂಬಂಧಿಸಿದ ಒಪ್ಪಂದದ ಅನ್ವಯ ಜಗನ್ ಮೋಹನ್ ರೆಡ್ಡಿ, ಲೆಕ್ಕ ಪರಿಶೋಧಕ ಹಾಗೂ ಮಾಜಿ ಸಂಸದ ವಿ.ವಿಜಯಸಾಯಿ ರೆಡ್ಡಿ ಮತ್ತು ಡಿಸಿಬಿಎಲ್ನ ಪುನೀತ್ ದಾಲ್ಮಿಯಾ ತಮ್ಮ ಷೇರುಗಳನ್ನು ರಘುರಾಮ್ ಸಿಮೆಂಟ್ಸ್ ಗೆ ಮಾರಾಟ ಮಾಡಿ ಅಲ್ಲಿಂದ ಪಾರ್ಫಿಸಿಮ್ ಎಂಬ ಕಂಪನಿಗೆ 155 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಇದರಲ್ಲಿ 55 ಕೋಟಿ ರೂ. ವನ್ನು ಜಗನ್ ಮೋಹನ್ ಅವರಿಗೆ 2010ರ ಮೇ 16 ರಿಂದ 2011ರ ಜೂನ್ 13ರ ಅವಧಿಯಲ್ಲಿ ನಗದು ಹಾಗೂ ಹವಾಲಾ ಮೂಲಕ ನೀಡಲಾಗಿದೆ ಎಂದು ಸಿಬಿಐ ಹಾಗೂ ಈಡಿ ಆಪಾದಿಸಿದೆ.