ಈಡಿ ಸ್ವಯಂ ಕಾನೂನಾಗಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಛತ್ತೀಸ್ಗಡದ 2,000 ಕೋ.ರೂ.ಗಳ ಮದ್ಯ ಹಗರಣದಲ್ಲಿ ಇಬ್ಬರು ವ್ಯಕ್ತಿಗಳಿಗೆ ಮಂಗಳವಾರ ಮಧ್ಯಂತರ ರಕ್ಷಣೆಯನ್ನು ಮಂಜೂರು ಮಾಡಿದ ಸರ್ವೋಚ್ಚ ನ್ಯಾಯಾಲಯವು ಜಾರಿ ನಿರ್ದೇಶನಾಲಯ (ಈ.ಡಿ.) ಸ್ವಯಂ ಕಾನೂನಾಗಲು ಸಾಧ್ಯವಿಲ್ಲ ಎಂದು ಹೇಳಿತು.
ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ನೊಯ್ಡಾದಲ್ಲಿಯ ಹೊಸ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಅನಿಲ ತುತೇಜಾ ಮತ್ತು ಅವರ ಪುತ್ರ ಯಶ್ ತುತೇಜಾ ವಿರುದ್ಧ ಕ್ರಮವನ್ನು ತೆಗೆದುಕೊಳ್ಳದಂತೆ ಈ.ಡಿ. ಮತ್ತು ಉತ್ತರ ಪ್ರದೇಶ ಪೊಲೀಸರಿಗೆ ನಿರ್ದೇಶನ ನೀಡಿತು.
ರಾಜ್ಯ ಸರಕಾರದ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಇತರ ವ್ಯಕ್ತಿಗಳನ್ನೊಳಗೊಂಡ ಸಿಂಡಿಕೇಟ್ ಒಂದು ಸರಕಾರಿ ಸ್ವಾಮ್ಯದ ಕಂಪನಿಯು ಪ್ರತಿ ಕೇಸ್ ದೇಶಿ ಮದ್ಯಕ್ಕೆ 75 ರೂ.ಕಮಿಷನ್ ನೀಡುವವರಿಂದ ಮಾತ್ರ ಮದ್ಯವನ್ನು ಖರೀದಿಸುವಂತೆ ಸಂಚು ರೂಪಿಸಿದ್ದು, ತನ್ಮೂಲಕ ರಾಜ್ಯದ ಬೊಕ್ಕಸಕ್ಕೆ ಸೇರಬೇಕಿದ್ದ 2,000 ಕೋಟಿ ರೂ.ಗೂ ಅಧಿಕ ಹಣವನ್ನು ಲಪಟಾಯಿಸಿದೆ ಎಂದು ಈ.ಡಿ. ಆರೋಪಿಸಿದೆ.
ಪ್ರಕರಣದ ಅರ್ಜಿದಾರರಲ್ಲಿ ಒಂದಾಗಿರುವ ಛತ್ತೀಸ್ಗಡ ಸರಕಾರವು, ಈ.ಡಿ.ಮುಖ್ಯಮಂತ್ರಿ ಭೂಪೇಶ ಬಾಘೇಲ್ ಅವರನ್ನು ಸಿಲುಕಿಸುವ ಉದ್ದೇಶದಿಂದ ಅಧಿಕಾರ ವ್ಯಾಪ್ತಿಯನ್ನು ಮೀರಿ ತನಿಖೆಯನ್ನು ನಡೆಸುತ್ತಿದೆ ಎಂದು ಪ್ರತಿಪಾದಿಸಿದೆ.
ಜು.18ರಂದು ಪ್ರಕರಣದಲ್ಲಿ ಈ.ಡಿ.ತನಿಖೆಗೆ ತಡೆಯಾಜ್ಞೆಯನ್ನು ನೀಡಿದ್ದ ಸರ್ವೋಚ್ಚ ನ್ಯಾಯಾಲಯವು, ಆರೋಪಿಗಳ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ತಾಕೀತು ಮಾಡಿತ್ತು.
ಆದರೆ ಜು.28ರಂದು ಈ.ಡಿ. ದೂರಿನ ಮೇರೆಗೆ ಉತ್ತರ ಪ್ರದೇಶ ಪೊಲೀಸರು ತುತೇಜಾ ಮತ್ತು ಅವರ ಪುತ್ರನ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.