ಚುನಾವಣಾ ಬಾಂಡ್ ಮಾಹಿತಿ ಬಹಿರಂಗ: ಮೂರನೇ ಅತಿದೊಡ್ಡ ದೇಣಿಗೆದಾರ ಸಂಸ್ಥೆಗೆ ರಿಲಯನ್ಸ್ ಜೊತೆ ಸಂಪರ್ಕ
ಹೊಸದಿಲ್ಲಿ: ಅಷ್ಟೇನೂ ಚಿರಪರಿಚಿತವಲ್ಲದ ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿರುವ ಮೂರನೆಯ ಅತಿ ದೊಡ್ಡ ದೇಣಿಗೆದಾರ ಸಂಸ್ಥೆಯಾಗಿದೆ. ಚುನಾವಣಾ ಬಾಂಡ್ ಮೂಲಕ ಈ ಸಂಸ್ಥೆಯು ರಾಜಕೀಯ ಪಕ್ಷಗಳಿಗೆ ರೂ. 410 ಕೋಟಿಯನ್ನು ದೇಣಿಗೆಯನ್ನಾಗಿ ನೀಡಿದೆ.
ಈ ಕಂಪೆನಿಯ ಆರ್ಥಿಕ ದಾಖಲೆಗಳ ಕುರಿತ ಪ್ರಾಥಮಿಕ ನೋಟವು, ಈ ಸಂಸ್ಥೆಗೆ ರಿಲಯನ್ಸ್ ಸಮೂಹ ಸಂಸ್ಥೆಯೊಂದಿಗೆ ಸಂಬಂಧ ಇರುವುದನ್ನು ಬಹಿರಂಗಗೊಳಿಸಿದೆ.
2021-22ರ ಆರ್ಥಿಕ ವರ್ಷದಲ್ಲಿ ಈ ಸಂಸ್ಥೆಯು ರೂ. 360 ಕೋಟಿ ದೇಣಿಗೆಯನ್ನು ರಾಜಕೀಯ ಪಕ್ಷಗಳಿಗೆ ನೀಡಿದೆ. ಅದೇ ವರ್ಷದಲ್ಲಿ ಈ ಸಂಸ್ಥೆಯ ನಿವ್ವಳ ಲಾಭವು ಕೇವಲ ರೂ. 21.72 ಕೋಟಿ ಆಗಿದೆ. ಆದರೆ, 2023-24ನೇ ಆರ್ಥಿಕ ವರ್ಷದಲ್ಲಿ ಈ ಸಂಸ್ಥೆಯು ಮತ್ತೆ ರೂ. 50 ಕೋಟಿ ದೇಣಿಗೆಯನ್ನು ನೀಡಿದೆ.
2017ರಲ್ಲಿ ಚುನಾವಣಾ ಬಾಂಡ್ ಅನ್ನು ಪರಿಚಯಿಸಿದಾಗ, ಕೇಂದ್ರ ಸರಕಾರವು ಕಾರ್ಪೊರೇಟ್ ಸಂಸ್ಥೆಗಳಿಗಿದ್ದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಮಿತಿಯನ್ನು ಕಾನೂನು ತಿದ್ದುಪಡಿ ಮೂಲಕ ತೆಗೆದು ಹಾಕಿತ್ತು. ಅಲ್ಲಿಯವರೆಗೆ ತಮ್ಮ ಈ ಹಿಂದಿನ ಮೂರು ವರ್ಷಗಳ ಸರಾಸರಿ ಲಾಭದಲ್ಲಿ ಶೇ. 7.5ರಷ್ಟು ಮೊತ್ತವನ್ನು ಮಾತ್ರ ಕಾರ್ಪೊರೇಟ್ ಸಂಸ್ಥೆಗಳು ದೇಣಿಗೆ ನೀಡಬಹುದಾಗಿತ್ತು.
ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮೂರು ನಿರ್ದೇಶಕರನ್ನು ಹೊಂದಿದ್ದು, ವಿಪುಲ್ ಪ್ರಾಣ್ ಲಾಲ್ ಮೆಹ್ತಾ, ಶ್ರೀಧರ್ ತಿತ್ತಿ ಹಾಗೂ ತಪಸ್ ಮಿತ್ರಾ ಸೇರಿದ್ದಾರೆ. ಈ ಪೈಕಿ ಮಿತ್ರಾ 26 ಸಂಸ್ಥೆಗಳಲ್ಲಿ ನಿರ್ದೇಶಕರಾಗಿದ್ದರೆ, ಮೆಹ್ತಾ ಎಂಟು ಸಂಸ್ಥೆಗಳಲ್ಲಿ ನಿರ್ದೇಶಕರಾಗಿದ್ದಾರೆ.
ಮಿತ್ರಾ ನಿರ್ದೇಶಕರಾಗಿರುವ 26 ಸಂಸ್ಥೆಗಳ ಪೈಕಿ ರಿಲಯನ್ಸ್ ಎರೋಸ್ ಪ್ರೊಡಕ್ಸನ್ಸ್ ಎಲ್ಎಲ್ಪಿ ಹಾಗೂ ಜಾಮ್ನನಗರ್ ಕಂಡ್ಲಾ ಪೈಪ್ ಲೈನ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಸೇರಿವೆ. ಗುಪ್ತಾ ತಮ್ಮ ಸಂಸ್ಥೆಯನ್ನು ಅಹಮದಾಬಾದ್ ನಲ್ಲಿ ನೋಂದಾಯಿಸಿದ್ದು, ರಿಲಯನ್ಸ್ ಪೇಜಿಂಗ್ ಪ್ರೈವೇಟ್ ಲಿಮಿಟೆಡ್, ಜಾಮ್ನಗರ್ ರತ್ಲಮ್ ಪೈಪೈ ಲೈನ್ ಪ್ರೈವೇಟ್ ಲಿಮಿಟೆಡ್, ರಿಲಿಯನ್ಸ್ ಟ್ಯಾಂಕೇಜಸ್ ಪ್ರೈವೇಟ್ ಲಿಮಿಟೆಡ್ ಹಾಗೂ ರಿಲಯನ್ಸ್ ಆಯಿಲ್ ಮತ್ತು ಪೆಟ್ರೋಲಿಯಮ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳೊಂದಿಗೆ ಹಂಚಿಕೆಯಾಗಿದೆ.
ತಮ್ಮ ಲಿಂಕ್ಡ್ ಇನ್ ಸ್ವವಿವರದಲ್ಲಿ ಮಿತ್ರಾ ತಮ್ಮನ್ನು ತಾವು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ಹೆಡ್ ಆಫ್ ಅಕೌಂಟ್ಸ್ (ಕನ್ಸಾಲಿಡೇಷನ್) ಎಂದು ಕರೆದುಕೊಂಡಿದ್ದು, “ಸದ್ಯ ಸಮೂಹ ಸಂಸ್ಥೆಯಲ್ಲಿ ಹಲವಾರು ಸಂಸ್ಥೆಗಳ ಖಾತೆಗಳು ಮತ್ತು ವಾಣಿಜ್ಯ ವ್ಯವಹಾರಗಳ ಮುಖ್ಯಸ್ಥನಾಗಿದ್ದು, ಈ ಪೈಕಿ ಅಂಗ ಸಂಸ್ಥೆಗಳು, ಸಹ ಸಂಸ್ಥೆಗಳು ಹಾಗೂ ಜಂಟಿ ಹೂಡಿಕೆ ಸಂಸ್ಥೆಗಳು ಸೇರಿವೆ” ಎಂದೂ ಬರೆದುಕೊಂಡಿದ್ದಾರೆ.
ಖಾಸಗಿ ಸಂಸ್ಥೆಯಾದ ರಿಲ್ ಐಕಾನ್ಸ್ ಆ್ಯಂಡ್ ಟ್ರೇಡರ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಮೆಹ್ತಾ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆಯ ಮತ್ತೊಬ್ಬ ನಿರ್ದೇಶಕ ಮಹೇಶ್ ಮುಂಗೇಕರ್ ಆಗಿದ್ದಾರೆ. ಇವರೂ ರಿಲಯನ್ಸ್ ಸಮೂಹ ಸಂಸ್ಥೆಗಳಲ್ಲಿ ನಿರ್ದೇಶಕರಾಗಿದ್ದು, ಈ ಪೈಕಿ ರಿಲಯನ್ಸ್ ಟೆಲಿಕಾಂ ಲಿಮಿಟೆಡ್ ಹಾಗೂ ರಿಲಯನ್ಸ್ ಕಮ್ಯೂನಿಕೇಷನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸೇರಿವೆ.