'ವಿಕಸಿತ್ ಭಾರತ್' ಸಂದೇಶಗಳನ್ನು ಕಳುಹಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಚುನಾವಣಾ ಆಯೋಗ ಸೂಚನೆ
ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸದ್ಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಾಟ್ಸ್ ಆ್ಯಪ್ ನಲ್ಲಿ ʼವಿಕಸಿತ್ ಭಾರತ್ʼ ಸಂದೇಶ ರವಾನಿಸುವುದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಭಾರತೀಯ ಚುನಾವಣಾ ಆಯೋಗವು ಸೂಚಿಸಿದೆ.
ಚುನಾವಣಾ ಘೋಷಣೆ ಹಾಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರ ಹೊರತಾಗಿಯೂ ಕೇಂದ್ರ ಸರಕಾರದ ವಿಕಸಿತ್ ಭಾರತ್ ಸಂಪರ್ಕ್ ಸಂದೇಶವು ಈಗಲೂ ಮೊಬೈಲ್ ಬಳಕೆದಾರರಿಗೆ ಬರುತ್ತಿದೆ ಎಂಬ ಹಲವಾರು ದೂರುಗಳನ್ನು ತಾನು ಸ್ವೀಕರಿಸುತ್ತಿರುವುದಾಗಿ ಚುನಾವಣಾ ಆಯೋಗವು ಹೇಳಿದೆ.
ಇದಕ್ಕೆ ಪ್ರತಿಯಾಗಿ, ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮುನ್ನವೇ ಈ ಸಂದೇಶಗಳನ್ನು ರವಾನಿಸಿದ್ದರೂ, ವ್ಯವಸ್ಥೆಯಲ್ಲಿನ ವಿಳಂಬ ಹಾಗೂ ಅಂತರ್ಜಾಲದ ಮಿತಿಯಿಂದ ಬಹುಶಃ ಕೆಲವು ಸಂದೇಶಗಳು ತಡವಾಗಿ ಈಗ ಬಳಕೆದಾರರಿಗೆ ತಲುಪುತ್ತಿರಬಹುದು ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸ್ಪಷ್ಟನೆ ನೀಡಿದೆ.