ಚುನಾವಣಾ ಆಯೋಗವು ಚುನಾವಣಾ ಬಾಂಡ್ಗಳ ಮಾಹಿತಿಯನ್ನು ಕಾಲಮಿತಿಯೊಳಗೇ ಬಹಿರಂಗಪಡಿಸಲಿದೆ : ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
ರಾಜೀವ್ ಕುಮಾರ್ | Photo : PTI
ಹೊಸದಿಲ್ಲಿ : ಚುನಾವಣಾ ಆಯೋಗವು ಚುನಾವಣಾ ಬಾಂಡ್ಗಳ ಮಾಹಿತಿಯನ್ನು ಸುಪ್ರೀಂ ಕೋರ್ಟ್ ನೀಡಿರುವ ಕಾಲಮಿತಿಯೊಳಗೇ ಬಹಿರಂಗಪಡಿಸಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬುಧವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಿದ ನಂತರ ಶ್ರೀನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಈ ಹೇಳಿಕೆ ನೀಡಿದ್ದಾರೆ.
ತನ್ನ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಕೇಂದ್ರದ ಚುನಾವಣಾ ಬಾಂಡ್ಗಳ ಯೋಜನೆ ರದ್ದುಗೊಳಿಸಿತು. ಮಾರ್ಚ್ 15 ರಂದು ಸಂಜೆ 5 ಗಂಟೆಯೊಳಗೆ ಬ್ಯಾಂಕ್ ಹಂಚಿಕೊಂಡ ವಿವರಗಳನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು.
“ಚುನಾವಣಾ ಆಯೋಗವು ಪಾರದರ್ಶಕತೆಯ ಪರವಾಗಿದೆ. ನಾವು ಮೂರು ಸ್ತಂಭಗಳನ್ನು ಹೊಂದಿದ್ದೇವೆ - ಬಹಿರಂಗಪಡಿಸುವಿಕೆ, ಬಹಿರಂಗಪಡಿಸುವಿಕೆ ಮತ್ತು ಬಹಿರಂಗಪಡಿಸುವಿಕೆ. ಎಲ್ಲ ಮಾಹಿತಿಯನ್ನು ಜನರಿಗೆ ಬಹಿರಂಗಪಡಿಸಲಿದ್ದೇವೆ. SBI ನಮಗೆ ಮಾಹಿತಿಗಳನ್ನು ಸಕಾಲದಲ್ಲಿ ನೀಡಿದೆ. ಅದನ್ನು ನಾವು ಅದನ್ನು ಸ್ವೀಕರಿಸಿದ್ದೇವೆ. ನಾವು ಅದನ್ನು ಸುಪ್ರೀಂ ಕೋರ್ಟ್ ನೀಡಿರುವ ಕಾಲಮಿತಿಯೊಳಗೆ ಬಹಿರಂಗಪಡಿಸುತ್ತೇವೆ ”ಎಂದು ಮುಖ್ಯ ಚುನಾವಣಾ ಆಯುಕ್ತ ಹೇಳಿದ್ದಾರೆ.
ಏಪ್ರಿಲ್ 1, 2019 ಮತ್ತು ಫೆಬ್ರವರಿ 15, 2024 ರ ನಡುವೆ ರಾಜಕೀಯ ಪಕ್ಷಗಳು ಒಟ್ಟು 22,217 ಚುನಾವಣಾ ಬಾಂಡ್ಗಳನ್ನು ಖರೀದಿಸಿದ್ದು, ಅವುಗಳಲ್ಲಿ 22,030 ಅನ್ನು ನಗದೀಕರಿಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಬುಧವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ, ನ್ಯಾಯಾಲಯದ ನಿರ್ದೇಶನದಂತೆ, ಮಾರ್ಚ್ 12 ರಂದು ವ್ಯವಹಾರದ ಅವಧಿ ಮುಗಿಯುವ ಮೊದಲು ಭಾರತೀಯ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ಗಳ ವಿವರಗಳನ್ನು ಸಲ್ಲಿಸಲಾಗಿದೆ ಎಂದು ಎಸ್ಬಿಐ ಹೇಳಿದೆ.
ಪ್ರತಿ ಚುನಾವಣಾ ಬಾಂಡ್ಗಳ ಖರೀದಿ ದಿನಾಂಕ, ಖರೀದಿದಾರರ ಹೆಸರುಗಳು ಮತ್ತು ಖರೀದಿಸಿದ ಬಾಂಡ್ಗಳ ಮುಖಬೆಲೆ ಸೇರಿದಂತೆ ವಿವರಗಳನ್ನು ಒದಗಿಸಲಾಗಿದೆ ಎಂದು ಅದು ಹೇಳಿದೆ.
ಚುನಾವಣಾ ಬಾಂಡ್ಗಳನ್ನು ನಗದೀಕರಿಸಿದ ದಿನಾಂಕ, ಕೊಡುಗೆಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಹೆಸರುಗಳು ಮತ್ತು ಬಾಂಡ್ಗಳ ಮುಖಬೆಲೆಯಂತಹ ವಿವರಗಳನ್ನು ಬ್ಯಾಂಕ್ ಚುನಾವಣಾ ಆಯೋಗಕ್ಕೆ ಒದಗಿಸಿದೆ ಎಂದು ಎಸ್ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಸಲ್ಲಿಸಿದ ಅಫಿಡವಿಟ್ ತಿಳಿಸಿದೆ.
"ಎಪ್ರಿಲ್ 1, 2019 ರಿಂದ ಫೆಬ್ರವರಿ 15, 2024 ರ ಅವಧಿಯಲ್ಲಿ ಒಟ್ಟು 22,217 ಬಾಂಡ್ಗಳನ್ನು ಖರೀದಿಸಲಾಗಿದೆ. ಭಾರತೀಯ ಚುನಾವಣಾ ಆಯೋಗಕ್ಕಾಗಿ ಮಾಹಿತಿಯನ್ನು ಒಟ್ಟುಗೂಡಿಸುವಾಗ ವಿವರಗಳನ್ನು ಈ ಕೆಳಗಿನಂತೆ ಪ್ರತ್ಯೇಕಿಸಲಾಗಿದೆ..." ಎಂದು ಅದು ಹೇಳಿದೆ.
ಏಪ್ರಿಲ್ 1, 2019 ರಿಂದ ಏಪ್ರಿಲ್ 11, 2019 ರ ನಡುವೆ ಒಟ್ಟು 3,346 ಚುನಾವಣಾ ಬಾಂಡ್ಗಳನ್ನು ಖರೀದಿಸಲಾಗಿದೆ ಮತ್ತು 1,609 ನಗದೀಕರಿಸಲಾಗಿದೆ ಎಂದು ಅಫಿಡವಿಟ್ ಹೇಳಿದೆ.
ಏಪ್ರಿಲ್ 12, 2019 ರಿಂದ ಈ ವರ್ಷದ ಫೆಬ್ರವರಿ 15 ರವರೆಗೆ ಒಟ್ಟು 18,871 ಚುನಾವಣಾ ಬಾಂಡ್ಗಳನ್ನು ಖರೀದಿಸಲಾಗಿದೆ ಮತ್ತು 20,421 ನಗದೀಕರಿಸಲಾಗಿದೆ ಎಂದು ಅದು ಹೇಳಿದೆ.