ಸಂಸತ್ತಿನಲ್ಲಿ ದಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ರಮೇಶ್ ಬಿಧೂರಿಗೆ ಚುನಾವಣಾ ಹೊಣೆಗಾರಿಕೆ
ದ್ವೇಷಕ್ಕೆ ಬಿಜೆಪಿಯಲ್ಲಿ ಬಹುಮಾನ ಎಂದು ವಾಗ್ದಾಳಿ ನಡೆಸಿದ ವಿಪಕ್ಷಗಳು
ರಮೇಶ್ ಬಿಧೂರಿ | Photo: PTI
ಹೊಸದಿಲ್ಲಿ: ಬಿಎಸ್ಪಿ ಸಂಸದ ದಾನಿಶ್ ಅಲಿ ವಿರುದ್ಧ ಮಾನಿಹಾನಿಕಾರಕ ಹೇಳಿಕೆ ನೀಡಿ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಸಂಸದ ರಮೇಶ್ ಬಿಧೂರಿಗೆ ಚುನಾವಣಾ ಹೊಣೆಗಾರಿಕೆ ನೀಡಿರುವ ಬಿಜೆಪಿಯ ವಿರುದ್ಧ ವಿರೋಧ ಪಕ್ಷಗಳು ಮತ್ತೊಮ್ಮೆ ಹರಿಹಾಯ್ದಿವೆ ಎಂದು indiatoday.in ವರದಿ ಮಾಡಿದೆ.
ರಮೇಶ್ ಬಿಧೂರಿಗೆ ರಾಜಸ್ಥಾನದ ಟೋಂಕ್ ಜಿಲ್ಲೆಯ ಹೊಣೆಗಾರಿಕೆಯನ್ನು ನೀಡಲಾಗಿದೆ. ಅವರ ಹೊಣೆಗಾರಿಕೆಯು ಜಿಲ್ಲಾ ಚುನಾವಣಾ ಉಸ್ತುವಾರಿಗೆ ಸಮನಾಗಿರುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿಯ ಈ ನಡೆಯನ್ನು ಟೀಕಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, "ದ್ವೇಷವಾದಿ ಬಿಧೂರಿಗೆ ಬಿಎಸ್ಪಿ ಸಂಸದ ದಾನಿಶ್ ಅಲಿ ವಿರುದ್ಧ ದಾಳಿ ನಡೆಸಿದ್ದಕ್ಕಾಗಿ ಬಹುಮಾನವನ್ನು ನೀಡಲಾಗಿದೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ ಅವರಿಗೆ ಶೇ. 29.25ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಜಸ್ಥಾನದ ಟೋಂಕ್ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ಇದು ರಾಜಕೀಯ ಲಾಭ ಪಡೆಯಲು ಮಾಡಲಾಗಿರುವ ದ್ವೇಷವನ್ನು ಸಾಂಕೇತೀಕರಣಗೊಳಿಸುವ ಹುನ್ನಾರವಾಗಿದೆ" ಎಂದು ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
"ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ - ಯೇ ಸಬ್ ಹೈ ಇನ್ಕಾ ಬಕ್ವಾಸ್ (ಎಲ್ಲರೊಂದಿಗೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ - ಇದು ಇವರ ಸುಳ್ಳು ಮಾತು)" ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಕಿಡಿ ಕಾರಿದ್ದಾರೆ.
ಇವರೊಂದಿಗೆ ಇನ್ನೂ ಹಲವು ವಿರೋಧ ಪಕ್ಷಗಳೂ ಬಿಜೆಪಿಯ ನಡೆಯನ್ನು ತೀವ್ರವಾಗಿ ಖಂಡಿಸಿವೆ.
ದ್ವೇಷ ಹರಡಿದ್ದಕ್ಕೆ ನೀಡಿದ ಕೊಡುಗೆ: ದಾನಿಶ್ ಟೀಕೆ
ಟೊಂಕ್ ಜಿಲ್ಲಾ ಚುನಾವಣಾ ಉಸ್ತುವಾರಿಯಾಗಿ ಬಿದೂರಿ ನೇಮಕವು ದ್ವೇಷವನ್ನು ಹರಡಿದ್ದಕ್ಕಾಗಿ ಅವರಿಗೆ ನೀಡಿದ ಕೊಡುಗೆಯಾಗಿದ್ದು, ಬಿಜೆಪಿಯ ಈ ನಡೆಯು ಅದರ ನೈಜ ವರ್ತನೆಯನ್ನು ಬಯಲಿಗೆಳೆದಿದೆ ಎಂದು ದಾನಿಶ್ ಅಲಿ ತಿಳಿಸಿದ್ದಾರೆ.
ಬಿದೂರಿ ಅವರ ವಿರುದ್ಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕೈಗೊಳ್ಳುವ ಶಿಸ್ತುಕ್ರಮವು ಲೋಕಸಭೆ ಹಾಗೂ ಸಂವಿಧಾನದ ಸಂಪ್ರದಾಯಗಳಿಗೆ ಅನುಗುಣವಾಗಿರುವುದು ಎಂಬ ಆಶಾವಾದವನ್ನು ತಾನು ಹೊಂದಿರುವುದಾಗಿ ಅಲಿ ತಿಳಿಸಿದ್ದಾರೆ.
“ಬಿಜೆಪಿಯು ಒಂದಿಷ್ಟು ಘನತೆಯನ್ನು ಕಾಪಾಡಿಕೊಳ್ಳಬೇಕಿತ್ತು. ಜಗತ್ತಿನ ಅತಿ ದೊಡ್ಡ ಪಕ್ಷವೆಂದು ತನ್ನನ್ನು ಕರೆದುಕೊಳ್ಳುವ ಪಕ್ಷದಿಂದ ದೇಶದ ಜನತೆಯು ಕೆಲವೊಂದು ನೈತಿಕ ನಡವಳಿಕೆಗಳನ್ನು ನಿರೀಕ್ಷಿಸುತ್ತಾರೆ. ನೀವು ಅವರಿಗೆ (ಬಿದೂರಿ) ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದೀರಿ. ಅದಕ್ಕೆ ಅವರು ನೀಡಿದ ಉತ್ತರವನ್ನು ನೀವು ಬಹಿರಂಗಪಡಿಸಬೇಕಿತ್ತು ಅಥವಾ ನಾವು ದ್ವೇಷವನ್ನು ಕಾನೂನುಬದ್ಧಗೊಳಿಸಿದ್ದೇವೆ ಹಾಗೂ ಅದಕ್ಕೆ ಉಡುಗೊರೆಯನ್ನು ನೀಡುತ್ತೇವೆ ಎಂದು ಹೇಳಬೇಕಿತ್ತು’’ ಎಂಬುದಾಗಿ ಅಲಿ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಬಿಜೆಪಿಗೆ ಸವಾಲೆಸೆದಿದ್ದಾರೆ.
“ನಿಮ್ಮ (ಬಿಜೆಪಿ) ಜನರು ರಸ್ತೆಯಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ. ಆತ(ಬಿದೂರಿ) ಅದನ್ನು ಪ್ರಜಾಪ್ರಭುತ್ವದ ದೇವಾಲಯದಲ್ಲಿ ಮಾಡಿದ್ದಾನೆ. ನೀವು ದ್ವೇಷವನ್ನು ಹರಡಿದ್ದಕ್ಕಾಗಿ ಪುರಸ್ಕಾರ ನೀಡುತ್ತಿದ್ದೀರಿ. ಬಿಜೆಪಿಯ ನೈಜ ಉದ್ದೇಶ, ಗುಣ ಹಾಗೂ ಮುಖ ಈಗ ಬಯಲಾಗಿದೆ’’ ಎಂದವರು ಹೇಳಿದ್ದಾರೆ.
ಬಿದೂರಿ ಅವರಂತಹ ವ್ಯಕ್ತಿಗಳಿಗೆ ಭಡ್ತಿ ನೀಡುವ ಮೂಲಕ ಬಹುಸಂಖ್ಯಾತರ ಮತ ಬ್ಯಾಂಕನ್ನು ಗಟ್ಟಿಗೊಳಿಸಬಹುದೆಂಬ ತಪ್ಪು ತಿಳುವಳಿಕೆಯನ್ನು ಬಿಜೆಪಿ ಹೊಂದಿದೆ ಎಂದು ಅಮ್ರೋಹಾದ ಬಿಎಸ್ಪಿ ಸಂಸದರಾದ ದಾನಿಶ್ ಅಲಿ ಹೇಳಿದ್ದಾರೆ.
ಬಿದೂರಿ ಅವರು ತನ್ನ ಮೇಲೆ ಮಾನಹಾನಿಕರ ವಾಗ್ದಾಳಿಯನ್ನು ನಡೆಸಿರುವ ವಿಷಯವನ್ನು ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಬೇಕೆಂದು ಕೋರಿ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವರಾದರೂ, ಈತನಕ ಯಾವುದೇ ಕ್ರಮ ಕೈಗೊಳ್ಳದೆ ಇರುವ ಬಗ್ಗೆ ಸುದ್ದಿಸಂಸ್ಥೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಾನಿಶ್ ಅಲಿ ಅವರು, ತಾನಿನ್ನೂ ಸ್ಪೀಕರ್ ಅವರು ಕ್ರಮಕೈಗೊಳ್ಳುವುದನ್ನು ಕಾಯುತ್ತಿದ್ದೇನೆ ಎಂದರು.