ಲೋಕಸಭಾ ಸ್ಪೀಕರ್ ಹುದ್ದೆ ಚುನಾವಣೆ | ಎನ್ಡಿಎ ನ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಕಣದಲ್ಲಿ
ಯಾರು ಈ ಕೋಡಿಕುನ್ನಿಲ್ ಸುರೇಶ್?
ಓಂ ಬಿರ್ಲಾ , ಕೊಡಿಕುನ್ನಿಲ್ ಸುರೇಶ್
ಹೊಸದಿಲ್ಲಿ : ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಲೋಕಸಭೆಯು ಸ್ಪೀಕರ್ ಹುದ್ದೆಗಾಗಿ ಚುನಾವಣೆಗೆ ಸಾಕ್ಷಿಯಾಗಲಿದೆ. ಆಡಳಿತಾರೂಢ ಎನ್ ಡಿ ಎ ಸ್ಪೀಕರ್ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಓಂ ಬಿರ್ಲಾ ಅವರನ್ನು ಮತ್ತೊಮ್ಮೆ ಹೆಸರಿಸಿದೆ. ಒಮ್ಮತದ ಸ್ಪೀಕರ್ ಆಯ್ಕೆಗಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ನಡೆದ ಮಾತುಕತೆಗಳು ವಿಫಲಗೊಂಡಿದ್ದು,ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಅವರು ಮಂಗಳವಾರ ಸ್ಪೀಕರ್ ಹುದ್ದೆಗಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಯಾರು ಈ ಕೋಡಿಕುನ್ನಿಲ್ ಸುರೇಶ್?
1989ರಲ್ಲಿ ಕೇರಳದ ಅಡೂರು ಕ್ಷೇತ್ರದಿಂದ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದ ಸುರೇಶ್ 1991,1996 ಮತ್ತು 1996ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅದೇ ಕ್ಷೇತ್ರದಿಂದ ಆಯ್ಕೆಯಾಗಿ ಸತತ ನಾಲ್ಕು ಗೆಲುವುಗಳನ್ನು ದಾಖಲಿಸಿದ್ದರು. ಆದರೆ 1998 ಮತ್ತು 2004ರ ಚುನಾವಣೆಗಳಲ್ಲಿ ಪರಾಭವಗೊಂಡಿದ್ದರು. ನಂತರ 2009,2014,2019 ಮತ್ತು 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮಾವೆಲಿಕ್ಕಾರ್ ಲೋಕಸಭಾ ಕ್ಷೇತ್ರದಿಂದ ನಿರಂತರವಾಗಿ ಗೆದ್ದಿದ್ದಾರೆ.
ತಾನು ರಾಜ್ಯ ರಾಜಕೀಯದ ಮೇಲೆ ಗಮನವನ್ನು ಕೇಂದ್ರಿಕರಿಸುವಂತಾಗಲು ತನ್ನ ಬದಲು ಬೇರೆ ಅಭ್ಯರ್ಥಿಯನ್ನು ಕಂಡುಕೊಳ್ಳುವಂತೆ ಸ್ವತಃ ಸುರೇಶ್ ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದ್ದರೂ ರಾಜ್ಯ ಕಾಂಗ್ರೆಸ್ ಸದಾ ಅವರ ಹಿಂದೆ ದೃಢವಾಗಿ ನಿಂತಿತ್ತು.
ಮನಮೋಹನ ಸಿಂಗ್ ಅವರ ಯುಪಿಎ-2 ಸರಕಾರದಲ್ಲಿ ಸಹಾಯಕ ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಸುರೇಶ್ ಈಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಗಳಿಗೆ ವಿಶೇಷ ಆಹ್ವಾನಿತರಾಗಿದ್ದಾರೆ.
ಪ್ರಮುಖ ದಲಿತ ನಾಯಕರಾಗಿರುವ ಸುರೇಶ್ 2010ರಲ್ಲಿ ಅವರ ಪ್ರತಿಸ್ಪರ್ಧಿ ಸಿಪಿಐನ ಆರ್.ಎಸ್.ಅನಿಲ್, ಅವರು ದಲಿತ ಪರಿಶಿಷ್ಟ ಜಾತಿಗಳ ಸಮುದಾಯಕ್ಕೆ ಸೇರಿದವರಲ್ಲ ಎಂದು ಆರೋಪಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ಬಳಿಕ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರು. ಆಗ ಸುರೇಶ್ ಮಾವೆಲಿಕ್ಕಾರ್ ಮೀಸಲು ಕ್ಷೇತ್ರದಿಂದ ಗೆದ್ದಿದ್ದರು.
ಸುರೇಶ್ ಒಬಿಸಿ ಚೆರಮಾರ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದಾರೆ. ಅವರು ಪರಿಶಿಷ್ಟ ಜಾತಿಯೆಂದು ಗುರುತಿಸಲಾಗಿರುವ ಚೆರಮಾರ್ ಹಿಂದು ಸಮುದಾಯಕ್ಕೆ ಸೇರಿದವರಲ್ಲ ಎಂದು ಅನಿಲ್ ಉಚ್ಛ ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೆ ಸರ್ವೋಚ್ಛ ನ್ಯಾಯಾಲಯದ ಮೆಟ್ಟಲನ್ನೇರಿದ್ದ ಸುರೇಶ್ ಪ್ರಕರಣವನ್ನು ಗೆಲ್ಲುವುದರೊಂದಿಗೆ ತನ್ನ ಲೋಕಸಭಾ ಸದಸ್ಯತ್ವವನ್ನು ಉಳಿಸಿಕೊಂಡಿದ್ದರು.
ಸುರೇಶ್ ಹಲವಾರು ಕಾನೂನು ಹೋರಾಟಗಳನ್ನೂ ಎದುರಿದ್ದಾರೆ. ದಂಗೆ, ಕಾನೂನುಬಾಹಿರವಾಗಿ ಗುಂಪು ಸೇರುವಿಕೆ ಮತ್ತು ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಅವರ ವಿರುದ್ಧ ಆರು ಬಾರಿ ಪ್ರಕರಣಗಳು ದಾಖಲಾಗಿದ್ದವು.