ಸಂಸತ್ತಿಗೆ ಹಾಜರಾದ ಇಂಜಿನಿಯರ್ ರಶೀದ್ : ಜಮ್ಮು ಕಾಶ್ಮೀರದಲ್ಲಿ ಇಬ್ಬರು ನಾಗರಿಕರ ಸಾವಿನ ಕುರಿತು ತನಿಖೆಗೆ ಒತ್ತಾಯ

Photo | SansadTV
ಹೊಸದಿಲ್ಲಿ: ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ಸಂಸದ ಇಂಜಿನಿಯರ್ ರಶೀದ್ ಅವರು ಮೊದಲ ಬಾರಿಗೆ ಸಂಸತ್ತಿಗೆ ಹಾಜರಾಗಿದ್ದಾರೆ. ಜಮ್ಮುಕಾಶ್ಮೀರದಲ್ಲಿ ಇಬ್ಬರು ನಾಗರಿಕರು ಮೃತಪಟ್ಟ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿ ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಇಂಜಿನಿಯರ್ ರಶೀದ್ ಅವರಿಗೆ ಫೆಬ್ರವರಿ 11 ರಿಂದ 13ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ದಿಲ್ಲಿ ಹೈಕೋರ್ಟ್ ಫೆಬ್ರವರಿ 10ರಂದು ಕಸ್ಟಡಿ ಪೆರೋಲ್ ನೀಡಿತ್ತು. ಪ್ರತ್ಯೇಕತಾವಾದಿಗಳ ಗುಂಪುಗಳಿಗೆ ಧನಸಹಾಯ ಮಾಡಿದ ಆರೋಪದಲ್ಲಿ ಇಂಜಿನಿಯರ್ ರಶೀದ್ 2019ರಿಂದ ಜೈಲಿನಲ್ಲಿದ್ದಾರೆ.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಇಂಜಿನಿಯರ್ ರಶೀದ್, ವಾಸಿಮ್ ಅಹ್ಮದ್ ಮಿರ್ ಮತ್ತು ಮಖನ್ ದಿನ್ ಎಂಬ ಇಬ್ಬರು ವ್ಯಕ್ತಿಗಳನ್ನು ಸೇನಾ ಪಡೆ ಕೊಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ʼನಮ್ಮ ರಕ್ತವು ಅಗ್ಗವಾಗಿಲ್ಲʼ ಎಂದು ಹೇಳಿದ್ದಾರೆ.
ಕುಪ್ವಾರದ ಕೇರಾನ್, ಕರ್ನಾಹ್ ಮತ್ತು ಮಚಿಲ್ ಪ್ರದೇಶಗಳಿಗೆ ಸುರಂಗ ನಿರ್ಮಿಸುವಂತೆ ಇದೇ ವೇಳೆ ಅವರು ಆಗ್ರಹಿಸಿದ್ದಾರೆ.