RTI ನಿಯಮದ ಸೂಕ್ತ ಜಾರಿಯನ್ನು ಖಾತರಿಪಡಿಸಿ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಸಾರ್ವಜನಿಕ ಅಧಿಕಾರಿಗಳು ಮಾಹಿತಿಯನ್ನು ಕ್ರಿಯಾತ್ಮಕವಾಗಿ ಬಹಿರಂಗಪಡಿಸುವುದು ಸೇರಿದಂತೆ ಮಾಹಿತಿ ಹಕ್ಕು ಕಾಯ್ದೆ -2005ರ ನಿಯಮಗಳ ಸೂಕ್ತ ಜಾರಿಗೆ ಖಾತರಿ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮಾಹಿತಿ ಆಯೋಗ ಹಾಗೂ ರಾಜ್ಯ ಮಾಹಿತಿ ಆಯೋಗಗಳಿಗೆ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಮೂವರು ಸದಸ್ಯರ ಪೀಠ, ‘ಅಧಿಕಾರಿಗಳು’ ಹಾಗೂ ‘ಮಾಹಿತಿ ಹಕ್ಕುದಾರರು’ ನಡುವಿನ ಸಂಬಂಧವನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಉತ್ತರದಾಯಿತ್ವ ನಿರ್ಣಾಯಕ ಲಕ್ಷಣವಾಗಿದೆ ಎಂದಿದೆ.
ಅಧಿಕಾರ ಹಾಗೂ ಉತ್ತರದಾಯಿತ್ವ ಜೊತೆ ಜೊತೆಯಲ್ಲಿ ಸಾಗುತ್ತದೆ. ಎಲ್ಲಾ ಪ್ರಜೆಗಳು ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಮಾಹಿತಿ ಪಡೆಯುವ ಹಕ್ಕು ಹೊಂದಿದ್ದಾರೆ. ಸಾರ್ವಜನಿಕ ಸಂಸ್ಥೆಗಳು ಅದನ್ನು ಒದಗಿಸುವ ಬಾಧ್ಯತೆ ಹೊಂದಿವೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
‘‘ಆರ್ಟಿಐ ಕಾಯ್ದೆಯ ನಾಲ್ಕನೇ ಪರಿಚ್ಛೇದದಲ್ಲಿ ನೀಡಲಾಗಿರುವ ಸೂಚನೆಗಳ ಜಾರಿಯ ಬಗ್ಗೆ ಕೇಂದ್ರ ಮಾಹಿತಿ ಆಯೋಗ ಹಾಗೂ ರಾಜ್ಯ ಮಾಹಿತಿ ಆಯೋಗಗಳು ನಿರಂತರವಾಗಿ ಕಣ್ಗಾವಲು ಇರಿಸಬೇಕು ಎಂದು ನಾವು ನಿರ್ದೇಶನ ನೀಡುತ್ತೇವೆ. ಹಾಗೆಯೇ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಕಾಲಕಾಲಕ್ಕೆ ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳಲ್ಲಿ ನೀಡಲಾಗಿರುವ ನಿರ್ದೇಶನಗಳನ್ನು ಪಾಲಸಬೇಕೆಂದು ನಾವು ನಿರ್ದೇಶನ ನೀಡುತ್ತೇವೆ’’ ಎಂದು ಸುಪ್ರೀಂ ಕೋರ್ಟ್ ಹೇಳಿತು.