ಈ ಸರಕಾರ ಬಂದ ಮೇಲೂ ಸಂಘ ಪರಿವಾರದ್ದೇ ಆಟ ಎಂಬಂತಾಗಿದ್ದು ಹೇಗೆ ?
► ಕಾಂಗ್ರೆಸ್ ಶಾಸಕ್ ಅಶೋಕ್ ರೈಗೆ ಜನಸಂಘದ ದೀನ ದಯಾಳ್ ಉಪಾಧ್ಯಾಯರೇ ಸ್ಫೂರ್ತಿ ! ► ಆತಿಥ್ಯಕ್ಕೂ, ಅಧಿಕಾರಕ್ಕೂ ಇವರಿಗೆ ಸಂಘಿಗಳೇ ಬೇಕು ಯಾಕೆ ?
ಸಾಂದರ್ಭಿಕ ಚಿತ್ರ | Photo : thewire.in
ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ಈಗಲೂ ಆರೆಸ್ಸೆಸ್, ಬಿಜೆಪಿ ಪ್ರಭಾವವೇ ವ್ಯವಸ್ಥಿತವಾಗಿ ನಡೆಯುತ್ತಿದೆಯೆ ?. ಬಹುತೇಕ ಕಡೆ ಸಂಘ ಪರಿವಾರಕ್ಕೆ ಬೇಕಾದಂತೆಯೇ ಈ ಸರ್ಕಾರ ನಡೆದುಕೊಳ್ಳುತ್ತಿದೆಯೆ ?. ಬಿಜೆಪಿಯವರನ್ನು, ಅವರ ಬೆಂಬಲಿಗರನ್ನು ತಂದು ಅವರಿಗೆ ಮಣೆ ಹಾಕಿರುವ ಕಾಂಗ್ರೆಸ್, ಒಳಗೊಳಗೇ ಅಸಹಾಯಕವಾಗಿದೆಯೆ?.
ಪ್ರತಿಪಕ್ಷವಾಗಿದ್ದಾಗ ಬಿಜೆಪಿ ವಿರುದ್ಧ ಅದು ಅಬ್ಬರಿಸುತ್ತಿದ್ದ ರೀತಿಗೂ, ಈಗ ಸರ್ಕಾರ ನಡೆಸುತ್ತಿರುವಾಗ ಕಾಂಗ್ರೆಸ್ನ ನೀತಿಗಳಿಗೂ ದೊಡ್ಡ ವ್ಯತ್ಯಾಸವಿದೆ ಎನ್ನಿಸುತ್ತಿಲ್ಲವೆ?. ಕಾಂಗ್ರೆಸ್ ಹೊರಗಡೆ ತೋರಿಸಿಕೊಳ್ಳುತ್ತಿರುವುದೇ ಒಂದು, ಒಳಗಿನ ಅದರ ವ್ಯವಹಾರಗಳೇ ಮತ್ತೊಂದು ಎಂಬಂತಾಗುತ್ತಿದೆಯೆ?.
ಸರ್ಕಾರದ ಇಂಥ ನಡವಳಿಕೆ, ಬಹುಮತ ನೀಡಿ ಬೆಂಬಲಿಸಿದ್ದ ಜನರಲ್ಲಿ ಮಾತ್ರವಲ್ಲ, ಸ್ವತಃ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿಯೂ ಒಂದು ಬಗೆಯ ಬೇಸರ, ಹತಾಶೆಯನ್ನು ಮೂಡಿಸತೊಡಗಿದೆ. ಕಾಂಗ್ರೆಸ್ ಸರ್ಕಾರ ಕಳೆದ ಆರು ತಿಂಗಳಲ್ಲಿ ತನ್ನ ಹಲವು ಸಾಧನೆಗಳ ನಡುವೆಯೇ ಬಿಜೆಪಿ ಮತ್ತು ಆರೆಸ್ಸೆಸ್ ಧೋರಣೆಗೆ ಸಮ್ಮತವಾದ ರೀತಿಯಲ್ಲಿ ನಡೆದುಕೊಂಡಿರುವುದಕ್ಕೆ ಕೂಡ ಹಲವು ಉದಾಹರಣೆಗಳಿವೆ.
ಅದು ಹೇಗೆ ಆರೆಸ್ಸೆಸ್, ಬಿಜೆಪಿ ಪ್ರಭಾವಕ್ಕೆ ಮಣಿಯುತ್ತಿದೆ ಎಂಬುದಕ್ಕೆ ಹೊಸ ಉದಾಹರಣೆಯೆಂದರೆ, ಬೆಂಗಳೂರು ಕಂಬಳ. ಕಂಬಳಕ್ಕೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಒಂದು ವೇಳೆ ಬೃಹತ್ ಕಂಬಳ ಏರ್ಪಡಿಸುವುದಿದ್ದರೆ ಕೃಷಿ ಭೂಮಿಯೂ, ಕಂಬಳದ ತವರೂ ಆಗಿರುವ ಕರಾವಳಿಯಲ್ಲೇ ಅದನ್ನು ಏರ್ಪಡಿಸಬಹುದಿತ್ತು. ಕೃಷಿಯೊಂದಿಗೆ ಯಾವ ಸಂಬಂಧವೂ ಇಲ್ಲದ ಬೆಂಗಳೂರಿನಲ್ಲಿ ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿ ಕಂಬಳ ಏರ್ಪಡಿಸುವಲ್ಲೇ ಸರ್ಕಾರದ ಮಣಿಯುವಿಕೆ ಮತ್ತು ಬೌದ್ಧಿಕ ದಾರಿದ್ರ್ಯ ಎರಡೂ ಇವೆ.
ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲು ಹೆಣಗಾಡುತ್ತಿರುವ ಸಿದ್ದರಾಮಯ್ಯ ಸರ್ಕಾರವೇ ಈ ಕಾರ್ಯಕ್ರಮಕ್ಕೆ 1 ಕೋಟಿ ಅನುದಾನವನ್ನೂ ನೀಡಿದೆ. ಹಲವರ ಅಸಮಾಧಾನ, ಬೇಸರದ ನಡುವೆಯೂ ಸಂಸ್ಕೃತಿ ಹೆಸರಿನಲ್ಲಿ ಇಂಥದೊಂದು ಕಾರ್ಯಕ್ರಮಕ್ಕೆ ವ್ಯವಸ್ಥೆಯಾಗುತ್ತಿರುವಾಗಲೇ, ಕಾರ್ಯಕ್ರಮಕ್ಕೆ ಲೈಂಗಿಕ ಕಿರುಕುಳದ ಕಳಂಕ ಹೊತ್ತ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಗೆ ಅತಿಥಿಯಾಗಿ ಆಹ್ವಾನ ನೀಡುವುದು ಕೂಡ ವ್ಯವಸ್ಥಿತವಾಗಿ ನಡೆಯಿತೆಂಬುದು ಮಾತ್ರ ಇನ್ನೂ ಕಳವಳಕಾರಿ.
ಈಗ ಬ್ರಿಜ್ ಭೂಷಣ್ ಬರುತ್ತಿಲ್ಲ ಎನ್ನಲಾಗಿದೆ. ಆದರೆ ಯಾವುದೋ ನೆಪ ಮುಂದೆ ಮಾಡಿ ಬಿಜೆಪಿಯ ಆ ಕಳಂಕಿತ ವ್ಯಕ್ತಿಯನ್ನು ಕರೆಸಲು ತಯಾರಿ ನಡೆದಿತ್ತಲ್ಲವೆ? ಮತ್ತು ಇದು ಕಾಂಗ್ರೆಸ್ ಸರ್ಕಾರದ ಮೂಗಿನಡಿಯೇ ಆಗಿತ್ತಲ್ಲವೆ?
ಅಷ್ಟೊಂದು ಅಮಾಯಕ ಹೆಣ್ಣುಮಕ್ಕಳ ಕಣ್ಣೀರಿಗೆ ಕಾರಣನಾಗಿದ್ದ ಬಿಜೆಪಿ ಸಂಸದನನ್ನು ಬೆಂಗಳೂರು ಕಂಬಳಕ್ಕೆ ಕರೆಸುವುದರ ಹಿಂದೆ ಆಯೋಜಕರ ಹೆಸರಿನಲ್ಲಿರುವ ಸಂಘ ಪರಿವಾರದ ಮಂದಿಯ ಇರಾದೆ ಏನಿತ್ತು?
ಖಾಸಗಿ ಗುಂಪೊಂದರ ಹೆಸರಿನಲ್ಲಿ ಬೆಂಗಳೂರು ಕಂಬಳ ಆಯೋಜನೆಯಾಗುತ್ತಿದೆಯಾದರೂ, ಅದರ ಹಿಂದಿರುವವರು ಯಾರೆಂದು ನೋಡಿದರೆ, ಇದರ ರಾಜಕೀಯ ಮರ್ಮ ಏನೆಂಬುದನ್ನೂ ಅರ್ಥ ಮಾಡಿಕೊಳ್ಳಬಹುದು. ಈ ಕಂಬಳ ನಡೆಯುತ್ತಿರುವುದು ಕಾಂಗ್ರೆಸ್ ನ ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ. ಕಂಬಳ ಸಮಿತಿಗೆ ಈ ಅಶೋಕ್ ರೈ ಅವರದ್ದೇ ಅಧ್ಯಕ್ಷತೆ. ರೈ ಮೂಲತಃ ಸಂಘಪರಿವಾರದ ವ್ಯಕ್ತಿ . ತನ್ನ ಸೇವಾ ಚಟುವಟಿಕೆಗಳಿಗೆ ಜನಸಂಘದ ದೀನ್ ದಯಾಳ್ ಉಪಾಧ್ಯಾಯರು ಪ್ರೇರಣೆ ಎಂದೇ ಅವರು ಹೇಳುತ್ತಿದ್ದರು. ಬಿಜೆಪಿಯಲ್ಲಿ ಜಿಲ್ಲಾ ಪದಾಧಿಕಾರಿಯಾಗಿದ್ದು ಅಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಲ್ಲಿ ಟಿಕೆಟ್ ಸಿಗೋದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ನ ಹಿರಿಯ ನಾಯಕರನ್ನು ಸಂಪರ್ಕಿಸಿ ಟಿಕೆಟ್ ಗೆ ಪ್ರಯತ್ನಿಸಿದರು. ಟಿಕೆಟ್ ಗೆ ಅರ್ಜಿಯನ್ನೂ ಸಲ್ಲಿಸದೆ ಕಾಂಗ್ರೆಸ್ ಟಿಕೆಟ್ ಗೆ ಎರಡು ಲಕ್ಷ ಕೊಟ್ಟು ಅರ್ಜಿ ಸಲ್ಲಿಸಿದ್ದ ಹದಿಮೂರು ಆಕಾಂಕ್ಷಿಗಳನ್ನು ಹಿಂದಿಕ್ಕಿ ಪಕ್ಷದ ಅಭ್ಯರ್ಥಿಯಾಗಿ ಬಿಟ್ಟರು.
ಬಿಜೆಪಿ ಬಂಡಾಯ ಅಭ್ಯರ್ಥಿಯ ಸ್ಪರ್ಧೆಯಿಂದಾಗಿ ಕೆಲವೇ ಮತಗಳಿಂದ ಗೆದ್ದಿರುವ ಅಶೋಕ್ ರೈ ಅವರ ಕಾರ್ಯವೈಖರಿ ಕೂಡ ಕಾಂಗ್ರೆಸ್ ಗೆ, ಅದರ ಸಿದ್ಧಾಂತಕ್ಕೆ, ಪಕ್ಷದ ಕಾರ್ಯಕರ್ತರಿಗೆ ಏನೇನೂ ಪೂರಕವಾಗಿಲ್ಲ ಎಂದು ಅವರ ಕ್ಷೇತ್ರದವರೇ ಹೇಳುತ್ತಿದ್ದಾರೆ. ಪುತ್ತೂರಿನಲ್ಲಿ ಕಾಂಗ್ರೆಸ್ ಟಿಕೆಟ್ ನಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆದ್ದಿದ್ದಾರೆ ಎಂಬ ಜೋಕೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ. ಇನ್ನು ಕಂಬಳದ ಸಂಘಟನಾ ಸಮಿತಿಯ ಪ್ರಮುಖ ಸ್ಥಾನಗಳಲ್ಲೂ ಬಿಜೆಪಿ ನಾಯಕರು ಅಥವಾ ಅದರ ಕಟ್ಟಾ ಬೆಂಬಲಿಗರೇ ಇದ್ದಾರೆ.
ಕಂಬಳ ಸಮಿತಿಯನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗಿದ್ದು, ತನ್ನನ್ನು ತಾನು ಒಂದು ನಿರ್ದಿಷ್ಟ ಜಾತಿಯ ಶಾಸಕನೆಂದು ಘೋಷಿಸಲು ಅಶೋಕ್ ರೈ ಹೊರಟಿದ್ದಾರೆಯೇ ಎಂದೂ ಕರಾವಳಿಯ ಜನರು ಪ್ರಶ್ನಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸರ್ಕಾರದಿಂದ 1 ಕೋಟಿ ಅನುದಾನ ಕೊಡಲಾಗಿದೆ.
ಕಂಬಳದ ಸ್ವಾಗತ ಸಮಿತಿಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ ಗೌರವಾಧ್ಯಕ್ಷರು. ಕಂಬಳದ ಕರೆ ಪೂಜೆಯಲ್ಲಿ ಕಳೆದ ತಿಂಗಳು ಡಿಕೆ ಶಿವಕುಮಾರ್ ಕೂಡ ಪಾಲ್ಗೊಂಡಿದ್ದರು. ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಕಂಬಳಕ್ಕೆ ಮುಖ್ಯ ಅತಿಥಿ ಎಂದು ಗೊತ್ತಾಗುತ್ತಿದ್ದಂತೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಅದಕ್ಕೆ ಹಲವೆಡೆಯಿಂದ ವ್ಯಾಪಕ ವಿರೋಧ ಬರುತ್ತಿದ್ದಂತೆ, ಬ್ರಿಜ್ ಭೂಷಣ್ ಬರುವುದಿಲ್ಲ ಎಂದು ಹೇಳಲಾಯಿತು.
ಕರ್ನಾಟಕ ಕಾಂಗ್ರೆಸ್ ಮುಖ್ಯ ವಕ್ತಾರ ಎಎನ್ ನಟರಾಜ್ ಗೌಡ ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಕಂಬಳ ಜಾನಪದೀಯ ಕ್ರೀಡೆ ಹೊರತು ಐಷಾರಾಮಿತನದ ಪ್ರದರ್ಶನವಲ್ಲ. ಬಿಜೆಪಿ ಭ್ರಷ್ಟಾಚಾರಿಗಳಿಗೆ ಆಯೋಜಿಸಿರುವ ಮೆರವಣಿಗೆಯೂ ಅಲ್ಲ. ಈ ಕಂಬಳಕ್ಕೂ ಬಿಜೆಪಿ ಭ್ರಷ್ಟಾಚಾರಿಗಳಿಗೂ ಸಂಬಂಧವಿಲ್ಲ, ಸರ್ಕಾರದಿಂದ 1 ಕೋಟಿ ಹಣ ಪಡೆದು ಬಿಜೆಪಿಯ ಭ್ರಷ್ಟಾಚಾರಿಗಳನ್ನು ಮೆರವಣಿಗೆ ಮಾಡುತ್ತಿರುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತೇವೆ ಎಂದಿದ್ದರು.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಈ ಕಂಬಳದ ವೇದಿಕೆಗೆ ಹೋಗಬಾರದು ಹಾಗೂ ಸರ್ಕಾರ ಮಂಜೂರು ಮಾಡಿದ್ದ ಹಣವನ್ನು ಹಿಂಪಡೆಯಬೇಕು ಅಥವಾ ಸರ್ಕಾರವೇ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಎಕ್ಸ್ನಲ್ಲಿ ನಟರಾಜ್ ಗೌಡ ಅವರು ಒತ್ತಾಯಿಸಿದ್ದರು.
ಸರಕಾರದ ಮೇಲೆ ತೀವ್ರ ಒತ್ತಡ ಬಿದ್ದು, ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಸಿಎಂ, ಡಿಸಿಎಂಗೆ ಹೈಕಮಾಂಡ್ ಕೂಡ ಹೇಳಿದ ಮೇಲೆ, ಕಂಬಳದ ಆಯೋಜನೆಯ ನೇತೃತ್ವ ವಹಿಸಿರೋ ಅಶೋಕ್ ರೈ ಕಡೆಯಿಂದ ಈ ಹೇಳಿಕೆ ಬಂದಿದೆ.
ಅದೂ ನಾವು ಆಹ್ವಾನ ರದ್ದುಪಡಿಸಿದ್ದೇವೆ ಅಂತ ಅಲ್ಲ, ಅವರೇ ಬರೋದಿಲ್ಲ ಅಂತ ಹೇಳಲಾಯಿತು. ಅಂದರೆ, ಬ್ರಿಜ್ ಭೂಷಣ್ ಬರಬಾರದು ಎಂದು ಆಯೋಜಕರು ಹೇಳಿಲ್ಲ. ಸ್ವತಃ ಅವರು ಬರುತ್ತಿಲ್ಲ, ಅಷ್ಟೇ. ಈ ಸರಕಾರ ಬಂದ ದಿನದಿಂದಲೂ ಕಾಂಗ್ರೆಸ್ ಅನ್ನು ಬೆಂಬಲಿಸಿದವರ ದೊಡ್ಡ ದೂರು ಈ ಸರಕಾರ ಹಾಗು ಕಾಂಗ್ರೆಸ್ ನೊಳಗಿರುವ ಆರೆಸ್ಸೆಸ್ಸಿಗರ ಪ್ರಭಾವವೇ ಅಲ್ಲಿ ಇನ್ನೂ ನಡೀತಿದೆ ಅನ್ನೋದು.
ಸ್ಪೀಕರ್ ಖಾದರ್ ಆಯೋಜಿಸಿದ್ದ ಶಾಸಕರ ತರಬೇತಿಗೆ ರವಿಶಂಕರ್ ಗುರೂಜಿ ಸಹಿತ ಆರೆಸ್ಸೆಸ್ ಹಿನ್ನೆಲೆಯವರಿಗೆ ಆಹ್ವಾನ ನೀಡಲಾಗಿತ್ತು.
ಮಂಗಳೂರು ವಿವಿ ಯಲ್ಲಿ ಕಲ್ಲಡ್ಕ ಭಟ್, ಬಿಜೆಪಿ ಶಾಸಕರುಗಳ ನಿರ್ದೇಶನದಂತೆ ನಿಯಮ ಮೀರಿ ಗಣೇಶೋತ್ಸವ ಆಚರಿಸಲು ಅವಕಾಶ ಕೊಡಲಾಯಿತು.
ಕಾಂಗ್ರೆಸ್ ವರಿಷ್ಠರು ಬೆಂಗಳೂರಿಗೆ ಬಂದು ಕಾಂಗ್ರೆಸ್ ಹಿರಿಯ ನಾಯಕರ ಬಗ್ಗೆ, ನೆಹರೂ ಬಗ್ಗೆ, ಹುತಾತ್ಮ ಹೋರಾಟಗಾರರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಬರೆಯುವ, ಮಾತಾಡುವ ಸಂಪಾದಕರ ಮನೆಗೇ ಹೋಗಿ ಉಪಹಾರ ಸೇವಿಸಿ ಬರುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಹದ್ದೇ ಸಂಪಾದಕರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಲು ಒಪ್ಪಿದ್ದರು. ಕಡೆಗೆ ಸಾಮಾಜಿಕ ಜಾಲತಾಣದಲ್ಲಿನ ಟೀಕೆಗಳ ಬಳಿಕ ಅಲ್ಲಿ ಹೋಗುವುದನ್ನು ತಪ್ಪಿಸಿಕೊಂಡರು.
ಮಂಗಳೂರು ದಸರಾದಲ್ಲಿ ಸಂಘ ಪರಿವಾರ ಬೆಂಬಲಿತ ತಂಡಗಳ ಹುಲಿ ಕುಣಿತದ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ನ ಘಟಾನುಘಟಿ ನಾಯಕರೇ ಭಾಗವಹಿಸಿದ್ದರು.
ಕಳೆದ ಬಿಜೆಪಿ ಸರಕಾರದಲ್ಲಿ ಬಿಜೆಪಿಗೆ ತಕ್ಕಂತೆ ಕೋಮುವಾದಿ ಧೋರಣೆ ಪ್ರದರ್ಶಿಸಿದ ಅಧಿಕಾರಿಗಳು ಈಗಲೂ ಆಯಕಟ್ಟಿನ ಜಾಗಗಳಲ್ಲೇ ಮುಂದುವರಿದಿದ್ದಾರೆ ಎಂಬ ಆರೋಪವೂ ಇದೆ. ಹೀಗೆ ಕೋಮುವಾದಕ್ಕೆ ಮಣಿದ ರೀತಿಯ ಕಾಂಗ್ರೆಸ್ ನಾಯಕರ ಹೊಂದಾಣಿಕೆ ಢಾಳಾಗಿಯೇ ಕಾಣಿಸುತ್ತಿದೆ. ಸರಕಾರಕ್ಕೂ ಕಾಂಗ್ರೆಸ್ ಸಿದ್ಧಾಂತಕ್ಕೂ, ಸಂವಿಧಾನದ ಆಶಯಗಳಿಗೂ ಸಂಬಂಧವೇ ಇಲ್ಲದ ಹಾಗೆ ಈ ಸರಕಾರದ ನೇಮಕಾತಿಗಳು, ಆದೇಶಗಳು, ಕ್ರಮಗಳು, ಧೋರಣೆಗಳಿವೆ ಎಂಬ ದೂರೂ ಸಾಕಷ್ಟಿದೆ.
ಅಶೋಕ್ ರೈ ಥರ ಹಿಂದೆ ಬಿಜೆಪಿ ಪದಾಧಿಕಾರಿಯಾಗಿದ್ದವರು ಈಗ ಎಲ್ಲೆಲ್ಲೋ ಯಾವ್ಯಾವುದೋ ರೂಪದಲ್ಲಿ ಈ ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದಾರೆ. ಹಿಂದೆ ಆರೆಸ್ಸೆಸ್ ಯೂನಿಫಾರ್ಮ್ನಲ್ಲಿದ್ದ ಅಶೋಕ್ ರೈ ಈಗ ಕಾಂಗ್ರೆಸ್ ಶಾಸಕ ಅಷ್ಟೆ. ಮನಃಸ್ಥಿತಿ ಮಾತ್ರ ಇನ್ನೂ ಅದೇ ಯೂನಿಫಾರ್ಮ್ ತೊಟ್ಟುಕೊಂಡಿದೆ ಎಂಬ ವ್ಯಾಪಕ ಆರೋಪವಿದೆ.
ಫೆಲೆಸ್ತೀನ್ ಪರ ಶಾಂತಿಯುತ ಪ್ರದರ್ಶನಗಳು, ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಸರ್ಕಾರವಿರುವ ಈ ರಾಜ್ಯದಲ್ಲಿ ಪೊಲೀಸರು ಹೇಗೆ ಕ್ರಮ ಕೈಗೊಂಡರು ಎಂಬುದನ್ನು ನೋಡಿದ್ದೇವೆ. ಅಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಫೆಲೆಸ್ತೀನ್ ಪರವಿದ್ದರೂ, ಒಂದು ಹಂತದಲ್ಲಿ ಕೇಂದ್ರ ಸರ್ಕಾರ ಕೂಡ ಫೆಲೆಸ್ತೀನ್ ಜನಸಾಮಾನ್ಯರು ಬಲಿಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದರೂ, ಕಾಂಗ್ರೆಸ್ ಸರ್ಕಾರವಿದ್ದ ಕರ್ನಾಟಕದಲ್ಲಿ ಯಾಕೆ ಫೆಲೆಸ್ತೀನ್ ಪರ ಶಾಂತಿಯುತ ಪ್ರದರ್ಶನ ನಡೆಸಿದವರ ಮೇಲೆ ಪೊಲೀಸರು ಕೇಸ್ ಜಡಿಯುತ್ತಿದ್ದರು?
ಇದೆಲ್ಲವೂ ಸರ್ಕಾರದ ಸಮ್ಮತಿಯಿಲ್ಲದೆ ನಡೆಯಲು ಹೇಗೆ ಸಾಧ್ಯ? ಹಾಗಾದರೆ, ಈ ಕಾಂಗ್ರೆಸ್ ಸರ್ಕಾರದ ನಿಲುವೇನು?. ಮಾನವೀಯ ದೃಷ್ಟಿಯಿಂದ ಮತ್ತು ಮಾನವ ಹಕ್ಕುಗಳ ದೃಷ್ಟಿಯಿಂದ ಮಹತ್ವದ್ದಾದ ಇಂತಹ ಗಂಭೀರ ವಿಷಯದಲ್ಲಿ ಹೈಕಮಾಂಡ್ ನಿಲುವಿಗೆ ತದ್ವಿರುದ್ಧ ಧೋರಣೆಯೊಂದು ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ವ್ಯಕ್ತವಾದದ್ದು ಹೇಗೆ?
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಲ್ಲಿ ಹೇಳೋದೇ ಒಂದು, ಇಲ್ಲಿ ಕಾಂಗ್ರೆಸ್ ಸರಕಾರದ ನಿಲುವೇ ಇನ್ನೊಂದು ಎಂಬಂತೆ ಆಗಿಲ್ಲವೆ ಇದೆಲ್ಲ?. ಫೆಲೆಸ್ತೀನ್ ವಿಷಯದಲ್ಲಿನ ಈ ಸರ್ಕಾರದ ನಡೆ ಇಲ್ಲಿ ಬಿಜೆಪಿ ಸರಕಾರವೇ ಇದ್ದಂತಹ ಭಾವನೆ ಬರುವುದಕ್ಕೆ ಕಾರಣವಾಯಿತಲ್ಲವೆ?
ಹಿಂದುತ್ವ ಗೂಂಡಾಗಳ ವಿಷಯದಲ್ಲೂ ಈ ಸರಕಾರದ್ದು ಕೇವಲ ಬಾಯಿಮಾತಿನ ಕ್ರಮ. ಕಠಿಣ ಕಾನೂನು ಕ್ರಮ ಇಲ್ಲವೇ ಇಲ್ಲ. ರಾಜಕೀಯ ಇಚ್ಛಾಶಕ್ತಿಯಂತೂ ಇಲ್ಲವೇ ಇಲ್ಲ. ಇನ್ನು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲೂ ಆರೆಸ್ಸೆಸ್ ಧೋರಣೆಯವರು ನುಸುಳಿದ ಆರೋಪ ಕೇಳಿಬಂದಿತ್ತು.
ಜಾತಿ ಜನಗಣತಿ ವಿಚಾರದಲ್ಲಿಯೂ ಸಿದ್ದರಾಮಯ್ಯ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿಯಿಲ್ಲ ಮತ್ತು ಈ ವಿಚಾರದಲ್ಲಿ ಅದು ಬಿಜೆಪಿಯದ್ದೇ ಧೋರಣೆಯನ್ನು ಆಳದಲ್ಲಿ ಹೊಂದಿದೆ ಎಂಬ ಅನುಮಾನಗಳು ಮೂಡುವುದಕ್ಕೆ ಶುರುವಾಗಿದೆ.
ಅಲ್ಲಿ ರಾಹುಲ್ ಗಾಂಧಿ ಜಾತಿ ಗಣತಿ ಅತ್ಯಗತ್ಯ ಅಂತ ಹೇಳೋದು. ಇಲ್ಲಿ ಕಾಂಗ್ರೆಸ್ ಸಚಿವರು, ಹಿರಿಯ ನಾಯಕರೇ ಜಾತಿ ಗಣತಿ ವಿರೋಧಿಸುವ ಸಭೆಗಳಿಗೆ ಹೋಗೋದು, ಬೆಂಬಲಿಸೋದು ನಡೆಯುತ್ತಲೇ ಇದೆ. ಬೆಳಗಾವಿ ಸುವರ್ಣಸೌಧದಲ್ಲಿ ಕಳೆದ ಅಧಿವೇಶನದ ವೇಳೆ ಅಸೆಂಬ್ಲಿ ಹಾಲ್ನಲ್ಲಿ ಸಾವರ್ಕರ್ ಫೋಟೊ ಅಳವಡಿಸಿದ್ದಾಗ ಸದನದಲ್ಲೂ ಸದನದ ಹೊರಗೂ ಪ್ರತಿಭಟಿಸಿದ್ದ ಕಾಂಗ್ರೆಸ್, ಈ ಸಲ ತಾನೇ ಅಧಿಕಾರದಲ್ಲಿದೆ. ಅಧಿವೇಶನದ ವೇಳೆ ಯಾವ ಧೋರಣೆ ತೋರಿಸಲಿದೆ ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.
ಇಲ್ಲಿಯೂ ಅದು ನಾಜೂಕಿನ ಹೆಜ್ಜೆಯಿಟ್ಟು, ಆರೆಸ್ಸೆಸ್ ಧೋರಣೆಗೆ ಮೌನ ಸಮ್ಮತಿ ಕೊಡಲಿದೆಯೆ ಎಂಬ ಪ್ರಶ್ನೆಗಳೂ ಎದ್ದಿವೆ. ಕಾಂಗ್ರೆಸ್ ಪಕ್ಷ ಹಾಗು ಸರಕಾರದ ಈ ಮೃದು ಹಿಂದುತ್ವ ಧೋರಣೆಯಿಂದ ಅದಕ್ಕೆ ರಾಜಕೀಯವಾಗಿ ಯಾವುದೇ ಲಾಭ ಆಗೋದಿಲ್ಲ ಎಂಬುದು ಮಾತ್ರ ಖಚಿತ.
ಪ್ರತಿಪಕ್ಷವಾಗಿದ್ದಾಗ ಅಬ್ಬರಿಸುತ್ತಿದ್ದುದಕ್ಕೂ ಈಗ ಅದು ತೋರಿಸುವ ಮನಃಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಇಲ್ಲದೇ ಹೋಗಿದ್ದರೆ ಅಶೋಕ್ ರೈ ಥರದವರು ಕಾಂಗ್ರೆಸ್ನಲ್ಲಿದ್ದು ಬಿಜೆಪಿ ಥರದ ಆಟ ಆಡುವುದು ಅಷ್ಟು ಸುಲಭಕ್ಕೆ ಸಾಧ್ಯವಾಗುತ್ತಿರಲಿಲ್ಲ.
ಈ ಹಂತದಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿನ ಗೊಂದಲ ಎಂಥದಿರಬಹುದು? . ಬಿಜೆಪಿ ಹಾಗು ಸಂಘ ಪರಿವಾರದಿಂದ ಬೇಸತ್ತು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದ ಎಲ್ಲ ಜಾತ್ಯತೀತ ಜನರಿಗೆ ಕಾಂಗ್ರೆಸ್ನ ಈಗಿನ ಜಾಣ ನಡೆಗಳ ಬಗ್ಗೆ ಏನೆನ್ನಿಸುತ್ತಿರಬಹುದು?. ಕಾಂಗ್ರೆಸ್ ಯಾಕೆ ಇಂಥ ಹಾದಿ ಹಿಡಿಯುತ್ತಿದೆ? ಅಥವಾ ಯಾರ ಮರ್ಜಿಗೆ ಬಿದ್ದು ತನ್ನತನವನ್ನು ಕಳೆದುಕೊಳ್ಳಲು ಹೊರಟಿದೆ?. ಜಾತ್ಯತೀತತೆ, ಸಮಾಜವಾದ ಎಲ್ಲವನ್ನೂ ಗಂಟು ಕಟ್ಟಿ ಮೂಲೆಗಿಡಲು ಮುಂದಾಗಿದ್ದಾರೆಯೆ ಕಾಂಗ್ರೆಸ್ ನಾಯಕರು?.