ಬಿಜೆಪಿ ವಿರೋಧ ಪಕ್ಷವಾಗಿದ್ದಾಗಲೇ ಸಂಸತ್ ಕಲಾಪಗಳಿಗೆ ಹೆಚ್ಚು ಅಡ್ಡಿ: ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು
ಮಲ್ಲಿಕಾರ್ಜುನ ಖರ್ಗೆ | Photo: PTI
ಹೊಸದಿಲ್ಲಿ: ವಿರೋಧ ಪಕ್ಷಗಳು ಸಂಸತ್ ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿವೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಬುಧವಾರ ತಿರುಗೇಟು ನೀಡಿರುವ ಕಾಂಗ್ರೆಸ್, ಬಿಜೆಪಿಯು ಸಂಸತ್ತನ್ನು ಅಪಹರಿಸುವ ಕೆಲಸದಲ್ಲಿ ನಿರತವಾಗಿದ್ದರೂ, ದೇಶದಲ್ಲಿನ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಎಂದು ಬಿಂಬಿಸುತ್ತಿದೆ ಎಂದು ಹರಿಹಾಯ್ದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಳೆದ ಎರಡು ದಶಕಗಳ ದತ್ತಾಂಶದ ಪ್ರಕಾರ, ಸಂಸತ್ತಿನ ಕಲಾಪಕ್ಕೆ ಅತಿ ಹೆಚ್ಚು ಅಡ್ಡಿಯಾಗಿರುವುದು 15ನೇ ಲೋಕಸಭೆ (2009-2014) ಅವಧಿಯಲ್ಲಿ ಹಾಗೂ ಆ ಸಂದರ್ಭದಲ್ಲಿ ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿತ್ತು ಎಂದು ಆರೋಪಿಸಿದ್ದಾರೆ.
“ಹೀಗಾಗಿ ಸಂಸತ್ತನ್ನು ಅಪಹರಿಸುವ ಕೆಲಸದಲ್ಲಿ ಬಿಜೆಪಿ ನಿರತವಾಗಿದೆಯೆ ಹೊರತು ವಿರೋಧ ಪಕ್ಷಗಳಲ್ಲ. ಪ್ರಜಾಪ್ರಭುತ್ವ ಅಪಾಯದಲ್ಲಿರುವುದು ಬಿಜೆಪಿ ಕೃಪೆಯಿಂದಾಗಿದೆ” ಎಂದೂ ದೂರಿದ್ದಾರೆ.
ನಿರಂಕುಶಾಧಿಕಾರಿ ಬಿಜೆಪಿ ಸರ್ಕಾರವು ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ಸಂಸದೀಯ ಪ್ರಜಾಸತ್ತೆಯನ್ನು ಹಾಳುಗೆಡವುತ್ತಿದೆ ಹಾಗೂ ವಿರೋಧ ಪಕ್ಷಗಳ ಧ್ವಾನಿಯನ್ನು ಅಡಗಿಸುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಎರಡೂ ಸದನಗಳಲ್ಲಿನ 146 ಸದಸ್ಯರನ್ನು ಅಮಾನತುಗೊಳಿಸುವ ಅಭೂತಪೂರ್ವ ಕ್ರಮ ಕೈಗೊಂಡು, ಕೇವಲ ಮೂರೇ ದಿನಗಳಲ್ಲಿ 14 ಮಸೂದೆಗಳನ್ನು ಬಿಜೆಪಿ ಸರ್ಕಾರ ಅಂಗೀಕರಿಸಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ 172 ಮಸೂದೆಗಳ ಪೈಕಿ 64 ಮಸೂದೆಗಳಿಗೆ ಹಾಲಿ ಲೋಕಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ ಹಾಗೂ ಇದೇ ಅವಧಿಯಲ್ಲಿ ರಾಜ್ಯಸಭೆಯಲ್ಲಿ 61 ಮಸೂದೆಗಳಿಗೆ ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಅಂಗೀಕಾರ ಪಡೆಯಲಾಗಿದೆ ಎಂದೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.