ನಾಗರಿಕರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರತಿಯೊಂದು ದಿನವು ಮುಖ್ಯ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ನಾಗರಿಕರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರತಿಯೊಂದೂ ದಿನವು ಮುಖ್ಯವಾಗುತ್ತದೆ ಎಂದು ಶುಕ್ರವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು, ಈಗ ರದ್ದುಗೊಂಡಿರುವ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಉದ್ಯಮಿಯೋರ್ವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಕುರಿತು ನಿರ್ಧರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಸೂಚಿಸಿದೆ.
ಜಾಮೀನು ಅರ್ಜಿಯ ವಿಚಾರಣೆಯನ್ನು 40 ಸಲ ನಡೆಸಿರುವ ಉಚ್ಚ ನ್ಯಾಯಾಲಯವು ಈಗ ಅದನ್ನು ಜು.8ಕ್ಕೆ ಮುಂದೂಡಿದೆ ಎಂದು ಉದ್ಯಮಿ ಅಮನದೀಪ್ ಸಿಂಗ್ ಢಲ್ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ ಸಿಬಲ್ ಅವರು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠಕ್ಕೆ ತಿಳಿಸಿದರು.
ಜಾಮೀನು ಅರ್ಜಿಯನ್ನು ಕಳೆದ ವರ್ಷದ ಜುಲೈನಲ್ಲಿ ಸಲ್ಲಿಸಲಾಗಿದೆ. ನಾಗರಿಕರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರತಿಯೊಂದೂ ದಿನವು ಮುಖ್ಯವಾಗಿದೆ. ಸುಮಾರು 11 ತಿಂಗಳುಗಳ ಬಳಿಕವೂ ಜಾಮೀನು ಅರ್ಜಿಯ ವಿಷಯವನ್ನು ಬಾಕಿಯಿರಿಸಿರುವುದು ಅರ್ಜಿದಾರರಿಗೆ ಅವರ ಸ್ವಾತಂತ್ರ್ಯದಿಂದ ವಂಚಿಸಿದೆ ಎಂದು ಹೇಳಿದ ಪೀಠವು,ಬೇಸಿಗೆ ರಜೆಗೆ ನ್ಯಾಯಾಲಯವು ಮುಚ್ಚುವ ಮುನ್ನ ಜಾಮೀನು ಅರ್ಜಿಯನ್ನು ನಿರ್ಧರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಸೂಚಿಸಿತು.
ಉಚ್ಚ ನ್ಯಾಯಾಲಯದ ಬೇಸಿಗೆ ರಜೆಗಳು ಜೂ.3ರಿಂದ ಆರಂಭಗೊಳ್ಳುತ್ತಿದ್ದು,ಮೇ 31 ಕೆಲಸದ ಕೊನೆಯ ದಿನವಾಗಿದೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಈ.ಡಿ.) ತನಿಖೆ ನಡೆಸುತ್ತಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಢಲ್ ಆರೋಪಿಯಾಗಿದ್ದಾರೆ. ಸಿಬಿಐನ ಎಫ್ಐಆರ್ ಆಧಾರದಲ್ಲಿ ಈ.ಡಿ.ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಈ ಹಿಂದೆ ನ್ಯಾಯಾಲಯವೊಂದು ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಡಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
ತನಿಖಾ ಸಂಸ್ಥೆಗಳ ಪ್ರಕಾರ ಢಲ್ ಇತರ ಆರೋಪಿಗಳೊಂದಿಗೆ ಶಾಮೀಲಾಗಿದ್ದರು ಹಾಗೂ ಅಬಕಾರಿ ನೀತಿಯನ್ನು ರೂಪಿಸುವಲ್ಲಿ,ಆಮ್ ಆದ್ಮಿ ಪಾರ್ಟಿಗೆ ‘ಸೌಥ ಗ್ರೂಪ್’ ನಿಂದ ವಿವಿಧ ಮಾರ್ಗಗಳ ಮೂಲಕ ಲಂಚದ ಹಣವನ್ನು ಪಾವತಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು.