ಸಂವಿಧಾನದ ಎಲ್ಲ ಪವಿತ್ರ ಸಿದ್ಧಾಂತಗಳನ್ನು ನುಚ್ಚುನೂರು ಮಾಡಲಾಗಿದೆ: ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ (PTI)
ಹೊಸದಿಲ್ಲಿ: ರವಿವಾರ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ ಬೆನ್ನಿಗೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಧಾರ್ಮಿಕ ಮೂಲಭೂತವಾದದಲ್ಲಿ ವಿಷಪೂರಿತ, ದ್ವೇಷದ ಕಾರ್ಯಸೂಚಿಯನ್ನು ಅದ್ದಲಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ವಿಶ್ವವಿದ್ಯಾಲಯಗಳು ಹಾಗೂ ಸ್ವಯಂ ಆಡಳಿತ ಸಂಸ್ಥೆಗಳು ನಿರಂತರ ಹಸ್ತಕ್ಷೇಪಕ್ಕೆ ಸಾಕ್ಷಿಯಾಗುತ್ತಿವೆ. ಮಾಧ್ಯಮಗಳ ದೊಡ್ಡ ಭಾಗವನ್ನು ಆಡಳಿತಾರೂಢ ಪಕ್ಷದ ಪ್ರಚಾರ ಸಾಧನಗಳನ್ನಾಗಿ ಮಾರ್ಪಡಿಸಲಾಗಿದೆ. ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಬೇಟೆಯಾಡುವ ಮೂಲಕ ಭಿನ್ನಮತದ ಕೊರಳನ್ನು ಹಿಚುಕುವುದು ಅಧಿಕಾರದ ಒಂದೇ ನೀತಿಯಾಗಿ ಬದಲಾಗಿದೆ. ಕಳೆದ ದಶಕದಲ್ಲಿ ವಿಷಪೂರಿತ ಹಾಗೂ ದ್ವೇಷದ ಕಾರ್ಯಸೂಚಿಯನ್ನು ಧಾರ್ಮಿಕ ಮೂಲಭೂತವಾದದಲ್ಲಿ ಅದ್ದಲಾಗಿದೆ. ಇದರಿಂದ ನಮ್ಮ ಸಮಾಜ ವಿಭಜನೆಗೊಳ್ಳುತ್ತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ಯಾರು ಜಾತ್ಯತೀತರಾಗಿದ್ದಾರೊ, ಅಂಥವರ ವ್ಯಕ್ತಿತ್ವಕ್ಕೆ ಗೊಬೆಲ್ ಪ್ರಚಾರದ ಮೂಲಕ ಮಸಿ ಬಳಿಯಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ದುರ್ಬಲ ಸಮುದಾಯಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು, ಬಡವರು ಹಾಗೂ ಅಲ್ಪಸಂಖ್ಯಾತರನ್ನು ಎರಡನೆ ದರ್ಜೆ ಪ್ರಜೆಗಳನ್ನಾಗಿ ಉಪಚರಿಸಲಾಗುತ್ತಿದೆ ಎಂದೂ ಅವರು ತಮ್ಮ ಸಂದೇಶದಲ್ಲಿ ಆರೋಪಿಸಿದ್ದಾರೆ.