538 ಕ್ಷೇತ್ರಗಳ ಮತಗಳ ಲೆಕ್ಕದಲ್ಲಿ ಗೊಂದಲ | EVM ನಲ್ಲಿ ದಾಖಲಾದ ಮತಗಳಿಗೂ ಎಣಿಕೆಯಾದ ಮತಗಳಿಗೂ ತಾಳೆಯಿಲ್ಲ
'the quint' ವರದಿ
ಹೊಸದಿಲ್ಲಿ, ಜೂ. 11: ಲೋಕಸಭಾ ಚುನಾವಣೆಗೆ ನಡೆದ ಮತದಾನದಲ್ಲಿ ಇವಿಎಂನಲ್ಲಿ ದಾಖಲಾದ ಮತಗಳಿಗೂ ಜೂನ್ 4ರಂದು ಮತ ಎಣಿಕೆ ದಿನ ಲೆಕ್ಕಕ್ಕೆ ಸಿಕ್ಕ ಮತಗಳಿಗೂ ಬಹುತೇಕ ಕ್ಷೇತ್ರಗಳಲ್ಲಿ ತಾಳೆಯೇ ಆಗುತ್ತಿಲ್ಲ ಎಂದು 'the quint' ಸುದ್ದಿಜಾಲ ತಾಣ ವರದಿ ಮಾಡಿದೆ.
ಲೋಕಸಭೆಯ 542 ಕ್ಷೇತ್ರಗಳ ಪೈಕಿ 538 ಕ್ಷೇತ್ರಗಳಲ್ಲಿ ಇವಿಎಂಗಳಲ್ಲಿ ದಾಖಲಾದ ಒಟ್ಟು ಮತಗಳ ಸಂಖ್ಯೆಗೂ ಪ್ರತೀ ಕ್ಷೇತ್ರದಲ್ಲಿ ಎಣಿಕೆಯಾದ ಇವಿಎಂ ಮತಗಳ ಸಂಖ್ಯೆಗೂ ದೊಡ್ಡ ವ್ಯತ್ಯಾಸವೇ ಇದೆ ಎಂಬುದನ್ನು ಚುನಾವಣಾ ಆಯೋಗವೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಮೂಲಕ ತಿಳಿದುಬರುತ್ತದೆ ಎಂದು ಅದು ತಿಳಿಸಿದೆ.
ಮತದಾನದ ದಿನದಂದು ದಾಖಲಿಸಲಾದ ಮತಗಳ ಸಂಖ್ಯೆಗಿಂತ, ಮತ ಎಣಿಕೆ ದಿನ ಲೆಕ್ಕಕ್ಕೆ ಸಿಕ್ಕಿರುವ ಮತಗಳ ಸಂಖ್ಯೆ ಕಡಿಮೆಯಿದೆ. ಹೀಗೆ 362 ಕ್ಷೇತ್ರಗಳಲ್ಲಿ ಲೆಕ್ಕಕ್ಕೆ ಸಿಗದ 5,54,598 ಮತಗಳನ್ನು ಚುನಾವಣಾ ಆಯೋಗ ಕೈಬಿಟ್ಟಿದೆ.
ಇದಲ್ಲದೆ, ಇನ್ನೂ 176 ಕ್ಷೇತ್ರಗಳಲ್ಲಿ ಮತ ಎಣಿಕೆ ದಿನ ಲೆಕ್ಕಕ್ಕೆ ಸಿಕ್ಕಿರುವ ಮತಗಳಿಗಿಂತ ಹೆಚ್ಚುವರಿ 35,093 ಇವಿಎಂ ಮತಗಳನ್ನು ಆಯೋಗ ದಾಖಲಿಸಿದೆ. ಅಂದರೆ ಈ ಕ್ಷೇತ್ರಗಳಲ್ಲಿ, ಇವಿಎಂಗಳಲ್ಲಿ ದಾಖಲಾದ ಮತಗಳ ಸಂಖ್ಯೆಗೂ ಎಣಿಸಲಾದ ಇವಿಎಂ ಮತಗಳ ಸಂಖ್ಯೆಗೂ ಹೊಂದಿಕೆಯಾಗಿಲ್ಲ. ಈ ಅಂತರ ಕನಿಷ್ಠ 267 ಕ್ಷೇತ್ರಗಳಲ್ಲಿ 500 ಮತಗಳಿಗಿಂತಲೂ ಹೆಚ್ಚು ಇದ್ದುದು ಕಂಡು ಬಂದಿದೆ ಎಂದು ಅದು ಹೇಳಿದೆ.
ಇವಿಎಂನಲ್ಲಿ ದಾಖಲಾದ ಮತಗಳ ಸಂಖ್ಯೆಗೂ ಮತ ಎಣಿಕೆ ವೇಳೆ ಅದೇ ಇವಿಎಂ ಮೂಲಕ ಸಿಗುವ ಮತಗಳ ಸಂಖ್ಯೆಗೂ ವ್ಯತ್ಯಾಸ ಕಂಡು ಬಂದಿರುವುದರಿಂದ ಮತದಾರರಲ್ಲಿ ಸಂಶಯ ಮೂಡುತ್ತದೆ. -ಅಂಜಲಿ ಭಾರದ್ವಾಜ್, ಸಾಮಾಜಿಕ ಕಾರ್ಯಕರ್ತೆ
ಹಲವಾರು ಕ್ಷೇತ್ರಗಳಲ್ಲಿ ಇವಿಎಂಗಳಲ್ಲಿ ಹೆಚ್ಚುವರಿ ಮತಗಳು ದಾಖಲಾಗಿರುವ ಬಗ್ಗೆ ಚುನಾವಣಾ ಆಯೋಗ ನಿರ್ದಿಷ್ಟವಾದ ವಿವರಣೆ ನೀಡಬೇಕಾಗಿದೆ.
-ಜಗದೀಪ್ ಚೋಕರ್, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಹಸಂಸ್ಥಾಪಕ