ಬಾಂಗ್ಲಾದೇಶ ಬಿಕ್ಕಟ್ಟು: ಕ್ರಿಕೆಟ್ ತಂಡದ ಮಾಜಿ ನಾಯಕ ಮೊರ್ತಝಾ ಮನೆಗೆ ಬೆಂಕಿ
PC: x.com/smitaprakash
ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿರುವ ನಡುವೆಯೇ ಹಿಂಸಾಚಾರ ಮುಂದುವರಿದಿದ್ದು, ದೇಶಾದ್ಯಂತ ಅರಾಜಕ ಪರಿಸ್ಥಿತಿ ಇದೆ. ಹಿಂಸಾಚಾರದಲ್ಲಿ ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ಮಷ್ರಫೆ ಬಿನ್ ಮೊರ್ತಜಾ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಖುಲ್ನಾ ವಿಭಾಗದ ನರೈಲ್-2 ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಮೊರ್ತಝಾ, ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸದಸ್ಯರಾಗಿದ್ದರು.
ವ್ಯಾಪಕ ವಿದ್ಯಾರ್ಥಿ ಚಳವಳಿಯ ಹಿನ್ನೆಲೆಯಲ್ಲಿ ಪದತ್ಯಾಗ ಮಾಡಿ ಶೇಕ್ ಹಸೀನಾ ಪಲಾಯನ ಮಾಡುತ್ತಿದ್ದಂತೆ, ಪ್ರತಿಭಟನಾಕಾರರು ಮೊರ್ತಝಾ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ. ವೃತ್ತಿಪರ ಕ್ರಿಕೆಟ್ ಜೀವನದಲ್ಲಿ ಮೊರ್ತಝಾ ದೇಶವನ್ನು 117 ಪಂದ್ಯಗಳಲ್ಲಿ ಮುನ್ನಡೆಸಿದ್ದರು. 390 ಅಂತರರಾಷ್ಟ್ರೀಯ ವಿಕೆಟ್ ಗಳನ್ನು ಪಡೆದಿದ್ದ ಅವರು 36 ಟೆಸ್ಟ್, 220 ಏಕದಿನ ಮತ್ತು 54 ಟಿ20 ಪಂದ್ಯಗಳಲ್ಲಿ ಒಟ್ಟು 2955 ರನ್ ಕಲೆ ಹಾಕಿದ್ದರು.
ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಬಳಿಕ ಮೊರ್ತಝಾ ರಾಜಕೀಯ ಪ್ರವೇಶಿಸಿ, ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸೇರಿ ನರೈಲ್-2 ಕ್ಷೇತ್ರದಿಂದ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಪ್ರತಿಭಟನಾಕಾರರು ಜಿಲ್ಲಾ ಅವಾಮಿಲೀಗ್ ಕಚೇರಿಗೂ ಬೆಂಕಿ ಹಚ್ಚಿದ್ದು, ಜಿಲ್ಲಾಧ್ಯಕ್ಷ ಸುಭಾಷ್ ಚಂದ್ರ ಬೋಸ್ ಅವರ ನಿವಾಸವನ್ನೂ ಧ್ವಂಸಗೊಳಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.