ದಿಲ್ಲಿ ಮಾಜಿ ಸಿಎಂ ಕೇಜ್ರಿವಾಲ್ ಹತ್ಯೆಗೆ 'ಸಂಚು': ಎಎಪಿ ಆರೋಪ
ಕೇಜ್ರಿವಾಲ್ ಗೆ ಏನಾದರು ಸಂಭವಿಸಿದರೆ ಬಿಜೆಪಿಯೇ ಹೊಣೆ ಎಂದ ಎಎಪಿ
ಕೇಜ್ರಿವಾಲ್ | PTI
ಹೊಸದಿಲ್ಲಿ: ದಿಲ್ಲಿ ಮಾಜಿ ಸಿಎಂ ಕೇಜ್ರಿವಾಲ್ ಹತ್ಯೆಗೆ 'ಸಂಚು' ರೂಪಿಸಲಾಗಿದೆ ಎಂದು ಎಎಪಿ ಆರೋಪಿಸಿದ್ದು, ಅವರಿಗೆ ಏನಾದರು ಸಂಭವಿಸಿದರೆ ಬಿಜೆಪಿಯೇ ಹೊಣೆ ಎಂದು ಹೇಳಿಕೊಂಡಿದೆ.
ತಮ್ಮ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಹತ್ಯೆಗೆ ಪಿತೂರಿ ನಡೆಸಲಾಗಿದೆ, ಅವರಿಗೆ ಏನಾದರೂ ಸಂಭವಿಸಿದರೆ ಬಿಜೆಪಿಯೇ ಹೊಣೆ. ಪಶ್ಚಿಮ ದಿಲ್ಲಿಯ ವಿಕಾಸಪುರಿಯಲ್ಲಿ ಕೇಜ್ರಿವಾಲ್ ಪಾದಯಾತ್ರೆ ವೇಳೆ ಬಿಜೆಪಿ ಗೂಂಡಾಗಳು ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಆಪ್ ನಾಯಕರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಪೊಲೀಸರ ಸಹಭಾಗಿತ್ವವು ಕೇಜ್ರಿವಾಲ್ ವಿರುದ್ಧದ ಆಳವಾದ ಪಿತೂರಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬಿಜೆಪಿ ಅವರ ಜೀವನದ ಶತ್ರುವಾಗಿದೆ ಎಂದು ಆರೋಪಿಸಿದ್ದಾರೆ. ಸಿಂಗ್ ಅವರ ಆರೋಪದ ಬಗ್ಗೆ ಪೊಲೀಸರು ಅಥವಾ ಬಿಜೆಪಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಕಾಸಪುರಿ ಘಟನೆಯ ಹೊರತಾಗಿಯೂ, ಕೇಜ್ರಿವಾಲ್ ವೇಳಾಪಟ್ಟಿಯ ಪ್ರಕಾರವೇ 'ಪಾದಯಾತ್ರೆ' ಮುಂದುವರೆಸುತ್ತಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಘಟನೆ ಬಗ್ಗೆ ಎಎಪಿ ಏಕೆ ದೂರು ದಾಖಲಿಸಿಲ್ಲ ಎಂದು ಕೇಳಿದಾಗ, ಪೊಲೀಸರು "ನಿಷ್ಪಕ್ಷಪಾತ"ವಾಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ದಾಳಿಕೋರರ ಗುಂಪನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಏನನ್ನೂ ಮಾಡಲಿಲ್ಲ. ಪೊಲೀಸರು ಘಟನೆಯ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಈ ವಿಷಯದಲ್ಲಿ ಮುಂದಿನ ಕ್ರಮಕ್ಕಾಗಿ ಎಎಪಿ ಕಾನೂನು ತಜ್ಞರ ಸಲಹೆ ಪಡೆಯಲಿದೆ ಎಂದು ಸಿಂಗ್ ಹೇಳಿದ್ದಾರೆ.