ಕ್ರೌಡ್‌ಸ್ಟ್ರೈಕ್ ನಿಂದಾಗಿ ಜಾಗತಿಕವಾಗಿ ಮೈಕ್ರೋಸಾಫ್ಟ್ ಗೆ ತಾಂತ್ರಿಕ ಅಡಚಣೆಯಾದದ್ದು ಹೇಗೆ?
ಹೊಸದಿಲ್ಲಿ: ಕ್ರೌಡ್‌ಸ್ಟ್ರೈಕ್ ನಿಂದ ಜಾಗತಿಕವಾಗಿ ಮೈಕ್ರೋಸಾಫ್ಟ್ ತಾಂತ್ರಿಕ ವೈಫಲ್ಯವು ಶುಕ್ರವಾರದಂದು ವಿವಿಧ ಉದ್ಯಮಗಳ ಕಾರ್ಯಾಚರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ವಿಮಾನಗಳ ನಿಲುಗಡೆಯಿಂದ ಹಿಡಿದು, ಬ್ಯಾಂಕಿಂಗ್ ಸೇವೆಗಳಿಂದ ಆರೋಗ್ಯ ಸೇವೆಗಳವರೆಗೆ ವ್ಯತ್ಯಯಗೊಂಡಿತು.
83 ಬಿಲಿಯನ್ ಡಾಲರ್‌ನಷ್ಟು ಮಾರುಕಟ್ಟೆ ಮೌಲ್ಯ ಹೊಂದಿರುವ ಅಮೆರಿಕ ಮೂಲದ ಸೈಬರ್ ಭದ್ರತಾ ಸಂಸ್ಥೆಯಾದ ಕ್ರೌಡ್‌ಸ್ಟ್ರೈಕ್ ಇಡೀ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಸಂಸ್ಥೆಯಾಗಿದೆ. ಈ ಸಂಸ್ಥೆಯ ಅಂತರ್ಜಾಲ ತಾಣದ ಪ್ರಕಾರ, ಈ ಸಂಸ್ಥೆಯು ಜಗತ್ತಿನಾದ್ಯಂತ 20,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ.
ಶುಕ್ರವಾರದಂದು ಜಾಗತಿಕ ಕಾಲಮಾನವಾದ 05:30 ಕ್ಕೆ ಕ್ರೌಡ್‌ಸ್ಟ್ರೈಕ್ ತನ್ನ ಗ್ರಾಹಕರಿಗೆ ರವಾನಿಸಿರುವ ಮುನ್ನೆಚ್ಚರಿಕೆಯ ಪ್ರಕಾರ ಹಾಗೂ ರಾಯಿಟರ್ಸ್ ಪರಾಮರ್ಶಿಸಿರುವಂತೆ, ಕ್ರೌಡ್‌ಸ್ಟ್ರೈಕ್ ಸಂಸ್ಥೆಯ ವ್ಯಾಪಕವಾಗಿ ಬಳಕೆಯಲ್ಲಿರುವ 'Falcon Sensor' ತಂತ್ರಾಂಶವು ಮೈಕ್ರೊಸಾಫ್ಟ್ ವಿಂಡೋಸ್ ಸ್ಥಗಿತಗೊಳ್ಳಲು ಹಾಗೂ Blue Screen of Death ಎಂದು ಕರೆಯಲಾಗುವ ನೀಲಿ ಪರದೆ ಪ್ರದರ್ಶನಗೊಳ್ಳಲು ಕಾರಣ ಎಂದು ಹೇಳಲಾಗಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕ್ರೌಡ್‌ಸ್ಟ್ರೈಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾರ್ಜ್ ಕುರ್ಟ್ಝ್, ಈ ಸಮಸ್ಯೆಯನ್ನು ಪರಿಹರಿಸಲು ಕ್ರೌಡ್‌ಸ್ಟ್ರೈಕ್ ಕಾರ್ಯೋನ್ಮುಖವಾಗಿದೆ ಎಂದು ಹೇಳಿದ್ದಾರೆ. "ಇದು ಭದ್ರತೆಗೆ ಸಂಬಂಧಿಸಿದ ಘಟನೆಯಾಗಲಿ ಅಥವಾ ಸೈಬರ್ ದಾಳಿಯಾಗಲಿ ಅಲ್ಲ" ಎಂದೂ ಅವರು ಬರೆದುಕೊಂಡಿದ್ದಾರೆ.
ಕಂಪ್ಯೂಟರ್‌ಗಳನ್ನು ದುರಸ್ತಿಗೊಳಿಸುವುದಕ್ಕೂ ಮುನ್ನ, ಮರುಚಾಲನೆಗೊಳಿಸಿದಾಗ ಸ್ಥಗಿತಗೊಳ್ಳುವಂತೆ ನೀಲಿ ಪರದೆ ಮಾಡುತ್ತಿರುವುದರಿಂದ, ಕಂಪ್ಯೂಟರ್‌ಗಳಿಗೆ ಆಗಿರುವ ಸಮಸ್ಯೆಯನ್ನು ದೂರ ನಿಯಂತ್ರಿತವಾಗಿ ಎಷ್ಟು ಶೀಘ್ರವಾಗಿ ಪರಿಹರಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
"ಇದರರ್ಥ ಕಂಪ್ಯೂಟರ್ ಅನ್ನು ಸ್ವಯಂಚಾಲಿತವಾಗಿ ದುರಸ್ತಿ ಮಾಡಲು ಸಾಧ್ಯವಿಲ್ಲವೆಂದಾದರೆ, ಮನುಷ್ಯನ ಮಧ್ಯಪ್ರವೇಶ ಅಗತ್ಯವಿದೆ ಎಂದು" ಎನ್ನುತ್ತಾರೆ ಬ್ರಿಟನ್ ಮೂಲದ ಸೈಬರ್ ಭದ್ರತೆ ಸಮಾಲೋಚನಾ ಸಂಸ್ಥೆ PwnDefendನ ಡೇನಿಯಲ್ ಕಾರ್ಡ್.
ಸಮಸ್ಯೆಯ ವ್ಯಾಪ್ತಿ ಬೃಹದಾಕಾರವಾಗಿದೆ ಎನ್ನುತ್ತಾರೆ ಬ್ರಿಟನ್‌ನ CGHQ Intelligence ಸಂಸ್ಥೆಯ ಭಾಗವಾದ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರ(NCSC)ದ ಮಾಜಿ ಮುಖ್ಯಸ್ಥ ಸಿಯಾರನ್ ಮಾರ್ಟಿನ್.
"ಇದು ಅಭೂತಪೂರ್ವವಾದುದೇನೂ ಅಲ್ಲ. ಆದರೆ, ಇಷ್ಟು ದೊಡ್ಡ ಪ್ರಮಾಣದ ವ್ಯತ್ಯಯದ ಬಗ್ಗೆ ಚಿಂತಿಸಲು ನಾನು ಹೆಣಗುತ್ತಿದ್ದೇನೆ. ಇಂತಹುದು ಈ ಹಿಂದಿನ ವರ್ಷಗಳಲ್ಲೂ ನಡೆದಿದೆ. ಆದರೆ, ಇದು ಅತ್ಯಂತ ದೊಡ್ಡ ಪ್ರಮಾಣದ್ದು. ಈ ಸಮಸ್ಯೆಯ ಸ್ವರೂಪ ತುಂಬಾ ಸರಳವಾಗಿರುವುದರಿಂದ, ಇದು ಅಲ್ಪಾವಧಿಯದು ಎಂದು ನನ್ನ ಭಾವನೆ. ಆದರೆ, ಇದು ತುಂಬಾ, ತುಂಬಾ, ತುಂಬಾ ದೊಡ್ಡ ಸಮಸ್ಯೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ದಶಕಗಳಲ್ಲಿ, ಕೋವಿಡ್-19 ಸಾಂಕ್ರಾಮಿಕದ ನಂತರ ವೇಗೋತ್ಕರ್ಷಕ್ಕೆ ಒಳಗಾಗಿರುವ ಅಂತರ್ ಸಂಪರ್ಕ ತಂತ್ರಜ್ಞಾನ ಹೊಂದಿರುವ ಸಾಕಷ್ಟು ಕಂಪನಿಗಳ ಮೇಲಿನ ಸರಕಾರ ಹಾಗೂ ಉದ್ಯಮಗಳ ಅವಲಂಬನೆ ತೀರಾ ಹೆಚ್ಚಿದೆ. ಸೈಬರ್ ವ್ಯತ್ಯಯವು ಆನ್‌ಲೈನ್ ಜಗತ್ತಿನ ಅಪಾಯದ ಹೆಚ್ಚಳವನ್ನು ಬಯಲು ಮಾಡಿದೆ ಎನ್ನುತ್ತಾರೆ ತಜ್ಞರು.
ಹ್ಯಾಕರ್‌ಗಳಿಂದ ತಮ್ಮ ಕಂಪ್ಯೂಟರ್ ಜಾಲಗಳನ್ನು ರಕ್ಷಿಸಿಕೊಳ್ಳಲು ಹಲವಾರು ಉದ್ಯಮಗಳು ತಮ್ಮ ಕಾರ್ಪೊರೇಟ್ ಯಂತ್ರಗಳು ಅಥವಾ ಎಂಡ್‌ಪಾಯಿಂಟ್ಸ್ ಹಿನ್ನೆಲೆಯಲ್ಲಿ ಕಾರ್ಯಾಚರಿಸುವ Endpoint Detection and Response ಅಥವಾ EDR ಎಂದು ಕರೆಯಲಾಗುವ ಸೈಬರ್ ಭದ್ರತಾ ಉತ್ಪನ್ನವನ್ಮು ಬಳಸುತ್ತವೆ.
ಕ್ರೌಡ್‌ಸ್ಟ್ರೈಕ್‌ನಂಥ ಸಂಸ್ಥೆಗಳು ಪ್ರಬಲ ಡಿಜಿಟಲ್ ದಾಳಿ, ವೈರಸ್‌ಗಳ ಸ್ಕ್ಯಾನಿಂಗ್ ಹಾಗೂ ಕಾರ್ಪೊರೇಟ್ ಜಾಲಗಳಿಗೆ ಹ್ಯಾಕರ್‌ಗಳು ಅನಧಿಕೃತ ಪ್ರವೇಶ ಪಡೆಯುವುದನ್ನು ತಪ್ಪಿಸಲು EDR ಉತ್ಪನ್ನಗಳನ್ನು ಮುನ್ನೆಚ್ಚರಿಕಾ ವ್ಯವಸ್ಥೆಯಾಗಿ ಬಳಸುತ್ತವೆ.
ಆದರೆ, ಈ ಪ್ರಕರಣದಲ್ಲಿ, ಕ್ರೌಡ್‌ಸ್ಟ್ರೈಕ್‌ನ ಯಾವುದೋ ಗೋಪ್ಯ ಸಂಕೇತವು ವಿಂಡೋಸ್ ಕಾರ್ಯಾಚರಿಸುವಂತೆ ಮಾಡುವ ಇನ್ನಾವುದೋ ಗೋಪ್ಯ ಸಂಕೇತದೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ ಹಾಗೂ ಮರುಚಾಲನೆಗೊಳಿಸಿದ ನಂತರವೂ ಕಂಪ್ಯೂಟರ್ ಸ್ಥಗಿತಗೊಳ್ಳುವಂತೆ ಮಾಡುತ್ತಿದೆ.
"ಕ್ಲೌಡ್‌ನಲ್ಲಿ ಶೇಖರಿಸಿಡಲು ಮುಂದಾಗಿದ್ದರಿಂದ, ಕ್ರೌಡ್‌ಸ್ಟ್ರೈಕ್‌ನಂಥ ಸಂಸ್ಥೆಗಳು ದೊಡ್ಡ ಪ್ರಮಾಣದ ಮಾರುಕಟ್ಟೆ ಒಡೆತನ ಹೊಂದಿರುವುದರಿಂದ, ಜಗತ್ತಿನಾದ್ಯಂತ ಅವರ ತಂತ್ರಾಂಶಗಳು ಲಕ್ಷಾಂತರ ಕಂಪ್ಯೂಟರ್‌ಗಳಲ್ಲಿ ಕಾರ್ಯಾಚರಿಸುತ್ತಿವೆ" ಎನ್ನುತ್ತಾರೆ ಸಮಸ್ಯೆಯ ಮೂಲದತ್ತ ಬೊಟ್ಟು ಮಾಡುವ ಕಾರ್ಡ್.
ಜಾಗತಿಕ ತಾಂತ್ರಿಕ ವ್ಯತ್ಯಯವು ಸ್ಪೇನ್ ವಿಮಾನ ನಿಲ್ದಾಣಗಳು, ಅಮೆರಿಕ ವಿಮಾನ ಯಾನ ಸಂಸ್ಥೆಗಳು ಹಾಗೂ ಆಸ್ಟ್ರೇಲಿಯಾದ ಮಾಧ್ಯಮ ಮತ್ತು ಬ್ಯಾಂಕ್‌ಗಳು ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವಲಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.
ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಸರಕಾರಗಳು, ಹಲವಾರು ಅಮೆರಿಕ ರಾಜ್ಯಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಇದರೊಂದಿಗೆ, ಅಮೆರಿಕ ಏರ್‌ಲೈನ್ಸ್, ಡೆಲ್ಟಾ ಏರ್‌ಲೈನ್ಸ್, ಯುನೈಟೆಡ್ ಏರ್‌ಲೈನ್ಸ್ ಹಾಗೂ ಅಲಿಜಿಯೆಂಟ್ ಏರ್ ವಿಮಾನ ಯಾನ ಸಂಸ್ಥೆಗಳು ಸಂವಹನ ಸಮಸ್ಯೆಗಳನ್ನು ಮುಂದಿಟ್ಟು, ತಮ್ಮ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.
ಬ್ರಿಟನ್‌ನ ಬಹುದೊಡ್ಡ ಸುದ್ದಿ ವಾಹಿನಿಯಾದ ಸ್ಕೈ ನ್ಯೂಸ್‌ನ ಪ್ರಸಾರವು ಶುಕ್ರವಾರ ಪುನಾರಂಭಗೊಳ್ಳುವುದಕ್ಕೂ ಮುನ್ನ, ಹಲವಾರು ಗಂಟೆಗಳ ಕಾಲ ಅದರ ಪ್ರಸಾರ ಸ್ಥಗಿತಗೊಂಡಿತ್ತು.
ವಿಶ್ವಾದ್ಯಂತ ವಿಮಾನ ಯಾನ ಸೇವೆಗಳಿಂದ ಹಿಡಿದು, ಬ್ಯಾಂಕಿಂಗ್‌ನಿಂದ ಆರೋಗ್ಯ ಸೇವೆವರೆಗಿನ ಉದ್ಯಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವ ಸೈಬರ್ ಸಮಸ್ಯೆಯನ್ನು ಪರಿಹರಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಶುಕ್ರವಾರ ಕ್ರೌಡ್‌ಸ್ಟ್ರೈಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಿಸಿದ್ದಾರೆ.
ಈ ನಡುವೆ, ಟೀಮ್ಸ್ ಹಾಗೂ ಒನ್ ಡ್ರೈವ್ ಸೇರಿದಂತೆ ತನ್ನ 365 ತಂತ್ರಾಂಶಗಳ ವ್ಯತ್ಯಯದ ಹಿಂದಿರುವ ಸಮಸ್ಯೆಯನ್ನು ಮೈಕ್ರೋಸಾಫ್ಟ್ ಸಂಸ್ಥೆಯು ಪ್ರತ್ಯೇಕವಾಗಿ ಪರಿಹರಿಸಿದೆ. ಆದರೆ, ಉಳಿಕೆ ಪರಿಣಾಮಗಳು ಇನ್ನೂ ಕೆಲವು ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಲೇ ಇವೆ.
ಸೌಜನ್ಯ: Reuters