FACT CHECK | KPSC ಪರೀಕ್ಷೆಯ ಕುರಿತು ಸುಳ್ಳು ಸುದ್ದಿ ಪೋಸ್ಟ್ ಮಾಡಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ
ಅಮಿತ್ ಮಾಳವಿಯಾ | PC : PTI
ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡುವಂತೆ ಆಗಸ್ಟ್ 24ರಂದು ವಿದ್ಯಾರ್ಥಿಗಳ ಸಂಘಟನೆಯೊಂದು ಪ್ರತಿಭಟನೆ ನಡೆಸಿದ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಇದೇ ವರದಿಯನ್ನು ಆಧರಿಸಿ, “ಕರ್ನಾಟಕದ ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಕುರಿತು ರಾಹುಲ್ ಗಾಂಧಿ ಮೌನವಾಗಿದ್ದಾರೆ” ಎಂಬ ಸುಳ್ಳು ಮಾಹಿತಿಯನ್ನು ಒಳಗೊಂಡಿರುವ ಪೋಸ್ಟೊಂದನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
PC : X - @amitmalviya
“ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಆಡಳಿತ ಸೇವೆಗಳ ಪರೀಕ್ಷೆಗಳಲ್ಲಿ ಆಗುತ್ತಿರುವ ಹಗರಣಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಶೂಗಳನ್ನು ಪಾಲಿಶ್ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. ಇತ್ತೀಚೆಗಷ್ಟೆ ತಮ್ಮನ್ನು ತಾವು ನ್ಯಾಯಯುತ ಪರೀಕ್ಷೆಗಳ ಪರ ಹೋರಾಟಗಾರ ಎಂದು ಬಿಂಬಿಸಿಕೊಂಡಿದ್ದ ಮೂರು ಬಾರಿ ಪರಾಜಿತರಾದ ರಾಹುಲ್ ಗಾಂಧಿ, ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿಯೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೂ ಮೌನವಾಗಿದ್ದಾರೆ” ಎಂದು ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ಆದರೆ, ಈ ಪ್ರತಿಪಾದನೆ ಸುಳ್ಳು ಎಂಬುದು ಸತ್ಯ ಶೋಧನೆಯಿಂದ ಬಯಲಾಗಿದೆ.
ಫ್ಯಾಕ್ಟ್ ಚೆಕ್
ಅಮಿತ್ ಮಾಳವಿಯಾ ಹಂಚಿಕೊಂಡಿರುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜಸ್ ನಲ್ಲಿ ಶೋಧಿಸಿದಾಗ, ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ವು ಆಗಸ್ಟ್ 27ರಂದು ನಡೆಸಲಿರುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಆಗಸ್ಟ್ 24ರಂದು ಉದ್ಯೋಗಾಕಾಂಕ್ಷಿಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಶೂ ಪಾಲಿಶ್ ಮಾಡುವ ಮೂಲಕ ಪ್ರತಿಭಟಿಸಿರುವುದನ್ನು ‘ಪ್ರಜಾವಾಣಿ’ ಪತ್ರಿಕೆ ವರದಿ ಮಾಡಿರುವ ಸುದ್ದಿಯ ತುಣುಕು ಲಭ್ಯವಾಗಿದೆ.
ಈ ಸುದ್ದಿ ತುಣುಕಿನಲ್ಲಿ ಪ್ರಜಾವಾಣಿ ಪ್ರತಿಭಟನೆಯ ಕುರಿತು ವರದಿ ಮಾಡಿರುವುದು ಕಂಡು ಬರುತ್ತದೆ. ಇದರೊಂದಿಗೆ, ಕನ್ನಡದ ಬಹುತೇಕ ಮಾಧ್ಯಮಗಳೂ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಕುರಿತು ವರದಿ ಮಾಡಿವೆಯೇ ಹೊರತು, ಕೆಪಿಎಸ್ಸಿ ಪ್ರಶ್ನೆನ ಪತ್ರಿಕೆ ಸೋರಿಕೆಯಾಗಿರುವ ಕುರಿತು ಎಲ್ಲೂ ಉಲ್ಲೇಖಿಸಿಲ್ಲ.
PC :Prajavani
ವಿದ್ಯಾರ್ಥಿಗಳ ಸಣ್ಣ ಗುಂಪೊಂದು ಪರೀಕ್ಷೆಯನ್ನು ಮುಂದೂಡುವಂತೆ ಮಾಡಿದ ಪ್ರತಿಭಟನೆಯ ಚಿತ್ರವನ್ನೇ ಬಳಸಿಕೊಂಡು, ಕರ್ನಾಟಕದ ಕೆಪಿಎಸ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ತಿರುಚಿ ಅಮಿತ್ ಮಾಳವಿಯಾ ಸುಳ್ಳು ಸುದ್ದಿ ಹರಡಿದ್ದಾರೆ.
ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದ ವರದಿಯನ್ನೇ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ಎಂದು ತಿರುಚಿ ಅಮಿತ್ ಮಾಳವಿಯಾ ಸುಳ್ಳು ಸುದ್ದಿ ಹರಡಿದ್ದಾರೆ. ಇಂತಹ ಸುಳ್ಳು ಸುದ್ದಿ ಹರಡುತ್ತಿರುವ ಅಮಿತ್ ಮಾಳವಿಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.