FACT CHECK | ಪಾಕಿಸ್ತಾನದ ವಿಡಿಯೋ ಪೋಸ್ಟ್ ಮಾಡಿ ಭಾರತದಲ್ಲಿ ರೈಲು ದುರಂತದ ಷಡ್ಯಂತ್ರ ಎಂದು ಸುಳ್ಳು ಹೇಳಿದ ಚಕ್ರವರ್ತಿ ಸೂಲಿಬೆಲೆ
ಬೆಂಗಳೂರು : ಬಲಪಂಥೀಯ ವಾಗ್ಮಿ, ಸುಳ್ಳು ಸುದ್ದಿ ಹರಡುವ ಕುಖ್ಯಾತಿ ಇರುವ ಚಕ್ರವರ್ತಿ ಸೂಲಿಬೆಲೆ ಪಾಕಿಸ್ತಾನದ ಕರಾಚಿಯ ಹಳೇ ವಿಡಿಯೋ ಪೋಸ್ಟ್ ಮಾಡಿ ಭಾರತದ ರೈಲು ದುರಂತ ಹಿಂದಿನ ಷಡ್ಯಂತ್ರ ಎಂದು ಸುಳ್ಳು ಸುದ್ದಿ ಹರಡಿದ್ದಾರೆ.
ಪಾಕಿಸ್ತಾನದ ಕರಾಚಿಯಲ್ಲಿ ಮಕ್ಕಳು ರೈಲ್ವೆ ಹಳಿಯ ನಟ್ ಬೋಲ್ಟ್ ಕಳ್ಳತನ ಮಾಡುವ ವಿಡಿಯೋ ಡಿಸೆಂಬರ್ 5, 2023 ರಂದು 'ಪಾಕಿಸ್ತಾನಿ ಟ್ರೈನ್ಸ್' ಹೆಸರಿನ ಪ್ರೊಫೈಲ್‌ನಿಂದ ಅಪ್‌ಲೋಡ್ ಆಗಿತ್ತು.
ಅದನ್ನೇ ಮತ್ತೆ ತಮ್ಮ ಎಕ್ಸ್ ಖಾತೆಯಲ್ಲಿ ಶನಿವಾರ ಅಕ್ಟೋಬರ್ 26, 2024 ರಂದು ಅಪ್ ಲೋಡ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ, "ಹೆರೋದು ಹೆರ್ತಾರೆ. ಇಂತಹ ಅಸಹ್ಯಗಳನ್ನು ಹೆರ್ತಾರಲ್ಲ ಇವರು?! ರೈಲು ದುರಂತ ಸುಮ್ ಸುಮ್ನೆ ಆಗ್ತೀರೋದಲ್ಲ. ವ್ಯವಸ್ಥಿತ ಷಡ್ಯಂತ್ರ", ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಪಾಕಿಸ್ತಾನದ ಹಳೇ ವಿಡಿಯೋ ಹಂಚಿಕೊಂಡಿರುವ ಸುಳ್ಳು ಸುದ್ದಿ ಕುಖ್ಯಾತಿಯ ಚಕ್ರವರ್ತಿ ಸೂಲಿಬೆಲೆ, ಸುಳ್ಳು ಸುದ್ದಿ ಹಂಚುವ ಪೋಸ್ಟ್ ಮಾಡಿ ನಿರ್ದಿಷ್ಟ ಸಮುದಾಯಕ್ಕೆ ಅವಮಾನ ಮಾಡುವ ರೀತಿಯ ಭಾಷೆಯನ್ನು ಬಳಸಿದ್ದಾರೆ.
ಭಾರತದಲ್ಲಿ ಇತ್ತೀಚೆಗೆ ರೈಲು ಹಳಿಗಳ ಮೇಲೆ ಏನಾದರೂ ವಸ್ತುಗಳನ್ನು ಇಡುವ ಮೂಲಕ ರೈಲು ಸಂಚಾರಕ್ಕೆ ತೊಂದರೆಯುಂಟು ಮಾಡುವ ಘಟನೆಗಳು ನಡೆಯುತ್ತಿವೆ ಎಂಬ ವರದಿಗಳಿದ್ದವು. ಈ ಘಟನೆಯನ್ನು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟುವ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರಿಂದ ಅವ್ಯಾಹತವಾಗಿ ನಡೆದಿದೆ.
40 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಹಿಂದೆಯೇ ವೈರಲ್ ಆಗಿದೆ. ಎಕ್ಸ್‌ನಲ್ಲಿನ ಕೆಲವು ಬಲಪಂಥೀಯ ಬಳಕೆದಾರರು ಇದನ್ನು 'ರೈಲ್ ಜಿಹಾದ್' ಎಂದು ಟ್ಯಾಗ್ ಮಾಡಿದ್ದಾರೆ. ವೀಡಿಯೊದಲ್ಲಿ, ಮೂರು ಮಕ್ಕಳು ಕುರ್ತಾಗಳನ್ನು ಧರಿಸಿ, ರೈಲ್ವೇ ಹಳಿಗಳ ನಟ್ ಬೋಲ್ಟ್ ತೆಗೆಯುವುದು ಕಾಣುತ್ತದೆ. ಒಬ್ಬ ಬಾಲಕ ದೊಡ್ಡ ಸ್ಪ್ಯಾನರ್‌ನೊಂದಿಗೆ ಫಿಶ್ ಪ್ಲೇಟ್‌ನ ಬೋಲ್ಟ್‌ಗಳನ್ನು ಸಡಿಲಗೊಳಿಸುವುದನ್ನು ಕಾಣುತ್ತದೆ. ಇನ್ನೊಬ್ಬ ಬಾಲಕ ಚೀಲದಲ್ಲಿ ಬೋಲ್ಟ್‌ಗಳನ್ನು ಸಂಗ್ರಹಿಸುವುದು ಸೆರೆಯಾಗಿದೆ.
ಬಲಪಂಥೀಯ ಹಾಗೂ ಸುಳ್ಳು ಸುದ್ದಿ ಕುಖ್ಯಾತಿಯ ಸುದರ್ಶನ್ ನ್ಯೂಸ್‌ನ ಪ್ರಧಾನ ಸಂಪಾದಕ,
@ಸುರೇಶ್ ಚವ್ಹಾಂಕೆ, ಈ ವೀಡಿಯೊವನ್ನು ಈ ಹಿಂದೆಯೇ ಟ್ವೀಟ್ ಮಾಡಿದ್ದರು. ಇಂತಹ ಕೃತ್ಯಗಳಲ್ಲಿ ತೊಡಗಿರುವ ಜನರನ್ನು ಗುಂಡಿಕ್ಕಲು ಆರ್‌ಪಿಎಫ್‌ಗೆ ಆದೇಶ ನೀಡುವಂತೆ ರೈಲ್ವೆ ಸಚಿವರನ್ನು ಅವರು ಒತ್ತಾಯಿಸಿದ್ದರು.
@XSecular_ ಎಂಬ ಬಳಕೆದಾರರು ವೀಡಿಯೊವನ್ನು ಪೋಸ್ಟ್ ಮಾಡಿ, ರೈಲ್ವೆ ಹಳಿಗಳ ಬಳಿ ಇರುವ ಮುಸ್ಲಿಂ ಕೊಳೆಗೇರಿ ನಿವಾಸಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈಲ್ವೆ ಸಚಿವರನ್ನು ಒತ್ತಾಯಿಸಿದ್ದರು. ಈ ಪೋಸ್ಟ್ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. 9,500 ಕ್ಕೂ ಹೆಚ್ಚು ಬಾರಿ ಮರು-ಹಂಚಿಕೊಳ್ಳಲಾಗಿತ್ತು.
ಇದಲ್ಲದೇ ಹಲವಾರು ಬಲಪಂಥೀಯ ಬಳಕೆದಾರು ಇದೇ ಧಾಟಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಫೇಸ್ ಬುಕ್ ಮೂಲಕವೂ ಈ ಪೋಸ್ಟ್ ವೈರಲ್ ಆಗಿದೆ.
ವೈರಲ್ ವೀಡಿಯೊದ ಪ್ರಮುಖ ಫ್ರೇಮ್‌ಗಳಲ್ಲಿ ಒಂದರಲ್ಲಿ ರಿವರ್ಸ್ ಇಮೇಜ್ ನಲ್ಲಿ ಹುಡುಕಾಟವನ್ನು ನಡೆಸಿದಾಗ ಅದು ಪಾಕಿಸ್ತಾನದ ವಿಡಿಯೋ ಎಂದು ಕಂಡು ಬಂದಿದೆ.
ಡಿಸೆಂಬರ್ 5, 2023 ರಂದು 'ಪಾಕಿಸ್ತಾನಿ ಟ್ರೈನ್ಸ್' ಹೆಸರಿನ ಪ್ರೊಫೈಲ್‌ನಿಂದ ಫೇಸ್‌ಬುಕ್ ನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ವೀಡಿಯೊದ ಶೀರ್ಷಿಕೆಯನ್ನು ಉರ್ದುವಿನಿಂದ ಇಂಗ್ಲಿಷ್‌ಗೆ ಅನುವಾದಿಸಿದಾಗ, ಸರ್ತಾಜ್ ಖಾನ್ ಫಾಟಕ್, ಬೋಟ್ ಬೇಸಿನ್ ಚೌಕಿ ಬಳಿ, ರೈಲ್ವೆ ಮಾರ್ಗದ ಬೆಲೆಬಾಳುವ ಸರಕುಗಳು ಬಹಳಷ್ಟು ಕಳ್ಳತನವಾಗುತ್ತಿವೆ. ಇದರ ಬಗ್ಗೆ ಕ್ರಮ ಕೈಗೊಳ್ಳಲು ವಿನಂತಿಸಲಾಗಿದೆ.
ಫೇಸ್‌ಬುಕ್‌ನಲ್ಲಿ ಮತ್ತೊಂದು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಕಳ್ಳತನದಲ್ಲಿ ಭಾಗವಹಿಸಿದ ಮೂವರು ಮಕ್ಕಳನ್ನು ಪಾಕಿಸ್ತಾನದ ಪೊಲೀಸರು ವಿಚಾರಣೆಗೆ ಒಳಪಡಿಸಲಾಗುತ್ತಿರುವ ವಿಡಿಯೋ ಕಂಡು ಬಂದಿದೆ. ಅವರಲ್ಲಿ ಮೂವರೂ ಬಾಲಾಪರಾಧಿಗಳಾಗಿರುವುದರಿಂದ, ಮಕ್ಕಳ ತಂದೆ ವೀಡಿಯೊದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಮಗ ಭಾಗವಹಿಸಿದ್ದ ಕಳ್ಳತನದ ಹೊಣೆಗಾರಿಕೆಯನ್ನು ಅವರೇ ವಹಿಸಿಕೊಳ್ಳುತ್ತಾರೆ. ರೈಲು ಹಳಿಗಳ ನಡುವಿನ ಬೋಲ್ಟ್‌ಗಳು ಮತ್ತು ಸ್ಕ್ರೂಗಳನ್ನು ಮಕ್ಕಳು ಕದ್ದಿರುವುದಾಗಿ ಅವರು ಒಪ್ಪಿಕೊಳ್ಳುವುದನ್ನು ಕಾಣಬಹುದು.
ಭಾರತದಲ್ಲಿ ಅಪಘಾತಗಳನ್ನು ಉಂಟುಮಾಡುವ ಸಲುವಾಗಿ ಮುಸ್ಲಿಂ ಮಕ್ಕಳು ಉದ್ದೇಶಪೂರ್ವಕವಾಗಿ ರೈಲ್ವೆ ಹಳಿಗಳನ್ನು ಹಾಳುಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿರುವ ವೀಡಿಯೊ ಭಾರತದ್ದೇ ಅಲ್ಲ. ಅದು ಪಾಕಿಸ್ತಾನದ ಹೋದ ವರ್ಷದ ವಿಡಿಯೋ.
ಪೂರಕ ಮಾಹಿತಿ : Altnews.in