ಫ್ಯಾಕ್ಟ್ ಚೆಕ್ | ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶೂನ್ಯ ಮತ ಪಡೆದರೇ?
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಿಗೇ, ಸಾಮಾಜಿಕ ಮಾಧ್ಯಮಗಳಲ್ಲಿ ಧುಲೆ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅವಧನ್ ಗ್ರಾಮದವರೆಂದು ಹೇಳಲಾದ ಜನರ ಗುಂಪೊಂದು ಪ್ರತಿಭಟಿಸುತ್ತಿರುವ ವಿಡಿಯೊ ವೈರಲ್ ಆಗಿದೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು, ಧುಲೆ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುನಾಲ್ ಬಾಬಾ ರೋಹಿದಾಸ್ ಚುನಾವಣೆಯಲ್ಲಿ ಶೂನ್ಯ ಮತ ಗಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, PTI ಫ್ಯಾಕ್ಟ್ ಚೆಕ್ ವೇದಿಕೆಯು ಈ ಆರೋಪ ಸುಳ್ಳು ಎಂಬುದನ್ನು ಪತ್ತೆ ಹಚ್ಚಿದೆ.
ನವೆಂಬರ್ 25ರಂದು ವೈರಲ್ ವಿಡಿಯೊವೊಂದನ್ನು ಹಂಚಿಕೊಂಡಿದ್ದ ಫೇಸ್ ಬುಕ್ ಬಳಕೆದಾರರೊಬ್ಬರು, “ಮಹಾರಾಷ್ಟ್ರದ ಅವಧನ್ ಗ್ರಾಮದ ಶೇ. 70ರಷ್ಟು ಜನರು ಪ್ರತಿಭಟಿಸುತ್ತಿದ್ದಾರೆ. ತಾವು ಕಾಂಗ್ರೆಸ್ ಗೆ ಮತ ಚಲಾಯಿಸಿದ್ದರೂ, ಕಾಂಗ್ರೆಸ್ ಅಭ್ಯರ್ಥಿ ಶೂನ್ಯ ಮತ ಗಳಿಸಿರುವುದು ಇದಕ್ಕೆ ಕಾರಣವಾಗಿದೆ. ಇದನ್ನು ಬಯಲು ಮಾಡಲು ಜನರು ಬೀದಿಗಿಳಿದಿದ್ದಾರೆ. ಬಿಜೆಪಿಯ ಮತ ತಿರುಚುವಿಕೆಗೆ ಇನ್ನೆಷ್ಟು ಸಾಕ್ಷ್ಯಗಳ ಅಗತ್ಯವಿದೆ?” ಎಂದು ಬರೆದುಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿ, ಲಕ್ಷಾಂತರ ಮಂದಿ ವೀಕ್ಷಿಸಿದ್ದರು ಹಾಗೂ ಹಲವಾರು ಮಂದಿ ಇದನ್ನು ಸತ್ಯ ಎಂದೇ ನಂಬಿದ್ದರು.
ವಿಡಿಯೊದ ಕೀಫ್ರೇಮ್ ಗಳನ್ನು ಬಳಸಿ ರಿವರ್ಸ್ ಸರ್ಚ್ ಮಾಡಿದಾಗ, ಎಕ್ಸ್ ಬಳಕೆದಾರ ಡಾ. ಸಂಗ್ರಾಮ್ ಗೋಕುಲ್ ಸಿಂಗ್ ಮಾಡಿದ್ದ ಇಂತಹುದೇ ಪೋಸ್ಟ್ ಗೆ ಕರೆದೊಯ್ದಿದೆ.
ಈ ನಡುವೆ, ಅವಧನ್ ಗ್ರಾಮದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಧುಲೆ ಜಿಲ್ಲಾ ಮಾಹಿತಿ ಕಚೇರಿ ಸ್ಪಷ್ಟನೆ ನೀಡಿದೆ. “ಈ ವಿಡಿಯೊವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಅಸ್ಪಷ್ಟವಾಗಿದೆ. ಇದರೊಂದಿಗೆ, ಧುಲೆಯಲ್ಲಿ ಇಂತಹ ಯಾವುದೇ ಘಟನೆ ವರದಿಯಾಗಿಲ್ಲ ಎಂದು ಧುಲೆ ಗ್ರಾಮೀಣ ಕ್ಷೇತ್ರದ ಚುನಾವಣಾಧಿಕಾರಿ ರೋಹನ್ ಕುವರ್ ದೃಢಪಡಿಸಿದ್ದಾರೆ” ಎಂದು ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಧುಲೆ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿರುವ ಅವಧನ್ ಗ್ರಾಮದಲ್ಲಿ 247, 248, 249 ಹಾಗೂ 250 ಸಂಖ್ಯೆಯ ಮತಗಟ್ಟೆಗಳಿವೆ ಎಂದೂ ಜಿಲ್ಲಾ ಮಾಹಿತಿ ಅಧಿಕಾರಿ ವಿವರಿಸಿದ್ದಾರೆ. ಧುಲೆ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಪ್ರಕಾರ, ಈ ಮತಗಟ್ಟೆಗಳಲ್ಲಿ ಕುನಾಲ್ ಬಾಬಾ ರೋಹಿದಾಸ್ ಕ್ರಮವಾಗಿ 227, 234, 252 ಹಾಗೂ 244 ಮತಗಳನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ.
ಧುಲೆ ಗ್ರಾಮೀಣ ವಿಧಾನಸಭಾ ನೋಂದಣಾಧಿಕಾರಿಯ ಅಧಿಕೃತ ಎಕ್ಸ್ ಖಾತೆ ಮಾಹಿತಿ ಪ್ರಕಾರ, ಅವಧನ್ ಗ್ರಾಮದ ಈ ನಾಲ್ಕು ಮತಗಟ್ಟೆಗಳಲ್ಲಿ ಕುನಾಲ್ ಬಾಬಾ ರೋಹಿದಾಸ್ ಒಟ್ಟು 1,057 ಮತಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
ಚುನಾವಣಾ ಆಯೋಗದ ಅಂತರ್ಜಾಲ ತಾಣದ ದತ್ತಾಂಶದ ಪ್ರಕಾರ, ಧುಲೆ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ (ರಾಮ್ ದಾದಾ) ಮನೋಹರ್ ಪಾಟೀಲ್ 66,320 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಒಟ್ಟು 1,70,398 ಮತಗಳನ್ನು ಪಡೆದಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕುನಾಲ್ ಬಾಬಾ ರೋಹಿದಾಸ್ ಪಾಟೀಲ್ 1,04,078 ಮತಗಳನ್ನಷ್ಟೆ ಗಳಿಸಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 230 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರಿ ಬಹುಮತ ಗಳಿಸಿದೆ. ಮತ್ತೊಂದೆಡೆ, ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿ ಮೈತ್ರಿಕೂಟವು ಕೇವಲ 46 ಸ್ಥಾನಗಳಲ್ಲಿ ಗೆಲುವು ಸಾಧಿಸಲಷ್ಟೆ ಶಕ್ತವಾಗಿದೆ.
ಹೀಗಾಗಿ, ವಿಡಿಯೊ ಮೂಲಕ ಮಾಡಲಾಗಿರುವ ವೈರಲ್ ಆರೋಪವು ಸುಳ್ಳು ಎಂಬುದು ಫ್ಯಾಕ್ಟ್ ಚೆಕ್ ನಿಂದ ಬಯಲಾಗಿದೆ. ಈ ಸಂಗತಿಯನ್ನು ಜಿಲ್ಲಾ ಮಾಹಿತಿ ಕಚೇರಿ ಕೂಡಾ ದೃಢಪಡಿಸಿದೆ. ಹೀಗಿದ್ದೂ, ವೈರಲ್ ವಿಡಿಯೊದ ಮೂಲ ಯಾವುದು ಎಂಬುದು ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ.