2007ರ ವಿಶ್ವಕಪ್ ವಿಜೇತ ತಂಡವನ್ನು ಸೋನಿಯಾ ಗಾಂಧಿ ಮಾತ್ರ ಭೇಟಿ ಮಾಡಿದ್ದರೇ?; ಸತ್ಯಾಂಶ ಇಲ್ಲಿದೆ…
PC: Screenshot/X
ಹೊಸದಿಲ್ಲಿ: 2007ರಲ್ಲಿ ಟಿ20 ವಿಶ್ವಕಪ್ ಜಯಿಸಿದ ಭಾರತ ಕ್ರಿಕೆಟ್ ತಂಡದ ಜತೆಗೆ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ನಿಂತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದದ ಕಿಡಿ ಹಬ್ಬಿಸಿದೆ. ಭಾರತೀಯ ಜನತಾ ಪಕ್ಷದ ಐಟಿ ಕೋಶದ ಮುಖ್ಯಸ್ಥ ಅಮಿತ್ ಮಾಳವೀಯ ಈ ಚಿತ್ರವನ್ನು ಹಂಚಿಕೊಂಡಿದ್ದು, ಪ್ರಧಾನಿಯಲ್ಲದಿದ್ದರೂ ಸೋನಿಯಾಗಾಂಧಿ ಕ್ರಿಕೆಟ್ ತಂಡವನ್ನು ಭೇಟಿ ಮಾಡಿದ್ದರು. ತಮ್ಮ ವಿಶೇಷ ಹಕ್ಕಿನ ಕಾರಣದಿಂದ ಹೀಗೆ ಮಾಡಿದ್ದರು ಎಂದು ಅವರು ಪ್ರತಿಪಾದಿಸಿದ್ದರು. ತಂಡವನ್ನು ಭೇಟಿ ಮಾಡುವ ಅವಕಾಶ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಸಿಕ್ಕಿರಲಿಲ್ಲ ಎನ್ನುವ ಇಂಗಿತ ವ್ಯಕ್ತಪಡಿಸಿದ್ದರು.
ಆದರೆ ಇದು ತಪ್ಪು ಎನ್ನುವ ಅಂಶ ಸತ್ಯಶೋಧನೆಯಿಂದ ಬಹಿರಂಗವಾಗಿದೆ. ವಿಜೇತ ತಂಡ 2007ರ ಅಕ್ಟೋಬರ್ 30ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ಚಿತ್ರ ಹಾಗೂ ವರದಿಗಳು ಈ ಪ್ರತಿಪಾದನೆಯನ್ನು ಸುಳ್ಳು ಎಂದು ದೃಢಪಡಿಸಿವೆ.
ಈ ವೈರಲ್ ಫೋಟೊವನ್ನು ರಿವರ್ಸ್ ಇಮೇಜ್ ಸರ್ಚ್ಗೆ ಒಳಪಡಿಸಿದಾಗ, ಇದು 2007ರ ಅಕ್ಟೋಬರ್ 30ರಂದು ಯುಪಿಎ ಅಧ್ಯಕ್ಷೆ ವಿಜೇತ ತಂಡದ ಜತೆ ಇರುವ ಫೋಟೊ ಎನ್ನುವುದು ದೃಢಪಟ್ಟಿದೆ. ಇದರ ಜತೆಗೆ ವಿಜೇತ ತಂಡ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿರುವ ಚಿತ್ರವೂ ಕಂಡುಬಂದಿದೆ.
ಈ ಬಗ್ಗೆ 2007ರ ಅಕ್ಟೋಬರ್ 31ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿ ಕೂಡಾ ಗೂಗಲ್ ಸರ್ಚ್ನಲ್ಲಿ ಪತ್ತೆಯಾಗಿದೆ. ಪ್ರಧಾನಿ ಜತೆಗೆ ಅಂಬಿಕಾ ಸೋನಿ, ಪೃಥ್ವಿರಾಜ್ ಚವ್ಹಾಣ್ ಮತ್ತು ರಾಜೀವ್ ಶುಕ್ಲಾ ಕೂಡಾ ಭೇಟಿಯಾಗಿದ್ದರು ಎನ್ನುವುದು ವಾಸ್ತವ.