ಫ್ಯಾಕ್ಟ್ ಚೆಕ್ : ಸಿಎಎ ಪ್ರತಿಭಟನೆ ಸಂದರ್ಭದ ವೀಡಿಯೊಗೆ ಹಮಾಸ್ ತಳುಕು ಹಾಕಿ ಸುಳ್ಳು ಸುದ್ದಿ ಮಾಡಿದ ಸುವರ್ಣ ನ್ಯೂಸ್!
2019 ರ ವೀಡಿಯೊವನ್ನು 2023 ರ ವೀಡಿಯೊ ಎಂದು ಮತ್ತೆ ವೈರಲ್
ಬೆಂಗಳೂರು: ಸುವರ್ಣ ನ್ಯೂಸ್ ವೆಬ್ ಪೋರ್ಟಲ್ ನವೆಂಬರ್ 7 ರಂದು “ಹಮಾಸ್ 5 ಲಕ್ಷ -ನಾವು 25 ಕೋಟಿ, ಭಾರತದ ಸಂವಿಧಾನ ಕಿತ್ತುಹಾಕಿ ಶರಿಯಾ ಕಾನೂನು ತರುತ್ತೇವೆ” ಎಂಬ ಶೀರ್ಷಿಕೆಯ ಸುದ್ದಿ ಪ್ರಕಟಿಸಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ “ಮಲಗಿದ ಹಿಂದೂಗಳೇ ಎದ್ದೇಳಿ ಇದ್ದನ್ನು ಓದಿ ಪ್ಲೀಸ್..” ಎಂಬ ಒಕ್ಕಣೆಯಲ್ಲಿ ಪೋಸ್ಟರ್ಗಳನ್ನೂ ಹರಡಲಾಗುತ್ತಿದೆ.
ವೀಡಿಯೊದಲ್ಲಿ ಅನಾಮಿಕನೊಬ್ಬ ಅಪಾರ ಬೆಂಬಲಿಗರ ಸಮ್ಮುಖದಲ್ಲಿ ಮಾಧ್ಯಮದ ಜೊತೆ ಮಾತನಾಡಿದ್ದಾನೆ. “ಅವರು 5 ಲಕ್ಷ ಮಾತ್ರ. ಆದರೆ ನಾವು 25 ಕೋಟಿ ಮಂದಿ ಇದ್ದೇವೆ. ಮೋದಿ ಹಾಗೂ ಅಮಿತ್ ಶಾ ಸರಿಯಾಗಿ ಕೇಳಿಸಿಕೊಳ್ಳಿ. 25 ಕೋಟಿ ಜನಸಂಖ್ಯೆಯಲ್ಲಿ 5 ಕೋಟಿ ಮಂದಿ ಹೋರಾಟದಲ್ಲಿ ಪ್ರಾಣ ನೀಡಿದರೂ ನಾವು 20 ಕೋಟಿ ಇರುತ್ತೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನ ಬದಲಿಸಿ, ಶರಿಯಾ ಕಾನೂನು ಜಾರಿಗೆ ತರುತ್ತೇವೆ” ಎಂದಿರುವ ವೀಡಿಯೊ ಈಗ ವೈರಲಾಗಿದೆ.
ಈ ವೀಡಿಯೊವನ್ನು ಹಂಚಿಕೊಂಡಿರುವ ಬಲಪಂಥೀಯರು ವಿವಿಧ ರೀತಿಯ ಶೀರ್ಷಿಕೆಗಳನ್ನು ಬರೆದಿದ್ದಾರೆ.
ನಾರ್ಬರ್ಟ್ ಎಲೈಕ್ಸ್ ಎಂಬ x ಬಳಕೆದಾರ ನವೆಂಬರ್ 7 ರ ಸೋಮವಾರದಂದು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ "ವೀಕ್ಷಿಸಿ: ಭಾರತೀಯ ಮುಸ್ಲಿಂ ವ್ಯಕ್ತಿಯೊಬ್ಬರು ಹೇಳುತ್ತಾರೆ" ಅವರು (ಹಮಾಸ್) ಕೇವಲ 5 ಲಕ್ಷ (0.5 ಮಿಲಿಯನ್), ನಾವು 25 ಕೋಟಿ (250 ಮಿಲಿಯನ್), ಸಹ 5 ಕೋಟಿ (50 ಮಿಲಿಯನ್) ಸತ್ತರೆ. ನಿನಗೆ ತಕ್ಕ ಪಾಠ ಕಲಿಸುತ್ತೇವೆ. ನಾವು ಭಾರತದ ಸಂವಿಧಾನವನ್ನು ಬದಲಾಯಿಸುತ್ತೇವೆ ಮತ್ತು ಹೊಸ ಸಂವಿಧಾನವನ್ನು (ಶರಿಯಾ ಕಾನೂನು) ಸ್ಥಾಪಿಸುತ್ತೇವೆ ಎನ್ನುತ್ತಾರೆ. ಹಿಂದೆ ನೆರೆದಿದ್ದ ಜನಸಮೂಹವು ಆ ವ್ಯಕ್ತಿಯನ್ನು ಹುರಿದುಂಬಿಸುತ್ತಿದೆ. ಜಗತ್ತು ಈಗ ಅಂತಹ ಜಿಹಾದಿ ಹಂದಿಗಳಿಗೆ ಸ್ಥಳಾವಕಾಶ ನೀಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
ಮಿಸ್ಟರ್ ಸಿನ್ಹಾ ಹೆಸರಿನ ಹ್ಯಾಂಡಲ್ ಅಕ್ಟೋಬರ್ 13, 2023 ರಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಸಿನ್ಹಾ ಅವರು “ಇಲ್ಲಿ ಭಾರತದ ಮುಸ್ಲಿಂ ನಾಯಕರೊಬ್ಬರು ಪ್ರಧಾನಿ ಮೋದಿ ಮತ್ತು ಭಾರತ ಸರ್ಕಾರಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ.
"ಮೋದಿ, ಎಚ್ಚರಿಕೆಯಿಂದ ಆಲಿಸಿ, ನಾವು 5 ಲಕ್ಷ ಅಲ್ಲ 25 ಕೋಟಿ ಜನಸಂಖ್ಯೆ, ನಾವು ಪ್ರತಿಯೊಬ್ಬ ಹಿಂದೂಗಳನ್ನು ಮುಗಿಸುತ್ತೇವೆ, ನಾವು ಭಾರತದಿಂದ ಪ್ರಜಾಪ್ರಭುತ್ವವನ್ನು ಮುಗಿಸುತ್ತೇವೆ ಮತ್ತು ನಮ್ಮ ಇತಿಹಾಸವನ್ನು ಬರೆಯುತ್ತೇವೆ" ಎಂದು ಬರೆದಿದ್ದಾರೆ. @BarackObama ಅವರಿಗೆ ಟ್ಯಾಗ್ ಮಾಡಿ, ಒಬಾಮ ಅವರು ಈ ಸಮುದಾಯವನ್ನು ಭಾರತದಲ್ಲಿ ತುಳಿತಕ್ಕೊಳಗಾಗುತ್ತಿದ್ದಾರೆ ಎಂದು ಭಾವಿಸುತ್ತಾರೆ. ಅವರಿಗೆ ಇನ್ನೇನು ಸ್ವಾತಂತ್ರ್ಯ ಬೇಕು?” ಎಂದಿದ್ದಾರೆ. ಈ ಬಳಕೆದಾರನನ್ನು ಪಿಎಂ ಮೋದಿ ಫಾಲೋ ಮಾಡುತ್ತಾರೆ.
ಇದೇ ವೀಡಿಯೊವನ್ನು ಆಶಿಶ್ ಮೆರ್ಖೆಡ್ ಎಂಬ ಇನ್ನೊಬ್ಬ ಬಳಕೆದಾರ ಜನವರಿ 2020 ರಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಹಂಚಿಕೊಂಡಿದ್ದಾರೆ. ಈ ಬಳಕೆದಾರನನ್ನೂ ಪಿಎಂ ಮೋದಿ ಫಾಲೋ ಮಾಡುತ್ತಾರೆ.
ನಾರ್ಬರ್ಟ್ ಎಲೈಕ್ಸ್ ಅವರು ಸೋಮವಾರ, ನವೆಂಬರ್ 7 ರಂದು ಹಮಾಸ್ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಭಾರತೀಯ ಸಂವಿಧಾನವನ್ನು ಬದಲಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳುವ ಮೂಲಕ ತಪ್ಪುದಾರಿಗೆಳೆಯುವ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡ ನಂತರ, ಅವರ ಟ್ವೀಟ್ ಅನ್ನು ಸುಮಾರು 9000 ಬಾರಿ ಹಂಚಿಕೊಳ್ಳಲಾಗಿದೆ ಮತ್ತು ಅದು 13,000 ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ ಮತ್ತು ಸುಮಾರು 2000 ಕಾಮೆಂಟ್‌ಗಳನ್ನು ದಾಖಲಾಗಿದೆ. ನಂತರ ಬಲಪಂಥೀಯ ಬಳಕೆದಾರರು ಅದನ್ನು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲು ಪೋಸ್ಟ್‌ಗಳ ಪೋಸ್ಟರ್‌ಗಳನ್ನು ಮಾಡಿದ್ದಾರೆ.
25 ಸೆಕೆಂಡ್ ಗಳ ಈ ವೀಡಿಯೊದಲ್ಲಿ ಎಲ್ಲೂ ಆತ ಎಲ್ಲೂ ಹಮಾಸ್ – ಇಸ್ರೇಲ್ ಪದ ಬಳಸಿಲ್ಲ. ಅಥವಾ ಈಗ ನಡೆಯುತ್ತಿರುವ 2023 ರ ಹಮಾಸ್ – ಇಸ್ರೇಲ್ ಸಂಘರ್ಷವನ್ನು ಉಲ್ಲೇಖಿಸಿಲ್ಲ. ಆದಾಗ್ಯೂ, ಹಮಾಸ್ ಗೆ , ಮುಸ್ಲಿಮರಿಗೆ ತಳುಕು ಹಾಕಿ ಪೋಸ್ಟರ್, ಸುದ್ದಿ ವೈರಲ್ ಮಾಡಲಾಗಿದೆ. ವಾಸ್ತವವಾಗಿ ಸುದ್ದಿ ಬರೆದ ಸುವರ್ಣ ವೆಬ್ ಪೋರ್ಟಲ್ ನಲ್ಲಿ ಸುದ್ದಿಯ, ವೀಡಿಯೊದ ಮೂಲದ ಕುರಿತು, ಮಾಹಿತಿಯೂ ಇಲ್ಲ. ಸಷ್ಟತೆಯೂ ಇಲ್ಲ. ಸುದ್ದಿಯ ಕೊನೆಗೆ ವೆಬ್ ಪೋರ್ಟಲ್ ನಲ್ಲಿ “ಎಕ್ಸ್(ಟ್ವಿಟರ್), ರೆಡಿಟ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋ ಸತ್ಯಾಸತ್ಯತೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಇಂತದೊಂದು ವಿಡಿಯೋ ಹರಿದಾಡುತ್ತಿದ್ದು, ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ” ಎಂದು ಸೇರಿಸಲಾಗಿದೆ.
ಈ ವೀಡಿಯೊ ಸತ್ಯಾಸತ್ಯತೆಯ ಕುರಿತು ಪರಿಶೀಲಿಸಿದಾಗ ಇದು 2019ರ ಡಿಸೆಂಬರ್ ನಲ್ಲಿ ಭಾರತದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭ ಚಿತ್ರಿಸಿದ ವೀಡಿಯೊ. ಪ್ರತಿಭಟನೆ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅನಾಮಿಕನೊಬ್ಬ ಸಿಎಎ ಕಾನೂನುಗಳನ್ನು ವಿರೋಧಿಸಿ ನೀಡಿದ ಹೇಳಿಕೆ ಇದು. ಆ ಸಂದರ್ಭದಲ್ಲೇ ಈ ವೀಡಿಯೊ ವೈರಲಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊದಲ್ಲಿನ ಹೇಳಿಕೆಗಳ ಬಗ್ಗೆ ಟೀಕೆಗಳು ಬಂದಿತ್ತು. ಈಗ ಹಮಾಸ್ – ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಮತ್ತೆ ಅದನ್ನು ಹರಿಬಿಡಲಾಗಿದೆ. ಮುಸಲ್ಮಾನರ ಬಗ್ಗೆ, ಟೀಕೆ, ಅವಹೇಳನ ಮಾಡಲು ಇದನ್ನು ಬಳಸಲಾಗುತ್ತಿದೆ.