ಪ್ರಧಾನಿ ಮೋದಿಯ ಐದು ದಿನಗಳ ಭಾಷಣಗಳ ಸತ್ಯ ಪರಿಶೀಲನೆ: ಸುಳ್ಳುಗಳ ಪಟ್ಟಿ
ಪ್ರಧಾನಿ ಮೋದಿ (PTI)
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವಾರ ತನ್ನ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಪದೇ ಪದೇ ಸುಳ್ಳುಗಳನ್ನು ಹೇಳಿದ್ದಾರೆ. ಐದು ದಿನಗಳ ಪ್ರಧಾನಿ ಮೋದಿಯವರ ಭಾಷಣದ ಸತ್ಯಾಸತ್ಯತೆಯನ್ನು scroll.in ಗೆ ತಬಸ್ಸುಮ್ ಬಾರ್ನಗರವಾಲಾ ಮತ್ತು ಅಭೀಕ್ ದೇಬ್ ಪರಿಶೀಲಿಸಿದ್ದಾರೆ.
ಮೋದಿಯವರ ಸುಳ್ಳುಗಳ ಸರಮಾಲೆ ಎ.21ರಂದು ರಾಜಸ್ಥಾನದ ಬಾಂಸವಾಡಾದಲ್ಲಿ ಅವರ ಭಾಷಣದೊಂದಿಗೆ ಆರಂಭಗೊಂಡಿತ್ತು. ಖಾಸಗಿ ಸಂಪತ್ತನ್ನು ವಶಪಡಿಸಿಕೊಳ್ಳಲು ಮತ್ತು ಅದನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲು ಕಾಂಗ್ರೆಸ್ ಯೋಜಿಸಿದೆ ಎಂದು ಪ್ರತಿಪಾದಿಸಿದ್ದ ಮೋದಿ, ಮುಸ್ಲಿಮರನ್ನು ‘ನುಸುಳುಕೋರರು’ ಮತ್ತು ‘ಹೆಚ್ಚು ಮಕ್ಕಳನ್ನು ಹೊಂದಿರುವವರು ’ಎಂದು ಬಣ್ಣಿಸಿದ್ದರು.
ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸಬಹುದಾದ ಅಥವಾ ವಿವಿಧ ಜಾತಿಗಳು ಮತ್ತು ಧಾರ್ಮಿಕ ಅಥವಾ ಭಾಷಾ ಸಮುದಾಯಗಳ ನಡುವೆ ಪರಸ್ಪರ ದ್ವೇಷವನ್ನು ಸೃಷ್ಟಿಸುವ ಅಥವಾ ಉದ್ವಿಗ್ನತೆಗೆ ಕಾರಣವಾಗುವ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಮಾದರಿ ನೀತಿ ಸಂಹಿತೆಯು ಹೇಳುತ್ತದೆ ಮತ್ತು ಇದೇ ಸಂಹಿತೆಯಡಿ ಭಾರತದಲ್ಲಿ ಚುನಾವಣೆಗಳು ನಡೆಯುತ್ತಿವೆ.
ಮೋದಿ ದ್ವೇಷ ಭಾಷಣದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ ಬಳಿಕ ಪ್ರಧಾನಿಯವರು ಮುಸ್ಲಿಮರನ್ನು ಸ್ಪಷ್ಟವಾಗಿ ಉಲ್ಲೇಖಿಸುವುದನ್ನು ನಿಲ್ಲಿಸಿದ್ದರು,ಆದರೆ ಒಂದು ದಿನದ ಮಟ್ಟಿಗೆ ಮಾತ್ರ.....
ಎ.23ರ ವೇಳೆಗೆ ಮೋದಿ ಮತ್ತೆ ಮುಸ್ಲಿಮ್ ಸಮುದಾಯದ ವಿರುದ್ಧ ಸುಳ್ಳು ಮತ್ತು ವಿಭಜಕ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದರು.
ಐದು ದಿನಗಳ ಕಾಲ ಮೋದಿಯವರು ಮಾಡಿದ ಪ್ರತಿಯೊಂದೂ ಭಾಷಣವನ್ನು scroll.in ಆಲಿಸಿದೆ ಮತ್ತು ಅವರ ಹೇಳಿಕೆಗಳನ್ನು ಸತ್ಯ ಪರಿಶೀಲನೆಗೆ ಒಳಪಡಿಸಿದೆ. ರಾಜಕೀಯ ಭಾಷಣಗಳಲ್ಲಿಯ ಸಾಮಾನ್ಯ ಉತ್ಪ್ರೇಕ್ಷೆಗಳನ್ನು (ಉದಾಹರಣೆಗೆ ಕಲ್ಯಾಣ ಯೋಜನೆಯ ಯಶಸ್ಸನ್ನು ಅತಿಯಾಗಿ ಹೇಳಿಕೊಳ್ಳುವುದು) ಕಡೆಗಣಿಸಿ ಪ್ರಧಾನಿಯ ಗಣನೀಯ, ವಿಭಜಕ ಸುಳ್ಳುಗಳ ಮೇಲೆ ನಾವು ಗಮನವನ್ನು ಕೇಂದ್ರೀಕರಿಸಿದ್ದೆವು. ನಾವು ಕಂಡುಕೊಂಡಿದ್ದು ಇಲ್ಲಿದೆ.....
ಎಪ್ರಿಲ್ 21, ಬಾಂಸವಾಡಾ
ಹೇಳಿಕೆ: ವಿವಾಹಿತ ಹಿಂದು ಮಹಿಳೆಯರ ಮಂಗಳಸೂತ್ರ ಸೇರಿದಂತೆ ಖಾಸಗಿ ಸಂಪತ್ತನ್ನು ಸಮೀಕ್ಷೆ ಮಾಡಿ ವಶಪಡಿಸಿಕೊಳ್ಳುವುದಾಗಿ ಮತ್ತು ಮರುಹಂಚಿಕೆ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆ ಹೇಳಿದೆ ಎಂದು ಮೋದಿ ಪ್ರತಿಪಾದಿಸಿದ್ದರು.
ಸತ್ಯಾಂಶ: ಮಹಿಳೆಯರ ಮಂಗಳ ಸೂತ್ರ ಬಿಡಿ, ಖಾಸಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಯಾವುದೇ ಪ್ರಸ್ತಾವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇಲ್ಲ.
ಹೇಳಿಕೆ: ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರು ಮೊದಲ ಹಕ್ಕು ಹೊಂದಿದ್ದಾರೆ ಎಂದು ಹಿಂದಿನ ಕಾಂಗ್ರೆಸ್ ಸರಕಾರ ಹೇಳಿತ್ತು ಎಂದು ಮೋದಿ ಪ್ರತಿಪಾದಿಸಿದ್ದರು.
ಸತ್ಯಾಂಶ: ಇದು 2009ರಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ಮಾಡಿದ್ದ ಭಾಷಣದ ತಿರುಚುವಿಕೆಯಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರವಲ್ಲ, ಎಸ್ಸಿ/ಎಸ್ಟಿಗಳು,ಒಬಿಸಿಗಳು,ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಭಾರತದಲ್ಲಿಯ ಎಲ್ಲ ಹಿಂದುಳಿದ ವರ್ಗಗಳ ಏಳಿಗೆಯ ಅಗತ್ಯದ ಕುರಿತು ಅವರು ಮಾತನಾಡಿದ್ದರು.
ಹೇಳಿಕೆ: ನಂತರ ಮೋದಿ ಕಾಂಗ್ರೆಸ್ ಸಂಪತ್ತನ್ನು ‘ನುಸುಳುಕೋರರು’ ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ’ (ಮುಸ್ಲಿಮರನ್ನು ಉಲ್ಲೇಖಿಸಿ) ಮರುಹಂಚುತ್ತದೆ ಎಂದು ಹೇಳಿದ್ದರು.
ಸತ್ಯಾಂಶ: ಮುಸ್ಲಿಮರು ‘ನುಸುಳುಕೋರರು ’ಎಂಬ ಪ್ರಚೋದನೆಗೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಅಕ್ರಮ ವಲಸಿಗರ ಬಗ್ಗೆ ತನಗೆ ಯಾವುದೇ ಮಾಹಿತಿಯಿಲ್ಲ ಎಂದು ಮೋದಿ ಸರಕಾರವು ಸಂಸತ್ತಿನಲ್ಲಿ ಪದೇ ಪದೇ ಹೇಳಿದೆ. ಭಾರತೀಯ ಮುಸ್ಲಿಮರ ಫಲವತ್ತತೆ ಹಿಂದುಗಳಿಗಿಂತ ಹೆಚ್ಚಿದ್ದರೂ ಅದು ಇತರ ಎಲ್ಲ ಸಮುದಾಯಗಳಿಗಿಂತ ವೇಗವಾಗಿ ಕುಸಿಯುತ್ತಿದೆ. ಅಲ್ಲದೆ ಫಲವಂತಿಕೆಯು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದೆಯೇ ಹೊರತು ಧರ್ಮಕ್ಕಲ್ಲ;ಹೆಚ್ಚು ಅಭಿವೃದ್ಧಿಯನ್ನು ಹೊಂದಿರುವ ರಾಜ್ಯವಾದ ತಮಿಳುನಾಡಿನಲ್ಲಿಯ ಮುಸ್ಲಿಮರು ಬಡರಾಜ್ಯ ಬಿಹಾರದ ಹಿಂದುಗಳಿಗಿಂತ ಕಡಿಮೆ ಮಕ್ಕಳನ್ನು ಹೆರುತ್ತಾರೆ.
ಎ.22, ಅಲಿಗಡ
ಹೇಳಿಕೆ: ಕಾಂಗ್ರೆಸ್ ಪ್ರಣಾಳಿಕೆಯು ಖಾಸಗಿ ಆಸ್ತಿಯ ಸಮೀಕ್ಷೆ ನಡೆಸಿ ವಶಪಡಿಸಿಕೊಳ್ಳುವ ಬೆದರಿಕೆಯನ್ನು ಒಡ್ಡಿದೆ ಎಂಬ ತನ್ನ ಸುಳ್ಳನ್ನು ಮೋದಿ ಪುನರುಚ್ಚರಿಸಿದ್ದರು. ಪಕ್ಷವು ಅಧಿಕಾರಕ್ಕೆ ಬಂದರೆ ನೀವು ಎಷ್ಟು ಆದಾಯ, ಆಸ್ತಿ, ಸಂಪತ್ತು, ಮನೆಗಳನ್ನು ಹೊಂದಿದ್ದೀರಿ ಎನ್ನುವುದನ್ನು ಕಂಡು ಹಿಡಿಯಲು ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಕಾಂಗ್ರೆಸ್ನ ಯುವರಾಜ (ರಾಹುಲ್ ಗಾಂಧಿಯವರನ್ನು ಉಲ್ಲೇಖಿಸಿ) ಹೇಳಿದ್ದಾರೆ. ಸರಕಾರವು ಆಸ್ತಿಯನ್ನು ವಶಪಡಿಸಿಕೊಳ್ಳುತ್ತದೆ ಮತ್ತು ಮರುಹಂಚಿಕೆ ಮಾಡುತ್ತದೆ. ಕಾಂಗ್ರೆಸ್ ಪ್ರಣಾಳಿಕೆ ಇದನ್ನೇ ಹೇಳಿದೆ ಎಂದು ಮೋದಿ ತಿಳಿಸಿದ್ದರು.
ಸತ್ಯಾಂಶ: ಕಾಂಗ್ರೆಸ್ ಪ್ರಣಾಳಿಕೆ ಇದನ್ನು ಹೇಳಿಲ್ಲ. ಎ.6ರಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಾಗ ರಾಹುಲ್,ನಾವು ದೇಶದ ಎಕ್ಸ್-ರೇ ನಡೆಸುತ್ತೇವೆ. ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು, ಸಾಮಾನ್ಯವರ್ಗಕ್ಕೆ ಸೇರಿದ ಬಡವರು ಮತ್ತು ಅಲ್ಪಸಂಖ್ಯಾತರು ದೇಶದಲ್ಲಿ ತಮ್ಮ ಪಾಲು ಎಷ್ಟು ಎನ್ನುವುದನ್ನು ತಿಳಿದುಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಆದರೆ ಖಾಸಗಿ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಾಗಿ ಮತ್ತು ಮರುಹಂಚಿಕೆ ಮಾಡುವುದಾಗಿ ಅವರು ಹೇಳಿರಲಿಲ್ಲ.
ಸರಕಾರಿ ಭೂಮಿ ಮತ್ತು ಭೂ ಮಿತಿ ಕಾಯ್ದೆಗಳಡಿ ಹೆಚ್ಚುವರಿ ಭೂಮಿಯನ್ನು ಬಡವರಿಗೆ ವಿತರಣೆಯ ಮೇಲ್ವಿಚಾರಣೆಗಾಗಿ ಪ್ರಾಧಿಕಾರವೊಂದನ್ನು ಕಾಂಗ್ರೆಸ್ ಸ್ಥಾಪಿಸಲಿದೆ;ಇದು ಕಾಂಗ್ರೆಸ್ ಪ್ರಣಾಣಿಕೆಯಲ್ಲಿನ ಏಕೈಕ ಮರುಹಂಚಿಕೆಯ ಉಲ್ಲೇಖ ಮತ್ತು ಇದು ಅಷ್ಟೇನೂ ಕ್ರಾಂತಿಕಾರಿ ಭರವಸೆಯಲ್ಲ. ದೇಶದಲ್ಲಿ ಭೂ ಒಡೆತನದಲ್ಲಿ ಐತಿಹಾಸಿಕ ಅಸಮಾನತೆಯನ್ನು ನಿವಾರಿಸಲು ಭಾರತದ 21 ರಾಜ್ಯಗಳು ಭೂ ಮಿತಿ ಕಾನೂನುಗಳನ್ನು ಹೊಂದಿವೆ.
ಎ.23,ಟೊಂಕ್-ಸವಾಯ್ ಮಾಧೋಪುರ
ಹೇಳಿಕೆ: ಕಾಂಗ್ರೆಸ್ ಎಲ್ಲ ಆಸ್ತಿಗಳನ್ನು ವಶಪಡಿಸಿಕೊಳ್ಳುತ್ತದೆ ಮತ್ತು ಮರುಹಂಚಿಕೆ ಮಾಡುತ್ತದೆ ಎಂಬ ತನ್ನ ಹಳಸಲು ಹೇಳಿಕೆಯನ್ನೇ ಇಲ್ಲಿಯೂ ಮೋದಿ ಪುನರುಚ್ಚರಿಸಿದ್ದರು.
ಸತ್ಯಾಂಶ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಥವಾ ಅದರ ನಾಯಕರ ಭಾಷಣಗಳಲ್ಲಿ ಸರಕಾರವು ಜನರ ಆಸ್ತಿಗಳನ್ನು ವಶಪಡಿಸಿಕೊಂಡು ಅದನ್ನು ಮರುಹಂಚಿಕೆ ಮಾಡುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಎ.24,ಸಾಗರ
ಹೇಳಿಕೆ: ಕಾಂಗ್ರೆಸ್ ಕರ್ನಾಟದಲ್ಲಿ ಕಾನೂನುಬಾಹಿರವಾಗಿ ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಕಲ್ಪಿಸಿದೆ ಎಂದು ಮೋದಿ ಹೇಳಿದ್ದರು. ಕಾಂಗ್ರೆಸ್ ಒಬಿಸಿ ಮೀಸಲಾತಿಗಳ ದೊಡ್ಡ ಪಾಲನ್ನು ಕಿತ್ತುಕೊಂಡು ಅದನ್ನು ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಿದೆ ಎಂದು ಕಿಡಿಕಾರಿದ್ದರು.
ಸತ್ಯಾಂಶ: 1962ರಲ್ಲಿ ಕರ್ನಾಟಕ ಸರಕಾರವು ಮುಸ್ಲಿಮ್ ಸಮುದಾಯದ ಕೆಲವು ಜಾತಿಗಳನ್ನು ಒಬಿಸಿಗಳ ಪಟ್ಟಿಯಲ್ಲಿ ಸೇರಿಸಿತ್ತು. ಇದಕ್ಕೆ ಧರ್ಮವು ಆಧಾರವಾಗಿರಲಿಲ್ಲ, ಆರ್,ನಾಗನಗೌಡ ಆಯೋಗದ ಶಿಫಾರಸಿನ ಮೇರೆಗೆ ಸರಕಾರವು ಈ ಕ್ರಮವನ್ನು ತೆಗೆದುಕೊಂಡಿತ್ತು. ಅದಕ್ಕೂ ಬಹಳ ಮೊದಲು 1921ರಲ್ಲಿ ಮೈಸೂರಿನ ಮಹಾರಾಜರು ಮುಸ್ಲಿಮರಿಗೆ ಮೀಸಲಾತಿ ನೀತಿಯನ್ನು ತಂದಿದ್ದರು. ಬಳಿಕ 1994ರಲ್ಲಿ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಸರಕಾರವು ಎಲ್ಲ ಮುಸ್ಲಿಮ್ ಸಮುದಾಯಗಳನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸಿ ಶೇ.4ರಷ್ಟು ಉಪ ಮೀಸಲಾತಿಯನ್ನು ಒದಗಿಸಿತ್ತು. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆಯ ಆಧಾರದಲ್ಲಿ ಮುಸ್ಲಿಮರನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸಿರುವ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ನಾಟಕವೂ ಒಂದಾಗಿದೆ. ಮೋದಿ 12 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಗುಜರಾತಿನಲ್ಲಿಯೂ ಮುಸ್ಲಿಮರು ಒಬಿಸಿಗಳ ಪಟ್ಟಿಯಲ್ಲಿದ್ದಾರೆ.
ಎ.24, ಸರ್ಗುಜಾ
ಹೇಳಿಕೆ: ಕಾಂಗ್ರೆಸ್ ಮೊದಲು ಆಂಧ್ರಪ್ರದೇಶದಲ್ಲಿ ಧರ್ಮದ ಆಧಾರದಲ್ಲಿ ಶೇ.15ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ಪ್ರಯತ್ನಿಸಿತ್ತು ಮತ್ತು ದೇಶಾದ್ಯಂತ ಅದನ್ನು ವಿಸ್ತರಿಸಲು ಯೋಜಿಸಿತ್ತು.ಇಂದಿಗೂ ಕಾಂಗ್ರೆಸ್ ಅದೇ ಉದ್ದೇಶವನ್ನು ಹೊಂದಿದೆ ಮತ್ತು ತನ್ನ ಪ್ರಣಾಳಿಕೆಯಲ್ಲಿಯೂ ಸ್ಪಷ್ಟವಾಗಿ ಹೇಳಿದೆ ಎಂದು ಮೋದಿ ಹೇಳಿದರು.
ಸತ್ಯಾಂಶ: 2005ರಲ್ಲಿ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವು ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿಯನ್ನು ಕಲ್ಪಿಸಿ ಕಾನೂನನ್ನು ಅಂಗೀಕರಿಸಿತ್ತು. ಆದರೆ ಉಚ್ಚ ನ್ಯಾಯಾಲಯವು ಅದನ್ನು ರದ್ದುಗೊಳಿಸಿತ್ತು. 2009ರ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಅವರ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿಯನ್ನು ಒದಗಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿತ್ತು.
ಹೇಳಿಕೆ: ಅದೇ ಭಾಷಣದಲ್ಲಿ ಮೋದಿ ಕಾಂಗ್ರೆಸ್ ಕರ್ನಾಟಕದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿತ್ತು. ಬಿಜೆಪಿಯು ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ಮತ್ತು ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿದ್ದ ಕಾಂಗ್ರೆಸ್ ನಿರ್ಧಾರವನ್ನು ರದ್ದುಗೊಳಿಸಿತ್ತು ಮತ್ತು ದಲಿತರು ಹಾಗೂ ಆದಿವಾಸಿಗಳಿಗೆ ಅವರ ಹಕ್ಕುಗಳನ್ನು ಮರಳಿಸಿತ್ತು ಎಂದು ಹೇಳಿದ್ದರು.
ಸತ್ಯಾಂಶ: 2023,ಮಾರ್ಚ್ನಲ್ಲಿ ಕರ್ನಾಟಕದ ಬಿಜೆಪಿ ಸರಕಾರವು ಮುಸ್ಲಿಮ್ ಒಬಿಸಿಗಳಿಗೆ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿತ್ತು,ಆದರೆ ಅದು ದಲಿತರು ಮತ್ತು ಆದಿವಾಸಿಗಳಿಗೆ ಕೋಟಾವನ್ನು ಮರುಹಂಚಿಕೆ ಮಾಡಿರಲಿಲ್ಲ. ಬದಲಿಗೆ ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯಿತರು ಮತ್ತು ಒಕ್ಕಲಿಗರಿಗೆ ಅದನ್ನು ವರ್ಗಾಯಿಸಿತ್ತು. ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು 2023 ಎಪ್ರಿಲ್ನಲ್ಲಿ ತಡೆಹಿಡಿದಿದೆ.
ಹೇಳಿಕೆ: ನಂತರ ಮೋದಿ ಇನ್ನೊಂದು ಪ್ರತಿಪಾದನೆಯನ್ನು ಮುಂದಿರಿಸಿದ್ದರು. ಕಾಂಗ್ರೆಸ್ ಪಿತ್ರಾರ್ಜಿತ ತೆರಿಗೆಯನ್ನು ವಿಧಿಸುವುದಾಗಿ ಹೇಳಿದೆ. ಪೋಷಕರಿಂದ ಪಿತ್ರಾರ್ಜಿತವಾಗಿ ದೊರೆಯುವ ಸಂಪತ್ತಿನ ಮೇಲೂ ಅದು ತೆರಿಗೆ ವಿಧಿಸಲಿದೆ. ನಿಮ್ಮ ಸಂಪತ್ತನ್ನು ನಿಮ್ಮ ಮಕ್ಕಳು ಪಡೆಯುವುದಿಲ್ಲ,ಅದನ್ನು ನಿಮ್ಮಿಂದ ಕಾಂಗ್ರೆಸ್ ಕಿತ್ತುಕೊಳ್ಳಲಿದೆ ಎಂದು ಹೇಳಿದ್ದರು.
ಸತ್ಯಾಂಶ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಿತ್ರಾರ್ಜಿತ ತೆರಿಗೆಯ ಉಲ್ಲೇಖವೇ ಇಲ್ಲ.
ಎ.24,ಬೇತುಲ್
ಹೇಳಿಕೆ: ಕಾಂಗ್ರೆಸ್ ಎಸ್ಸಿ/ಎಸ್ಟಿಗಳು ಮತ್ತು ಒಬಿಸಿಗಳಿಂದ ಮೀಸಲಾತಿಯನ್ನು ಕಿತ್ತುಕೊಂಡು ತನ್ನ ವಿಶೇಷ ವೋಟ್ಬ್ಯಾಂಕ್ಗೆ ನೀಡಲು ಬಯಸಿದೆ ಎಂದು ಮೋದಿ ಹೇಳಿದ್ದರು. ಕಾಂಗ್ರೆಸ್ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿಯನ್ನು ಒದಗಿಸಲಿದೆ,ತನ್ನ ವೋಟ್ ಬ್ಯಾಂಕ್ನ್ನು ಬಲಗೊಳಿಸಲು ಅದು ಖಾಸಗಿ ಸಂಪತ್ತನ್ನು ವಶಪಡಿಸಿಕೊಳ್ಳಲಿದೆ ಮತ್ತು ಮರುಹಂಚಿಕೆ ಮಾಡಲಿದೆ ಎಂದಿದ್ದರು.
ಸತ್ಯಾಂಶ: ಧರ್ಮಾಧಾರಿತ ಮೀಸಲಾತಿಗಳು ಮತ್ತು ಸಂಪತ್ತಿನ ಮರುಹಂಚಿಕೆಯ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಮಾತನಾಡಿಯೇ ಇಲ್ಲ.
ಎ.25,ಆಗ್ರಾ
ಹೇಳಿಕೆ: ಧರ್ಮದ ಆಧಾರದಲ್ಲಿ ಮೀಸಲಾತಿಗಳನ್ನು ನೀಡಲು ಒಬಿಸಿಗಳ ಶೇ.27ಕೋಟಾದಲ್ಲಿನ ಒಂದು ಭಾಗವನ್ನು ಕದಿಯಲು ಕಾಂಗ್ರೆಸ್ ಹವಣಿಸಿದೆ ಎಂದು ಮೋದಿ ಹೇಳಿದ್ದರು.
ಸತ್ಯಾಂಶ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಧರ್ಮಾಧಾರಿತ ಮೀಸಲಾತಿಯ ಯಾವುದೇ ಉಲ್ಲೇಖವಿಲ್ಲ.
ಎ.25,ಮೊರೆನಾ
ಹೇಳಿಕೆ: ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿ,ಮನಮೋಹನ ಸಿಂಗ್ ಅವರ ಭಾಷಣ ಮತ್ತು ಕಾಂಗ್ರೆಸ್ ಮಂಗಳಸೂತ್ರಗಳನ್ನು ಕಿತ್ತುಕೊಳ್ಳುವ ಬಗ್ಗೆ ತನ್ನ ಸುಳ್ಳು ಹೇಳಿಕೆಗಳನ್ನು ಪುನರುಚ್ಚರಿಸಿದ್ದ ಮೋದಿ,ಈ ಬಾರಿ ಇನ್ನೊಂದು ಅದ್ಭುತ ಪ್ರತಿಪಾದನೆಯನ್ನು ಮಾಡಿದ್ದರು. 1984ರಲ್ಲಿ ಇಂದಿರಾ ಗಾಂಧಿಯವರು ನಿಧನರಾದಾಗ ಅವರ ಆಸ್ತಿಯಲ್ಲಿ ಯಾವುದೇ ಪಾಲು ಸರಕಾರಕ್ಕೆ ಸೇರುವುದನ್ನು ತಡೆಯಲು ಪ್ರಧಾನಿ ರಾಜೀವ ಗಾಂಧಿಯವರು ಪಿತ್ರಾರ್ಜಿತ ತೆರಿಗೆಯನ್ನು ರದ್ದುಗೊಳಿಸಿದ್ದರು ಎಂದು ಮೋದಿ ಹೇಳಿದ್ದರು.
ಸತ್ಯಾಂಶ: 1985ರಲ್ಲಿ ವಿ.ಪಿ.ಸಿಂಗ್ ಅವರು ಕೇಂದ್ರ ವಿತ್ತಸಚಿವರಾಗಿದ್ದಾಗ ಪಿತ್ರಾರ್ಜಿತ ಆಸ್ತಿಗಳ ಮೇಲಿನ ಎಸ್ಟೇಟ್ ಸುಂಕವನ್ನು ರದ್ದುಗೊಳಿಸಿದ್ದರು ಮತ್ತು ಪಿತ್ರಾರ್ಜಿತವಾಗಿ ಬರುವ ಆಸ್ತಿಗಳ ಮೇಲೆ ಪಾವತಿಸಬೇಕಾದ ತೆರಿಗೆಯನ್ನಲ್ಲ.
ಎ.25,ಅವೋಲ್ನಾ
ಹೇಳಿಕೆ: ಆರ್ಥಿಕ ಸಮೀಕ್ಷೆಯನ್ನು ಮಾತ್ರವಲ್ಲ,ಕಾಂಗ್ರೆಸ್ ಎಲ್ಲ ಸಂಸ್ಥೆಗಳು,ಕಚೇರಿಗಳ ಸಮೀಕ್ಷೆ ನಡೆಸಲೂ ಉದ್ದೇಶಿಸಿದೆ. ಯಾವುದೇ ಹಿಂದುಳಿದ ವರ್ಗ ಅಥವಾ ದಲಿತ ಕುಟುಂಬದ ಇಬ್ಬರು ಸದಸ್ಯರು ಉದ್ಯೋಗದಲ್ಲಿರುವುದು ಕಂಡು ಬಂದರೆ ಒಂದು ಉದ್ಯೋಗವನ್ನು ಕಿತ್ತುಕೊಂಡು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿರುವವರಿಗೆ ನೀಡಲಿದೆ ಎಂದು ಮೋದಿ ಹೇಳಿದ್ದರು.
ಸತ್ಯಾಂಶ: ತನ್ನ ಪ್ರಣಾಳಿಕೆಯಲ್ಲಾಗಲೀ ತನ್ನ ನಾಯಕರ ಭಾಷಣಗಳಲ್ಲಾಗಲೀ ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳ ಅಥವ ದಲಿತ ಕುಟುಂಬಗಳಿಂದ ಉದ್ಯೋಗಗಳನ್ನು ಕಿತ್ತುಕೊಳ್ಳುವ ಬೆದರಿಕೆಯನ್ನೊಡ್ಡಿಲ್ಲ.
ಕೃಪೆ: scroll.in