ಆರ್ಬಿಐಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ; ಆರ್ಬಿಐ ಗವರ್ನರ್, ವಿತ್ತ ಸಚಿವೆ ರಾಜೀನಾಮೆಗೆ ಆಗ್ರಹ
ಇಲ್ಲದಿದ್ದಲ್ಲಿ ಮುಂಬೈನ 11 ಸ್ಥಳಗಳಲ್ಲಿ ‘ಬಾಂಬ್ ಸ್ಪೋಟಿಸುವ’ ಬೆದರಿಕೆ
RBI | Photo: PTI
ಮುಂಬೈ: ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು, ಇಲ್ಲದೆ ಇದ್ದಲ್ಲಿ ಆರ್ಬಿಐ ಕಚೇರಿ, ಎಚ್ಡಿಎಫ್ಸಿ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಸೇರಿದಂತೆ ಮುಂಬೈನ 11 ಸ್ಥಳಗಳಲ್ಲಿ ಬಾಂಬ್ ಗಳನ್ನು ಸ್ಪೋಟಿಸಲಾಗುವುದೆಂದು ಬೆದರಿಕೆಯೊಡ್ಡಿರುವ ಇ-ಮೇಲ್ ಪತ್ರ ಮಂಗಳವಾರ ಆರ್ಬಿಐಗೆ ಬಂದಿದೆ.
ಇ-ಮೇಲ್ ಪತ್ರದಲ್ಲಿ ಹೆಸರಿಸಲಾದ ಎಲ್ಲಾ ಸ್ಥಳಗಳಿಗೆ ತಾವು ಬೇಟಿ ನೀಡಿದ್ದು, ಅಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
‘ಖಿಲಾಫತ್ ಇಂಡಿಯಾ’ ಎಂಬ ಹೆಸರಿನಲ್ಲಿ ಇ-ಮೇಲ್ ಬೆದರಿಕೆ ಸಂದೇ ಬಂದಿರುವುದಾಗಿ ಅವರು ತಿಳಿಸಿದ್ದಾರೆ.
‘‘ನಾವು ಮುಂಬೈನ ವಿವಿಧ ಸ್ಥಳಗಳಲ್ಲಿ 11 ಬಾಂಬ್ ಗಳನ್ನು ಇರಿಸಿದ್ದೇವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಖಾಸಗಿ ಬ್ಯಾಂಕ್ ಗಳ ಜೊತೆಗೂಡಿ ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಭ್ರಷ್ಟಾಚಾರ ಹಗರಣವನ್ನು ನಡೆಸಿವೆ. ಈ ಹಗರಣದಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೆಲವು ಉನ್ನತ ಬ್ಯಾಂಕಿಂಗ್ ಅಧಿಕಾರಿಗಳು ಮತ್ತು ಕೆಲವು ಹೆಸರಾಂತ ಸಚಿವರಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಬಲವಾದ ಪುರಾವೆಗಳಿವೆ’’ ಎಂದು ಇ-ಮೇಲ್ ಪತ್ರದಲ್ಲಿ ಬರೆಯಲಾಗಿತ್ತೆಂದು ಐಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಆರ್ಬಿಐ ಗವರ್ನರ್ ಹಾಗೂ ವಿತ್ತ ಸಚಿವರು ತಕ್ಷಣವೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಹಾಗೂ ಹಗರಣವನ್ನು ಬಹಿರಂಗಪಡಿಸಿ ಪತ್ರಿಕಾ ಹೇಳಿಕೆ ನೀಡಬೇಕು. ಈ ಹಗರಣದಲ್ಲಿ ಭಾಗಿಯಾದವರೆಲ್ಲರಿಗೂ ತಕ್ಕ ಶಿಕ್ಷೆಯಾಗಬೇಕೆಂದು ನಾವು ಸರಕಾರವನ್ನು ಆಗ್ರಹಿಸುತ್ತೇವೆ. ಮಂಗಳವಾರ ಮಧ್ಯಾಹ್ನ 1:30ರೊಳಗೆ ತಮ್ಮ ಬೇಡಿಕೆಗಳು ಈಡೇರದೆ ಇದ್ದಲ್ಲಿ ಎಲ್ಲಾ 11 ಬಾಂಬ್ ಗಳು ಒಂದೊಂದಾಗಿ ಸ್ಫೋಟಗೊಳ್ಳಲಿವೆ’’ ಎಂದು ಇ-ಮೇಲ್ನಲ್ಲಿ ಬೆದರಿಕೆ ಹಾಕಲಾಗಿತ್ತು.
‘ಬ್ರೇಕಿಂಗ್ ನ್ಯೂಸ್’ ಎಂಬ ವಿಷಯಸೂಚಿಯೊಂದಿಗೆ ಬರೆಯಲಾದ ಇಮೇಲ್ ಪತ್ರದ ಇತರ ಕಚೇರಿಗಳಿಗೂ ಫಾರ್ವರ್ಡ್ ಮಾಡಲಾಗಿದೆ. ಫೋರ್ಟ್ ಪ್ರದೇಶದಲ್ಲಿರುವ ಆರ್ಬಿಐನ ನೂತನ ಕೇಂದ್ರೀಯ ಕಚೇರಿ ಕಟ್ಟಡ, ಚರ್ಚ್ ಗೇಟ್ನಲ್ಲಿರುವ ಎಚ್ಡಿಎಫ್ಸಿ ಹೌಸ್ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆ ಕ್ಸ್ ನಲ್ಲಿರುವ ಐಸಿಸಿಐ ಬ್ಯಾಂಕ್ ಟವರ್ಸ್ಗಳಲ್ಲಿ ಬಾಂಬ್ ಇರಿಸಲಾಗಿದೆಯೆಂದು ಪತ್ರದಲ್ಲಿ ಹೇಳಲಾಗಿತ್ತು.