ನೋಯ್ಡಾ | ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ : 9ನೇ ತರಗತಿ ವಿದ್ಯಾರ್ಥಿಯ ಬಂಧನ

Photo | PTI
ಹೊಸದಿಲ್ಲಿ: ನೋಯ್ಡಾದ ನಾಲ್ಕು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಆರೋಪದಲ್ಲಿ 9ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತ ವಿದ್ಯಾರ್ಥಿ ಇಮೇಲ್ ಬೆದರಿಕೆ ಸಂದೇಶ ಕಳುಹಿಸಿದ ಬಳಿಕ ಸ್ಥಳ ಮತ್ತು ಐಪಿ ವಿಳಾಸವನ್ನು ಮರೆಮಾಡಲು ವರ್ಚುವಲ್ ಪ್ರೈವೇಟ್ ನೆಟ್ವರ್ಕ್(VPN) ತಂತ್ರಜ್ಞಾನ ಬಳಸಿದ್ದಾನೆ. ಇದೀಗ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡು ಬಾಲಾಪರಾಧಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೋಯ್ಡಾದ ʼದಿ ಹೆರಿಟೇಜ್ ಸ್ಕೂಲ್ʼ, ʼಜ್ಞಾನಶ್ರೀʼ ಮತ್ತು ʼಮಯೂರ್ ಸ್ಕೂಲ್ʼ ಗೆ ಒಂದರ ಹಿಂದೆ ಒಂದರಂತೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಶಾಲಾ ಆಡಳಿತವು ಇಮೇಲ್ ಅನ್ನು ಪರಿಶೀಲಿಸಿ ಬೆದರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸ್ ತಂಡ, ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ತೆರಳಿ ಪರಿಶೀಲನೆ ನಡೆಸಿದಾಗ ಇದು ಹುಸಿ ಬೆದರಿಕೆ ಕರೆ ಎಂಬುವುದು ಬಯಲಾಗಿದೆ ಎಂದು ನೋಯ್ಡಾದ ಡಿಸಿಪಿ ರಾಮ್ ಬದನ್ ಸಿಂಗ್ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸೆಕ್ಟರ್ 126 ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 212, 351(4), 352 ಮತ್ತು ಐಟಿ ಕಾಯ್ದೆಯ 67ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ 9ನೇ ತರಗತಿಯ ವಿದ್ಯಾರ್ಥಿಯೋರ್ವ ನಕಲಿ ಇಮೇಲ್ ಕಳುಹಿಸಿರುವುದು ಬಯಲಾಗಿದೆ ಎಂದು ಡಿಸಿಪಿ ರಾಮ್ ಬದನ್ ಸಿಂಗ್ ಹೇಳಿದ್ದಾರೆ.