ಕೌಟುಂಬಿಕ ನ್ಯಾಯಾಲಯಗಳು ʼಕಾಳಜಿ, ಸೂಕ್ಷ್ಮತೆʼ ಯಿಂದ ಪ್ರಕರಣಗಳನ್ನು ನಿಭಾಯಿಸಲು ಬದ್ಧವಾಗಿವೆ: ಟೆಕ್ಕಿಯ ಆತ್ಮಹತ್ಯೆ ಬಗ್ಗೆ ಆಕ್ರೋಶದ ಬೆನ್ನಲ್ಲೇ ಕಾನೂನು ಸಚಿವಾಲಯ ಪ್ರತಿಕ್ರಿಯೆ
PC : indiatoday.in
ಹೊಸದಿಲ್ಲಿ: ಬೆಂಗಳೂರು ಮೂಲದ ಟೆಕ್ಕಿಯೊಬ್ಬರ ಆತ್ಮಹತ್ಯೆಗೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕೌಟುಂಬಿಕ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು "ಕಾಳಜಿ ಮತ್ತು ಸೂಕ್ಷ್ಮತೆಯಿಂದ" ನಿಭಾಯಿಸಲಾಗುತ್ತಿದೆ ಮತ್ತು ಇದಕ್ಕೆ ಇಲಾಖೆಯು ಬದ್ಧವಾಗಿದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ.
ಉತ್ತರ ಪ್ರದೇಶ ಮೂಲದ 34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಸೋಮವಾರ ಬೆಂಗಳೂರಿನ ಮಂಜುನಾಥ್ ಲೇಔಟ್ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಮಾಡಿ ತನ್ನ ಪತ್ನಿ ಹಾಗೂ ಆಕೆಯ ಕುಟುಂಬ ವಿರುದ್ಧ ಕಿರುಕುಳ ಮತ್ತು ಸುಲಿಗೆ ಆರೋಪಗಳನ್ನು ಮಾಡಿದ್ದರು. ಇದಲ್ಲದೆ ಸುಭಾಷ್ ಅವರು ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಘಟನೆ ಸಾಮಾಜಿಕ ಜಾಲತಾಣದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು.
ಈ ಕುರಿತು ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶದ ಬಗ್ಗೆ ಸಚಿವಾಲಯ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, ಕೌಟುಂಬಿಕ ನ್ಯಾಯಾಲಯವು ಕುಟುಂಬದೊಳಗಿನ ವಿವಾದಗಳನ್ನು ಪರಿಹರಿಸಲಿರುವ ವೇದಿಕೆಯಾಗಿದೆ. ಮದುವೆ, ಮಕ್ಕಳ ಪಾಲನೆ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಾಳಜಿ, ಸೂಕ್ಷ್ಮತೆಯಿಂದ ನಿರ್ವಹಿಸಲಾಗುತ್ತದೆ. ಸಮಯೋಚಿತ ಮತ್ತು ನಿಷ್ಪಕ್ಷಪಾತ ಪರಿಹಾರ, ಕುಟುಂಬಿಕ ಸಂಬಂಧಗಳನ್ನು ಪುನಃಸ್ಥಾಪಿಸುವ ಬಗ್ಗೆ ನ್ಯಾಯಾಲಯ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದೆ.
ʼತನ್ನ ಪತ್ನಿ ತನ್ನ ವಿರುದ್ಧ ಅನೇಕ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾಳೆ ಮತ್ತು ತನಗೆ ಮತ್ತು ನಾಲ್ಕು ವರ್ಷದ ಮಗನಿಗೆ ತಿಂಗಳಿಗೆ 2 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಕೂಡ ತನ್ನ ಪತ್ನಿ ನನ್ನಲ್ಲಿ ನೀವೂ ಏಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು?ʼ ಎಂದು ಪ್ರಶ್ನಿಸಿದ್ದಾರೆ ಎಂದು ಸುಭಾಷ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.