ಫರೀದಾಬಾದ್ | ಬ್ರಾಹ್ಮಣನನ್ನು ಕೊಂದಿದ್ದಕ್ಕೆ ಸ್ವಯಂಘೋಷಿತ ಗೋರಕ್ಷಕನ ‘ವಿಷಾದ’
ಗೋ ಕಳ್ಳಸಾಗಣೆ ಶಂಕೆಯಲ್ಲಿ ವಿದ್ಯಾರ್ಥಿಯ ಹತ್ಯೆ ಪ್ರಕರಣ
Photo: Manisha Mondal | ThePrint
ಹೊಸದಿಲ್ಲಿ : ಫರಿದಾಬಾದ್ನಲ್ಲಿ ಸ್ವಯಂಘೋಷಿತ ಗೋರಕ್ಷಕರ ಗುಂಡಿಗೆ ಬಲಿಯಾದ 12ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಮಿಶ್ರಾ ಅವರ ತಂದೆ ಸಿಯಾನಂದ ಮಿಶ್ರಾ, ಗೋರಕ್ಷಣೆ ಹೆಸರಲ್ಲಿ ತನ್ನ ಮಗನ ಹತ್ಯೆಯಾಗಿದೆ ಎಂಬುದನ್ನು ನಂಬುವುದಕ್ಕೇ ತಯಾರಿರಲಿಲ್ಲ. “ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಈ ಅಕ್ರಮ ನಿಲ್ಲಬೇಕು. ನಾನಿದನ್ನು ಒಪ್ಪಲಾರೆ” ಕಿರಿಯ ಮಗನ ಶವಕ್ಕೆ ಹೆಗಲು ಕೊಡಬೇಕಾದ ಸ್ಥಿತಿಯಲ್ಲಿ ದುಃಖ ತಡೆಯಲಾರದ ಆ ತಂದೆಯ ಬಾಯಿಂದ ಬಂದ ಮಾತು ಇದು.
ಆದರೆ ಕಳೆದ ಹಲವು ವರ್ಷಗಳಿಂದ ಅದೆಷ್ಟೊ ಅಮಾಯಕರನ್ನು ಕೊಂದು ಮುಗಿಸಿದ ಸ್ವಘೋಷಿತ ಗೋರಕ್ಷಕರ ಕೈಯಲ್ಲಿ ಈಗ ಮತ್ತೂ ಒಂದು ಹತ್ಯೆ ನಡೆದುಹೋಗಿದೆ. ವಿಪರ್ಯಾಸವೆಂದರೆ, ಕೊಂದವರಿಗೆ ತಾವು ಕೊಂದಿದ್ದೇವೆ ಎಂಬ ದುಃಖ ಇರುವುದು ಬ್ರಾಹ್ಮಣನನ್ನು ಕೊಂದಿದ್ದೇವೆ ಎಂಬ ಕಾರಣಕ್ಕಾಗಿ ಮಾತ್ರ!
ಆರೋಪಿಗಳಲ್ಲಿ ಒಬ್ಬನಾಗಿರುವ ಅನಿಲ್ ಕೌಶಿಕ್ ನನ್ನು ಹತ್ಯೆಯಾದ ಆರ್ಯನ್ ಮಿಶ್ರಾ ತಂದೆ ಸಿಯಾನಂದ ಮಿಶ್ರಾ ಫರಿದಾಬಾದ್ ಜೈಲಿನಲ್ಲಿ ಭೇಟಿಯಾದಾಗ, ಆರೋಪಿ ಪಾದ ಮುಟ್ಟಿ ಕ್ಷಮೆ ಕೇಳಿದನಂತೆ. ಮುಸ್ಲಿಂ ಎಂದು ಭಾವಿಸಿ ಕೊಂದನಂತೆ. ಆದರೆ ಸಾಯಿಸಿದ್ದು ಬ್ರಾಹ್ಮಣನನ್ನು ಎಂಬುದಕ್ಕಾಗಿ ಸಂಕಟಪಡುತ್ತಿದ್ದಾನಂತೆ.
ಆದರೆ, ಮುಸಲ್ಮಾನನನ್ನಾದರೂ ಏಕೆ ಕೊಲ್ಲುತ್ತಿ? ಕೇವಲ ಹಸುವಿನ ಕಾರಣಕ್ಕಾ? ಎಂದು ಅನಿಲ್ ಕೌಶಿಕ್ ನನ್ನು ಕೇಳಿದ್ಧಾಗಿ ಮಿಶ್ರಾ ಹೇಳಿದ್ದು ವರದಿಯಾಗಿದೆ.
ಕಾರಿನ ಚಕ್ರಕ್ಕೆ ಗುಂಡು ಹಾರಿಸಬಹುದಿತ್ತು ಅಥವಾ ಪೊಲೀಸರನ್ನು ಕರೆಯಬಹುದಿತ್ತು. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಏಕೆ ಎಂಬ ಮಿಶ್ರಾ ಪ್ರಶ್ನೆಗೆ ಆರೋಪಿ ಉತ್ತರಿಸದೇ ಮೌನವಾಗಿದ್ದ ಎನ್ನಲಾಗಿದೆ. ಆರ್ಯನ್ ಕೊಲೆಯಾದಾಗ ಯಾರೋ ಆತನಿಗೆ ಆಗದ ಹುಡುಗರ ಕೃತ್ಯ ಎಂದೇ ಪೊಲೀಸರು ಶಂಕಿಸಿದ್ದರು. ಆರ್ಯನ್ ಮತ್ತು ಅವನ ಜೊತೆ ಇರುವವರು ಕಾರಿನಲ್ಲಿ ಹಸುಗಳ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಕೌಶಿಕ್ ಮತ್ತು ಅವನ ಸಹಚರರು ಭಾವಿಸಿದ್ದರು. ಅವರು ಆ ಕಾರನ್ನು ಬೆನ್ನಟ್ಟಿ ಗುಂಡಿಕ್ಕಿ ಕೊಂದಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಸತ್ಯ ಬಯಲಾಗಿತ್ತು.
ಈ ಘಟನೆ ನಡೆಯುವುದಕ್ಕಿಂತ ಕೇವಲ ಮೂರು ದಿನಗಳ ಮೊದಲು ಚರ್ಖಿ ದಾದ್ರಿಯಲ್ಲಿ ಮುಸ್ಲಿಂ ವಲಸಿಗ ಕಾರ್ಮಿಕನನ್ನು ಗೋಮಾಂಸ ಸೇವಿಸಿದ್ದಾನೆ ಎಂದು ಶಂಕಿಸಿದ್ದ ಗುಂಪೊಂದು ಥಳಿಸಿ ಹತ್ಯೆ ಮಾಡಿತ್ತು. ಹರ್ಯಾಣದ ಪಲ್ವಾಲ್ ಮತ್ತು ಫರಿದಾಬಾದ್ನಲ್ಲಿನ ಸ್ವಘೋಷಿತ ಗೋರಕ್ಷಕ ಸಂಘಟನೆ ಸದಸ್ಯನೊಬ್ಬ, ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು, ಅನುಮಾನ ಬಂದರೆ ಪೊಲೀಸರಿಗೆ ತಿಳಿಸಬೇಕು ಎಂದೇ ಎಲ್ಲಾ ಗೋ ರಕ್ಷಣೆ ಕಾರ್ಯಕರ್ತರಿಗೂ ಹೇಳಲಾಗಿದೆ. ಆದರೂ ಹೀಗಾಗಿ ಹೋಗಿದೆ ಎಂದು ಆತಂಕಗೊಂಡಿದ್ದರ ಬಗ್ಗೆ ವರದಿಯಾಗಿದೆ.
ಅಂದರೆ ಈಗ ಗೋರಕ್ಷಣೆಯ ಹೆಸರಲ್ಲಿ ನಡೆಯುವ ಹಲ್ಲೆ, ದಾಳಿ, ಕೊಲೆಗಳು ಅದನ್ನು ಶುರು ಮಾಡಿದವರ ನಿಯಂತ್ರಣ ಮೀರಿ ಹೋಗಿವೆ. ಈಗ ಅದು ಎಲ್ಲೆಡೆ ವ್ಯಾಪಿಸಿಬಿಟ್ಟಿದೆ.ಕಾರಿನ ಕಿಟಕಿಗೆ ಟಿಂಟೆಡ್ ಗ್ಲಾಸ್ ಇತ್ತು. ಸಾಮಾನ್ಯವಾಗಿ ಪಲ್ವಾಲ್ ಅಥವಾ ನುಹ್ಗೆ ಹಸುಗಳನ್ನು ಸಾಗಿಸುವ ಕಳ್ಳಸಾಗಣೆದಾರರು ಟಿಂಟೆಡ್ ಗ್ಲಾಸ್ ಇರುವ ಕಾರುಗಳನ್ನೇ ಬಳಸುತ್ತಾರೆ. ಕಾರಿನಲ್ಲಿ ಯಾರಿದ್ದರೆಂಬುದು ಗೊತ್ತಾಗಿರಲಿಲ್ಲ. ಗುಂಡು ಹಾರಿಸಬೇಕಾಯಿತು ಎಂದು ಮಿಶ್ರಾಗೆ ಅನಿಲ್ ಕೌಶಿಕ್ ಹೇಳಿದ್ದ ಎನ್ನಲಾಗಿದೆ.
ಕಾರಿನಲ್ಲಿ ಆರ್ಯನ್ ಅಲ್ಲದೆ ನಾಲ್ವರು ಇದ್ದರು. ಸ್ನೇಹಿತ ಹರ್ಷಿತ್ ಗುಲಾಟಿ, ಆತನ ಸಹೋದರ ಶಾಂಕಿ, ಅವರ ತಾಯಿ ಸುಜಾತ ಮತ್ತು ಆಕೆಯ ಸ್ನೇಹಿತೆ ಕೀರ್ತಿ. ಪೊಲೀಸರ ಪ್ರಕಾರ, ಹಸುಗಳನ್ನು ಕಳ್ಳಸಾಗಣೆ ಮಾಡಲು ಎಸ್ಯುವಿಗಳನ್ನು ಬಳಸುತ್ತಿರುವ ಬಗ್ಗೆ ಕೌಶಿಕ್ ಗುಂಪಿಗೆ ಸುಳಿವು ಸಿಕ್ಕಿತ್ತು. ಆರ್ಯನ್ ಮತ್ತು ಇತರರು ಡಸ್ಟರ್ ಎಸ್ಯುವಿಯಲ್ಲಿ ಹೋಗಿದ್ದರು.
ಈ ಸ್ವಘೋಷಿತ ಗೋರಕ್ಷಕರಿಗೆ ಬೇಕಾಬಿಟ್ಟಿ ಸ್ವಾತಂತ್ರ್ಯ ನೀಡಿದ್ದರಿಂದಲೇ ಅವರು ಜನರ ಮೇಲೆ ಗುಂಡು ಹಾರಿಸಲು ಅಕ್ರಮ ಬಂದೂಕು ಬಳಸುತ್ತಿದ್ದಾರೆ ಎಂಬುದು ಮಿಶ್ರಾ ಆಕ್ಷೇಪ. ಧರ್ಮನಿಷ್ಠನಾಗಿದ್ದ ತನ್ನ ಮಗ ಹಸು ಕಳ್ಳಸಾಗಣೆದಾರ ಎಂಬ ಆರೋಪ ಹೊತ್ತಂತಾಯಿತು ಎಂಬುದು ಮಿಶ್ರಾ ಸಂಕಟ.
ಆರ್ಯನ್ ಜೊತೆಗಿದ್ದ ಹರ್ಷಿತ್ ಮತ್ತವರ ಕುಟುಂಬದ ಬಗ್ಗೆಯೂ ಮಿಶ್ರಾ ದೂರುತ್ತಾರೆ. ಈ ಹರ್ಷಿತ್ ನ ತಂದೆಯಿಂದಲೇ ತಾವಿರುವ ಅಪಾರ್ಟ್ಮೆಂಟ್ ಅನ್ನು ಮಿಶ್ರಾ ಬಾಡಿಗೆಗೆ ಪಡೆದಿರುವುದು. ಪಾರ್ಟಿ ಮುಗಿಸಿ ಬೆಳಗಿನ ಜಾವ 1.20ಕ್ಕೆ ಮರಳಿದ್ದ ಆರ್ಯನ್ ಮಲಗಲು ಹೊರಟಿದ್ದಾಗ ಹರ್ಷಿತ್ ನ ಫೋನ್ ಬಂದಿದ್ದರಿಂದ ಮತ್ತೆ ಹೊರಗೆ ಹೊರಟಿದ್ದ. ಸ್ನೇಹಿತನನ್ನು ಭೇಟಿಯಾಗಿ ಬೇಗ ಬರುತ್ತೇನೆ ಎಂದು ಹೊರಟವನು ಫೋನ್ ಅನ್ನು ಕೂಡ ಒಯ್ದಿರಲಿಲ್ಲ ಎನ್ನುತ್ತಾರೆ ಆತನ ತಾಯಿ ಉಮಾ.
ಎರಡು ಗಂಟೆಗಳು ಕಳೆದರೂ ಆರ್ಯನ್ ಹಿಂತಿರುಗಿರಲಿಲ್ಲ. ಬದಲಾಗಿ, ಹರ್ಷಿತ್ ತಂದೆ ಕೃಷ್ಣ ಗುಲಾಟಿ ಬಂದು ಬಾಗಿಲು ತಟ್ಟುತ್ತಾರೆ. ಆರ್ಯನ್ ತೊಂದರೆಯಲ್ಲಿದ್ದಾನೆ ಎಂದು ಹೇಳಿದ ಗುಲಾಟಿ ಅವರು ಮಿಶ್ರಾ ಮತ್ತು ಅವರ ಇನ್ನೊಬ್ಬ ಮಗನನ್ನು ಫರಿದಾಬಾದ್ನ ಎಸ್ಎಸ್ಬಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಅಲ್ಲಿ ಆರ್ಯನ್ ಹೆಣವಾಗಿ ಮಲಗಿದ್ದ!
ಹರ್ಷಿತ್ ಮತ್ತು ಅವನ ತಾಯಿ ಸುಜಾತಾ ಅವರನ್ನು ನನ್ನ ಮಗನಿಗೆ ಏನಾಯಿತು ಎಂದು ಕೇಳಿದರು. ಕೆಲವು ಗೂಂಡಾಗಳು ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದರು. ಆದರೆ ಯಾರೂ ನನಗೆ ಸತ್ಯವನ್ನು ಹೇಳಲಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.
ಗುಲಾಟಿ ಕುಟುಂಬದವರು ಸ್ಥಳದಲ್ಲಿ ನಡೆದದ್ದೇನು ಎಂಬ ಸತ್ಯವನ್ನು ಪೊಲೀಸರಿಗೂ ಹೇಳಿರಲಿಲ್ಲ. ಮ್ಯಾಗಿ ತಿನ್ನಲು ಹೋಗಿದ್ದೆವು. ಬಿಳಿ ಬಣ್ಣದ ಸ್ವಿಫ್ಟ್ ಕಾರು ತಮ್ಮನ್ನು ಹಿಂಬಾಲಿಸಿತು ಎಂದಿದ್ದರು. ಯಾರೋ ಆತನ ಶತ್ರುಗಳು ಕೊಂದಿದ್ದಾರೆ ಎಂದು ಹೇಳಿ ದಾರಿ ತಪ್ಪಿಸಿದ್ದರು. ಹಾಗಾಗಿಯೇ ಕೌಶಿಕ್ ಬಂಧನವಾಗುವುದು ತಡವಾಯಿತು. ಏನೋ ತಪ್ಪಾಗಿದೆ ಎಂದು ಗ್ರಹಿಸಿದ ಪೊಲೀಸರು ಆ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗಲೇ ನಡೆದದ್ದೇನು ಎಂದು ತಿಳಿದು ಕೌಶಿಕ್ ಮತ್ತಿತರ ಆರೋಪಿಗಳನ್ನು ಬಂಧಿಸುವುದು ಸಾಧ್ಯವಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಗುಲಾಟಿ ಕುಟುಂಬದ ಶಾಂಕಿ, ಕೊಲೆ ಯತ್ನದ ಆರೋಪಿಯಾಗಿದ್ದಾನೆ. ಅದರ ಬಗ್ಗೆ ಮಿಶ್ರಾಗೆ ಆರು ತಿಂಗಳ ಹಿಂದೆ ಪೊಲೀಸ್ ಮಾಹಿತಿದಾರನಾಗಿ ಆಗಿ ಕೆಲಸ ಮಾಡುತ್ತಿದ್ದಾಗ ಗೊತ್ತಾಗಿತ್ತು. ಆತ, ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯಲ್ಲೂ ತೊಡಗಿರುವ ಅನುಮಾನವಿದೆ. ಅದೆಲ್ಲ ಗೊತ್ತಾದ ಬಳಿಕ ತಾವು ಆ ಅಪಾರ್ಟ್ಮೆಂಟ್ ಖಾಲಿ ಮಾಡಲು ಯತ್ನಿಸಿದ್ದರೂ, ಗುಲಾಟಿ ಕುಟುಂಬ ಡೆಪಾಸಿಟ್ ವಾಪಸ್ ಕೊಟ್ಟಿರಲಿಲ್ಲ ಎನ್ನುತ್ತಾರೆ ಮಿಶ್ರಾ.
ಈ ಕೇಸ್ನಲ್ಲಿಯ ಆರೋಪಿಗಳಿಗೂ ಗುಲಾಟಿ ಕುಟುಂಬದವರಿಗೂ ಏನಾದರೂ ಸಂಬಂಧವಿದೆಯೆ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಿರುವುದಾಗಿ ವರದಿಗಳು ಹೇಳುತ್ತಿವೆ.
ಅನಿಲ್ ಕೌಶಿಕ್, ವರುಣ್ ಕುಮಾರ್, ಕ್ರಿಶನ್ ಕುಮಾರ್, ಆದೇಶ್ ಸಿಂಗ್ ಮತ್ತು ಸೌರವ್ ಕುಮಾರ್ ಬಂಧಿತರು.
ಪೊಲೀಸರ ಪ್ರಕಾರ, ತಲೆಮರೆಸಿಕೊಂಡಿದ್ದ ಶಾಂಕಿ ಗುಲಾಟಿ ಆಗಸ್ಟ್ 24ರಂದು ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಬಂದಿದ್ದ. ಅಡಗಿಕೊಳ್ಳಲು ಸ್ಥಳ ಹುಡುಕುತ್ತ ಕಾರಿನಲ್ಲಿ ಹೊರಟಿದ್ದಾಗ ಕೆಂಪು ಮತ್ತು ನೀಲಿ ದೀಪಗಳೊಂದಿಗಿದ್ದ ಅನಿಲ್ ಕೌಶಿಕ್ ನ ಬಿಳಿ ಸ್ವಿಫ್ಟ್ ಕಾರು ಕಂಡು, ಅದನ್ನು ಪೊಲೀಸ್ ವಾಹನ ಎಂದು ತಪ್ಪಾಗಿ ಗ್ರಹಿಸಿ ವೇಗವಾಗಿ ಹೊರಟಿದ್ದರು. ಡಸ್ಟರ್ ವೇಗವಾಗಿ ಹೋಗುತ್ತಿರುವುದನ್ನು ನೋಡಿದ ಕೌಶಿಕ್ ಚೇಸ್ ಮಾಡಿ ಗುಂಡು ಹಾರಿಸಿದಾಗ, ಆರ್ಯನ್ ಬಲಿಯಾಗಿದ್ದ. ಸುಜಾತಾ ಮತ್ತು ಕೃತಿ ಕಾರಿನಿಂದ ಇಳಿದಾಗ ಆರೋಪಿಗಳು ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದರು.
ಅನಿಲ್ ಕೌಶಿಕ್ ಬಂಧನವಾಗಿರುವ ಬಗ್ಗೆ ಸ್ಥಳೀಯರಿಗೆ, ಜನಸಾಮಾನ್ಯರಿಗೆ ಬೇಸರವಿದೆ. ಆತ ಕೊಲೆ ಮಾಡಿದ್ದಾನೆ ಎಂದರೆ ನಂಬಲು ಯಾರೂ ತಯಾರಿಲ್ಲ. ಅಲ್ಲಿನ ಸಂತೆಯಲ್ಲಿ ಮಾತಾಡಿಕೊಳ್ಳುವ ಸಾಮಾನ್ಯರು ಕೂಡ, ಆತ ಹಸುಗಳನ್ನು ರಕ್ಷಿಸುವವನು. ದೇವರ ಕೆಲಸ ಮಾಡುವವನು. ಆತ ಏಕೆ ಯಾರನ್ನಾದರೂ ಕೊಲ್ಲುತ್ತಾನೆ ಎಂದೇ ಕೇಳುತ್ತಾರೆ.
ಕೊಲೆಗೆ ವೈಯಕ್ತಿಕ ಪೈಪೋಟಿಯೂ ಕಾರಣವಿರಬಹುದು ಎಂದು ಕೆಲವರು ಹೇಳಿದರೆ, ಏನೋ ಪಿತೂರಿ ನಡೆದಿದೆ ಎನ್ನುವವರೂ ಇದ್ದಾರೆ. ಕೌಶಿಕ್ ಮತ್ತು ಅವನ ತಂಡವರು ಹಿಂದೂವನ್ನು ಕೊಲ್ಲಬಹುದು ಎಂಬುದನ್ನು ಮಾತ್ರ ಯಾರೂ ನಂಬುತ್ತಿಲ್ಲ. ಕೊಲೆಯಾದ ಆರ್ಯನ್, ಕಳೆದ ತಿಂಗಳಷ್ಟೇ ಹರಿದ್ವಾರಕ್ಕೆ ಕನ್ವರ್ ಯಾತ್ರೆಯಲ್ಲಿ ಬರಿಗಾಲಿನಲ್ಲಿ ನಡೆದು ನಾಗ್ಪುರದ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿದ್ದನಂತೆ. ಸುಮಾರು 20 ದಿನ ಮಗನ ಪಾದಗಳನ್ನು ಅಪ್ಪ ಅಮ್ಮ ಮಸಾಜ್ ಮಾಡಿದ್ದರಂತೆ.
ಆರ್ಯನ್ ಮೊಬೈಲ್ ಅಂಗಡಿ ಇಟ್ಟುಕೊಳ್ಳುತ್ತೇನೆ ಎಂದಿದ್ದ. ಮೊದಲು ಓದು ಮುಗಿಸು ಎಂದು ತಾಯಿಯೇ ಹೇಳಿದ್ದರು ಎಂದು ಆತನ ಅಣ್ಣ ಹೇಳುತ್ತಾನೆ. ಅವರ ನಾಲ್ಕನೇ ಮಹಡಿಯ ಅಪಾರ್ಟ್ಮೆಂಟ್ನ ಮೇಲ್ಛಾವಣಿಯ ಮೇಲೆ, ವಿ ವಾಂಟ್ ಜಸ್ಟೀಸ್ ಎಂಬ ಪೋಸ್ಟರ್ ನೇತಾಡುತ್ತಿದೆ. ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಆತನ ತಂದೆ ಕೇಳುತ್ತಿದ್ದಾರೆ.
ಸ್ವಯಂಘೋಷಿತ ಸ್ವಘೋಷಿತ ಗೋರಕ್ಷಕರು ಮನುಷ್ಯರನ್ನು ಕೊಲ್ಲುತ್ತಿರುವ ಕರಾಳ ಘಟನೆಗಳು ಹೆಚ್ಚುತ್ತಲೇ ಇವೆ. ಇದೆಲ್ಲದರ ನಡುವೆಯೂ, ಮುಸ್ಲಿಂ ಎಂದುಕೊಂಡು ಕೊಂದೆ, ಬ್ರಾಹ್ಮಣನನ್ನು ಕೊಂದಿದ್ದಕ್ಕಾಗಿ ಸಂಕಟವಾಗುತ್ತಿದೆ, ಆತ ಒಬ್ಬ ಹಿಂದೂವನ್ನು ಕೊಲ್ಲಲಾರ ಎಂಬ ಮಾತುಗಳು ಅತ್ಯಂತ ಕ್ರೂರತನದ್ದಾಗಿ ಕಿವಿಹೊಕ್ಕಿ ಕಾಡುತ್ತಲೇ ಇರುತ್ತದೆ. ಮನಸ್ಸನ್ನು ಇರಿಯುತ್ತಲೇ ಇರುತ್ತವೆ.