ಪ್ರತಿಭಟನೆಯಲ್ಲಿ ಯುವ ರೈತ ಮೃತ್ಯು; ರಾಷ್ಟ್ರಪತಿ ಆಳ್ವಿಕೆ ಹೇರುವ ಹುನ್ನಾರ ಎಂದ ಪಂಜಾಬ್ ಸಿಎಂ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ Photo: PTI | ಮೃತ ರೈತ ಶುಭ ಕರಣ್ ಸಿಂಗ್ Photo: twitter.com/SukhpalKhaira
ಹೊಸದಿಲ್ಲಿ: ಖನೌರಿ ಗಡಿಯಲ್ಲಿ ಹರ್ಯಾಣ ಪೊಲೀಸರ ಜತೆಗಿನ ಸಂಘರ್ಷದ ವೇಳೆ 24 ವರ್ಷ ವಯಸ್ಸಿನ ಶುಭ ಕರಣ್ ಸಿಂಗ್ ಎಂಬ ರೈತ ಮೃತಪಟ್ಟ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬುಧವಾರ ಹೇಳಿದ್ದಾರೆ. ಪಂಜಾಬ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ 100 ಬೆದರಿಕೆಗಳು ಬಂದರೂ ಸರ್ಕಾರ ಜಗ್ಗುವುದಿಲ್ಲ. ಸರ್ಕಾರ ರೈತರ ಪರವಾಗಿರುತ್ತದೆ ಎಂದು ಗುಡುಗಿದ್ದಾರೆ.
ಯುವ ರೈತನ ಸಾವಿನ ಬೆನ್ನಲ್ಲೇ ದೆಹಲಿ ಚಲೋ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಎರಡು ದಿನಗಳ ಕಾಲ ಮಂದಿನ ಕಾರ್ಯಯೋಜನೆ ಬಗ್ಗೆ ನಿರ್ಧರಿಸಿ ಮುಂದುವರಿಸಲಾಗುವುದು ಎಂದು ರೈತ ಮುಖಂಡರು ಹೇಳಿದ್ದಾರೆ.
ಶಂಭು ಮತ್ತು ಖನೌರಿ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಹಲವು ಮಂದಿ ಪ್ರತಿಭಟನಾ ನಿರತ ರೈತರು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ. ಫೆಬ್ರವರಿ 13ರಂದು ದೆಹಲಿ ಚಲೋ ಯಾತ್ರೆ ಅರಂಭಿಸಿದ್ದ ರೈತರನ್ನು ಹರ್ಯಾಣ ಪೊಲೀಸರು ತಡೆದಿದ್ದರು. ಕೇಂದ್ರದ ಜತೆಗಿನ ಮತುಕತೆ ವಿಫಲವಾದ ಹಿನ್ನೆಲೆಯಲ್ಲಿ ಬುಧವಾರ ರೈತರು ತಮ್ಮ ಯಾತ್ರೆ ಮುಂದುವರಿಸಿದ್ದರು.
ಪೊಲೀಸ್ ತಡೆಗಳನ್ನು ಮುರಿದ ಹಿನ್ನೆಲೆಯಲ್ಲಿ ಅಶ್ರುವಾಯು ಪ್ರಯೋಗಿಸಲಾಗಿದೆ ಎಂದು ಹರ್ಯಾಣ ಪೊಲೀಸರು ಹೇಳಿದ್ದಾರೆ. ರೈತರು ಕಲ್ಲು ತೂರಾಟ ನಡೆಸಿದ್ದಲ್ಲದೇ ಬೆಳೆ ತ್ಯಾಜ್ಯಗಳನ್ನು ಸುಟ್ಟು ಮೆಣಸಿನಪುಡಿ ಹಾಕಿದ್ದಾರೆ ಎನ್ನುವುದು ಪೊಲೀಸರ ಆರೋಪ. ರೈತರ ಆಕ್ರೋಶದಿಂದ ಹಲವು ಮಂದಿ ಪೊಲಿಸರು ಗಾಯಗೊಂಡಿದ್ದಾರೆ ಎಂದು ಹರ್ಯಾಣ ಪೊಲೀಸರು ಹೇಳಿದ್ದಾರೆ.
ಹರ್ಯಾಣ ಪೊಲೀಸರ ಕ್ರಮವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಖಂಡಿಸಿದ್ದಾರೆ.
ಶುಕ್ರವಾರ ಸಂಜೆಯ ಒಳಗಾಗಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಅದುವರೆಗೆ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಹೇಳಿದ್ದಾರೆ.