ʼಕೃಷಿ ಸಾಧನಗಳ ಜಿಎಸ್ಟಿ ರದ್ದುಪಡಿಸಿʼ: ಹಣಕಾಸು ಸಚಿವರಿಗೆ ರೈತರ ಆಗ್ರಹ
PC: istockphoto.com
ಹೊಸದಿಲ್ಲಿ: ಎಲ್ಲ ಕೃಷಿ ಪರಿಕರಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರದ್ದುಪಡಿಸುವಂತೆ ರೈತ ಸಂಘಟನೆಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿವೆ. ಸಚಿವರ ಜತೆಗೆ ಬಜೆಟ್ ಪೂರ್ವ ಚರ್ಚೆಯಲ್ಲಿ ರೈತಮುಖಂಡರು ಈ ಆಗ್ರಹ ಮಂಡಿಸಿದ್ದಾರೆ.
ಪಿಎಂ ಕಿಸಾನ್ ಯೋಜನೆಯಡಿ ನೀಡುವ ಹಣಕಾಸು ನೆರವನ್ನು ದುಪ್ಪಟ್ಟುಗೊಳಿಸಬೇಕು ಮತ್ತು ದೇಶಾದ್ಯಂತ ಎಲ್ಲ ಕೃಷಿ ಮಾರುಕಟ್ಟೆಗಳಲ್ಲಿ ತೆರಿಗೆ ಸಮಾನತೆ ಜಾರಿಗೆ ತರಬೇಕು ಎನ್ನುವುದು ರೈತರ ಇತರ ಪ್ರಮುಖ ಬೇಡಿಕೆಗಳು.
ಆರೆಸ್ಸೆಸ್ ಜತೆ ಗುರುತಿಸಿಕೊಂಡಿರುವ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಬದ್ರಿ ನಾರಾಯಣ ಚೌಧರಿ ಅವರು ಪಿಎಂ ಕಿಸಾನ್ ಅಡಿಯಲ್ಲಿ ನೀಡುವ ಪ್ರಯೋಜನವನ್ನು ಹೆಚ್ಚಿಸುವಂತೆ ಆಗ್ರಹಿಸಿದ್ದರೆ, ರಾಜಕೀಯ ರಹಿತ ಸಂಘಟನೆಯಾಗಿರುವ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ಧರ್ಮೇಂದ್ರ ಮಲಿಕ್ ಅವರು ಕೃಷಿ ಸಾಧನಗಳು, ಪಶುಆಹಾರ, ರಸಗೊಬ್ಬರಗಳು ಬೀಜ ಮತ್ತು ಔಷಧಿಗಳ ಮೇಲಿನ ಜಿಎಸ್ಟಿ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ.
ಎಲ್ಲ ಕೃಷಿ ಮಾರುಕಟ್ಟೆಗಳಲ್ಲಿ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವಂತೆ ಭಾರತ ಕೃಷಿಕ ಸಮಾಜದ ಅಧ್ಯಕ್ಷ ಅಜಯ್ ವೀರ್ ಜಾಖಡ್ ಕೋರಿದ್ದಾರೆ. ಇದು ಇಡೀ ವ್ಯವಸ್ಥೆಯಲ್ಲಿ ಆಡಳಿತ ಸುಧಾರಣೆ ಮತ್ತು ವ್ಯವಸ್ಥೆಯ ಕ್ಷಮತೆ ಹೆಚ್ಚಿಸಲು ನೆರವಾಗುವ ಜತೆಗೆ, ಆಹಾರ ಹಣದುಬ್ಬರ, ಬೆಲೆ ವ್ಯತ್ಯಯದ ಸಮಸ್ಯೆಗೆ ಪರಿಹಾರವಾಗಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಜತೆಗೆ ರೈತರಿಗಾಗಿ ಸರ್ಕಾರದ ವಿವಿಧ ಯೋಜನೆಗಳ ಮೌಲ್ಯಮಾಪನ ನಡೆಯುವ ಅಗತ್ಯತೆಯನ್ನೂ ಅವರು ಪ್ರತಿಪಾದಿಸಿದ್ದಾರೆ.