ಕೇಂದ್ರ ಸಚಿವರ ಜತೆಗಿನ ಸಭೆಯಲ್ಲಿ ಇತ್ಯರ್ಥವಾಗದ ರೈತರ ಸಮಸ್ಯೆ
ಭಾನುವಾರ ಮುಂದಿನ ಸಭೆ
Photo: PTI
ಹೊಸದಿಲ್ಲಿ: ಚಂಡೀಗಢದಲ್ಲಿ ನಡೆದ ಕೇಂದ್ರ ಸಚಿವರು ಮತ್ತು ರೈತ ಮುಖಂಡರ ನಡುವಿನ ಮೂರನೇ ಸಭೆಯಲ್ಲಿ ಕೂಡಾ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಮತ್ತೊಂದು ಸುತ್ತಿನ ಮಾತುಕತೆ ಭಾನುವಾರ ನಡೆಯಲಿದೆ.
ಆದರೆ ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಇಂದು ನಡೆದ ಮಾತುಕತೆಯನ್ನು "ಧನಾತ್ಮಕ: ಎಂದು ಬಣ್ಣಿಸಿದ್ದಾರೆ. "ಇಂದು ಕೇಂದ್ರ ಸರ್ಕಾರ ಹಾಗೂ ರೈತರ ಸಂಘಟನೆಗಳ ನಡುವೆ ಧನಾತ್ಮಕ ಚರ್ಚೆ ನಡೆದಿದೆ" ಎಂದು ಅವರು ಹೇಳಿದ್ದಾರೆ. ರೈತರ ಸಂಘಟನೆಗಳು ಮುಂದಿಟ್ಟ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಿ, ಮುಂದಿನ ಭಾನುವಾರ ರಾತ್ರಿ 6 ಗಂಟೆಗೆ ಮುಂದಿನ ಸಭೆಯನ್ನು ನಡೆಸಲು ನಿರ್ಧರಿಸಿದ್ದೇವೆ ಎಂದು ಅವರು ವಿವರಿಸಿದ್ದಾರೆ.
ಸುಮಾರು ಐದು ಗಂಟೆ ಕಾಲ ನಡೆದ ಸಭೆಯಲ್ಲಿ ಕೇಂದ್ರ ಸಚಿವರಾದ ಪಿಯೂಶ್ ಗೋಯಲ್, ಅರ್ಜುನ್ ಮುಂಡಾ, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಕೇಂದ್ರದ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಕೂಡಾ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಫೆಬ್ರವರಿ 8 ಹಾಗೂ 12ರಂದು ಎರಡು ಸುತ್ತಿನ ಮಾತುಕತೆ ಕೇಂದ್ರದ ಮುಖಂಡರು ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳ ನಡುವೆ ನಡೆದಿತ್ತು. ಈ ಹಿಂದಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ರೈತರು ದೆಹಲಿ ಚಲೋ ಪಾದಯಾತ್ರೆ ಕೈಗೊಂಡಿದ್ದಾರೆ.
ಪ್ರತಿಭಟನಾ ನಿರತ ರೈತರು ಒಟ್ಟು 12 ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದು, ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಸಂಪೂರ್ಣ ಸಾಲ ಮನ್ನಾ ಮತ್ತು ರೈತರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಪಿಂಚಣಿ ಯೋಜನೆ ಇದರಲ್ಲಿ ಸೇರಿವೆ.