ನ್ಯಾಯಕ್ಕಾಗಿ ಹೋರಾಟ: ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್ ಬಾನುಗೆ ಎರಡು ದಶಕಗಳಿಂದ ಜೊತೆಯಾಗಿರುವ ವಕೀಲೆ ಶೋಭಾ ಗುಪ್ತಾ
Photo: newindianexpress.com
ಹೊಸದಿಲ್ಲಿ: ಫೆಬ್ರವರಿ 2002ರಲ್ಲಿ ನಡೆದ ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಕೋಮು ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಐದು ತಿಂಗಳ ಗರ್ಭಿಣಿಯಾಗಿದ್ದ 21 ವರ್ಷದ ಬಿಲ್ಕಿಸ್ ಬಾನು ಪ್ರಯತ್ನಿಸುವಾಗ ಅತ್ಯಾಚಾರಕ್ಕೆ ಗುರಿಯಾಗಿದ್ದರು. ಗಲಭೆಯ ಸಂದರ್ಭದಲ್ಲಿ ನಡೆದ ಬರ್ಬರ ಹತ್ಯೆಗಳಲ್ಲಿ ತನ್ನ ಮೂರು ವರ್ಷದ ಪುತ್ರಿ ಸೇರಿದಂತೆ ತನ್ನ ಕುಟುಂಬದ ಏಳು ಮಂದಿಯನ್ನು ಆಕೆ ಕಳೆದುಕೊಂಡಿದ್ದರು.
2003ರಿಂದ ಬಿಲ್ಕಿಸ್ ಬಾನು ಪರ ದೃಢವಾದ ಅಭಿಯಾನಗಾರ್ತಿಯಾಗಿರುವ ವಕೀಲೆ ಶೋಭಾ ಗುಪ್ತಾ, ಕಾನೂನು ಹೋರಾಟದುದ್ದಕ್ಕೂ ರಾಜಿರಹಿತ ನೆರವನ್ನು ಒದಗಿಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಆಕೆಗೆ ನ್ಯಾಯ ದೊರಕಿಸಿಕೊಡಲು ಶೋಭಾ ಗುಪ್ತಾ ಅವರು ಎಲ್ಲ ಹಂತಗಳಲ್ಲೂ ಹೋರಾಡಿದ್ದಾರೆ. ಅದು ಕೆಳ ನ್ಯಾಯಾಲಯವಾಗಿರಲಿ, ಹೈಕೋರ್ಟ್ ಆಗಿರಲಿ ಅಥವಾ ಸುಪ್ರೀಂ ಕೋರ್ಟ್ ಆಗಿರಲಿ, ಅವರು ಬಿಲ್ಕಿಸ್ ಪರ ಇಷ್ಟು ವರ್ಷಗಳುದ್ದಕ್ಕೂ ಭರವಸೆ ಮತ್ತು ನ್ಯಾಯದ ಕರೆಗಂಟೆಯಂತೆ ಆಕೆಯ ಪರ ವಿಶ್ವಾಸಾರ್ಹ ಹೋರಾಟ ನಡೆಸಿದ್ದಾರೆ.
ಸೋಮವಾರ ಪುನಃ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯವನ್ನು ಮರುಸ್ಥಾಪಿಸಿರುವ ಸುಪ್ರೀಂ ಕೋರ್ಟ್, ಅತ್ಯಾಚಾರ ಪ್ರಕರಣದಲ್ಲಿ ಗುಜರಾತ್ ಸರ್ಕಾರವು 11 ಮಂದಿ ಅಪರಾಧಿಗಳಿಗೆ ನೀಡಿದ್ದ ಕ್ಷಮಾದಾನವನ್ನು ರದ್ದುಗೊಳಿಸಿದೆ. ತನ್ನ 251 ಪುಟಗಳ ತೀರ್ಪಿನಲ್ಲಿ ಗುಜರಾತ್ ಸರ್ಕಾರಕ್ಕೆ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಪುರಸ್ಕರಿಸುವ ಯಾವುದೇ ವ್ಯಾಪ್ತಿ ಇಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರವು ಅಪರಾಧಿಗಳ ಜೊತೆಗೂಡಿದೆ ಮತ್ತು ಅವರೊಂದಿಗೆ ಜಟಿಲವಾಗಿ ವರ್ತಿಸಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು The New Indian Express ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಶೋಭಾ ಗುಪ್ತಾ, ಬಿಲ್ಕಿಸ್ ಬಾನು ಪ್ರಕರಣದ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
“11 ಮಂದಿ ಅಪರಾಧಿಗಳ ಸ್ಥಳ ಜೈಲಾಗಿದ್ದು, ಅವರು ಅಲ್ಲಿರಲು ಅರ್ಹರಾಗಿದ್ದಾರೆ. ಆದರೆ, ಬಿಲ್ಕಿಸ್ ಬಾನುಗೆ ನ್ಯಾಯ ದೊರಕಿಸಿಕೊಡುವ ದಾರಿಯು ಸುಲಭವಾಗಿರಲಿಲ್ಲ. ನಾನು ತೀರ್ಪಿನ ಕುರಿತು ಬಿಲ್ಕಿಸ್ ಅವರೊಂದಿಗೆ ಮಾತನಾಡಿದಾಗ ಅವರು ಇಂದು ತುಂಬಾ ಸಂತಸಗೊಂಡಿದ್ದಾರೆ. ಇದು ನಮ್ಮೆಲ್ಲರ ಪಾಲಿಗೆ ಬಹು ದೊಡ್ಡ ಗೆಲುವಾಗಿದೆ. ಸತ್ಯಕ್ಕೆ ಜಯ ದೊರೆತಿದೆ” ಎಂದು ಶೋಭಾ ಗುಪ್ತಾ ಹೇಳಿದ್ದಾರೆ.
ಬಿಲ್ಕಿಸ್ ಬಾನು ಅವರ ಗೆಲುವು ಕೇವಲ ವೈಯಕ್ತಿಕ ಹೋರಾಟವಲ್ಲ ಬದಲಿಗೆ, ಇಂತಹುದೇ ಸಮಸ್ಯೆಗಳನ್ನೆದುರಿಸುತ್ತಿರುವ ನೂರಾರು ಮಹಿಳೆಯರ ಸಂಘಟಿತ ಗೆಲುವಾಗಿದೆ ಎಂದು ಆಕೆ ಭಾವಿಸುತ್ತಾರೆ. “ನನಗೆ ನ್ಯಾಯಾಂಗದಲ್ಲಿ ವಿಶ್ವಾಸವಿದೆ. ಹೀಗಾಗಿಯೇ ನಾವು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆವು” ಎಂದು ಅವರು ಹೇಳುತ್ತಾರೆ.
ತಮ್ಮ 40ನೇ ವಯಸ್ಸಿನಲ್ಲಿರುವ ಬಿಲ್ಕಿಸ್ ಬಾನು ತೀರ್ಪಿನ ಕುರಿತು ಸಮಾಧಾನದ ಪ್ರತಿಕ್ರಿಯೆ ನೀಡಿದ್ದಾರೆ.
“ಇಂದು ನನ್ನ ಪಾಲಿಗೆ ನಿಜವಾಗಲೂ ಹೊಸ ವರ್ಷ. ನಾನು ಪರಿಹಾರಕ್ಕಾಗಿ ಕಣ್ಣೀರು ಸುರಿಸಿದೆ. ನಾನು ಕಳೆದ ಒಂದೂವರೆ ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ನಕ್ಕಿದ್ದೇನೆ. ನಾನು ನನ್ನ ಮಕ್ಕಳನ್ನು ತಬ್ಬಿಕೊಂಡೆ. ಇದು ನನ್ನ ಎದೆಯ ಮೇಲಿದ್ದ ದೊಡ್ಡ ಪರ್ವತದ ಕಲ್ಲೊಂದನ್ನು ಜರುಗಿಸಿದ ಅನುಭವ ನೀಡಿದೆ. ನಾನು ಮತ್ತೆ ಉಸಿರಾಡಬಹುದು” ಎಂದು ಶೋಭಾ ಮೂಲಕ ನೀಡಿರುವ ಹೇಳಿಕೆಯಲ್ಲಿ ಬಿಲ್ಕಿಸ್ ಬಾನು ಪ್ರತಿಕ್ರಿಯೆ ನೀಡಿದ್ದಾರೆ.
“ನ್ಯಾಯವೆಂದರೆ ಹೀಗಿಯೇ ಇರುತ್ತದೆ. ಎಲ್ಲರಿಗೂ ಸಮಾನ ನ್ಯಾಯ ದೊರೆಯುವ ಭರವಸೆ ಮೂಡಿಸಿರುವ ಗೌರವಾನ್ವಿತ ಸುಪ್ರೀಂ ಕೋರ್ಟ್ ಗೆ ನಾನು, ನನ್ನ ಮಕ್ಕಳು ಹಾಗೂ ಎಲ್ಲೆಡೆಯ ಮಹಿಳೆಯರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
2003ರಿಂದ 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಬಿಲ್ಕಿಸ್ ಬಾನು ಅವರಿಗೆ ಬೆನ್ನೆಲುಬಾಗಿ ನಿಂತಿರುವ 54 ವರ್ಷದ ಶೋಭಾ ಗುಪ್ತಾ, ಈ ದಿನದವರೆಗೂ ಆಕೆಗೆ ತಮ್ಮ ಕಾನೂನು ನೆರವನ್ನು ಮುಂದುವರಿಸಿದ್ದಾರೆ. 2019ರಲ್ಲಿ ಭಾರತದ ನ್ಯಾಯಾಲಯಗಳ ಇತಿಹಾಸದಲ್ಲೇ ಮೊದಲ ಬಾರಿ ಅತ್ಯಾಚಾರ ಸಂತ್ರಸ್ತೆಯೋರ್ವಳಿಗೆ ಗರಿಷ್ಠ ಮಟ್ಟದ ಪರಿಹಾರವನ್ನು ಘೋಷಿಸಿದ್ದ ಸುಪ್ರೀಂ ಕೋರ್ಟ್, ಆಕೆಗೆ ರಾಜ್ಯ ಸರ್ಕಾರವೇ ಪರಿಹಾರ ನೀಡಬೇಕು ಎಂದು ಕಡ್ಡಾಯವಾಗಿ ಆದೇಶಿಸಿತ್ತು. ಈ ಅಭೂತಪೂರ್ವ ತೀರ್ಪು ದುಷ್ಕರ್ಮಿಗಳಿಂದ ಬಿಲ್ಕಿಸ್ ಬಾನು ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆಗಿದ್ದ ದೌರ್ಜನ್ಯವನ್ನು ಪ್ರತಿಫಲಿಸಿತ್ತು. “ಭಾರತದಲ್ಲಿ ನ್ಯಾಯ ದೊರೆಯಲು ದೀರ್ಘ ಸಮಯ ಹಿಡಿಯುತ್ತದೆ. ಹೀಗಿದ್ದೂ, ನಮ್ಮ ನ್ಯಾಯಾಂಗವು ಎಲ್ಲರಿಗೂ ನ್ಯಾಯ ನೀಡುವಲ್ಲಿ ಅತ್ಯುತ್ತಮ ವ್ಯವಸ್ಥೆಗಳ ಪೈಕಿ ಒಂದಾಗಿದೆ” ಎನ್ನುತ್ತಾರೆ ಶೋಭಾ ಗುಪ್ತಾ.
ಶೋಭಾ ಗುಪ್ತಾ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ಕಳೆದ 16 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಖಾಯಂ ವಕೀಲೆಯಾಗಿದ್ದಾರೆ. ವಕೀಲೆಯಾಗಿ ವಿಭಿನ್ನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕೊಡಿಸುವಲ್ಲಿ ಸಕ್ರಿಯವಾಗಿ ಭಾಗಿಯಾಗಿರುವ ಶೋಭಾ ಗುಪ್ತಾ, ಕಾನೂನು ಸಮಸ್ಯೆಯಲ್ಲಿ ಸಿಲುಕಿರುವ ಅಪ್ರಾಪ್ತರಿಗೆ ಕಾನೂನು ನೆರವು, ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಏರ್ಪಡಿಸಲಾಗುವ ಕಾನೂನು ನೆರವು ಶಿಬಿರಕ್ಕೆ ಕೊಡುಗೆ, ಬಡವರಿಗೆ ಸಾಮಾನ್ಯ ಉಚಿತ ಕಾನೂನು ನೆರವು ಒದಗಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ.
ಒಂದು ದಶಕಕ್ಕೂ ಹೆಚ್ಚು ಕಾಲ ಶೋಭಾ ಗುಪ್ತಾ ಅವರು ಸುಪ್ರೀಂ ಕೋರ್ಟ್ ಹಾಗೂ ದಿಲ್ಲಿ ಹೈಕೋರ್ಟ್ ನಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಹಲವಾರು ಪ್ರಕರಣಗಳನ್ನು ಪ್ರತಿನಿಧಿಸಿದ್ದಾರೆ. ಶುಲ್ಕ ನಿಗದಿ, ದಾಖಲಾತಿಗೆ ಸಂಬಂಧಿಸಿದ ಮಾರ್ಗಸೂಚಿಗಳು ಸೇರಿದಂತೆ ಖಾಸಗಿ ಶಾಲೆಗಳ ಹಲವಾರು ಪ್ರಕರಣಗಳು, ಗ್ರಾಚ್ಯುಯಿಟಿ ಪಾವತಿ ಕಾಯ್ದೆಯ ತಿದ್ದುಪಡಿ, ಗಂಗೂಲಿ ಸಮಿತಿಯ ಶಿಫಾರಸುಗಳು ಹಾಗೂ ಶಿಕ್ಷಣ ಹಕ್ಕು ಕಾಯ್ದೆ ಎದುರಿಸುವ ಸವಾಲುಗಳ ಪ್ರಕರಣಗಳೊಂದಿಗೆ ದೀರ್ಘಕಾಲದಿಂದ ಒಡನಾಡುತ್ತಿದ್ದಾರೆ.
ಶೋಭಾ ಗುಪ್ತಾ ಇತ್ತೀಚೆಗೆ ‘We the Women of India (WWI) ಎಂಬ ಸಾಮಾಜಿಕ ವೇದಿಕೆಯನ್ನು ಪ್ರಾರಂಭಿಸಿದ್ದು, ಈ ವೇದಿಕೆಯನ್ನು ಮಹಿಳೆಯರ ಮಾನವ ಹಕ್ಕುಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿ, ಸಮಸ್ಯೆಯಲ್ಲಿ ಸಿಲುಕಿರುವ ಮಹಿಳೆಯರಿಗೆ ಸಮಾನ ಹಾಗೂ ಗೌರವಾನ್ವಿತ ವಾತಾವರಣ ಹಾಗೂ ನೆರವು ಒದಗಿಸುವುದಕ್ಕೆ ಮೀಸಲಿಟ್ಟಿದ್ದಾರೆ. WWI ಸದಸ್ಯರ ಪರಿಣಾಮಕಾರಿ ಸಹಭಾಗಿತ್ವದಿಂದ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಈ ವೇದಿಕೆಯು ಅಸಂಖ್ಯಾತ ವ್ಯಕ್ತಿಗಳಿಗೆ ತನ್ನ ನೆರವಿನ ಹಸ್ತವನ್ನು ಚಾಚಿದೆ.
ಹಲವಾರು ಸರ್ಕಾರಗಳು ಹಾಗೂ ಅರೆ-ಸರ್ಕಾರಗಳು ಹಾಗೂ ಈ ಮುಂಚಿನ ರಾಜಸ್ಥಾನ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ (ಈಗ ಈ ಸಂಸ್ಥೆಯು ಐದು ಕಂಪನಿಗಳಾಗಿ ವಿಭಜನೆಗೊಂಡಿದೆ) ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ವಕೀಲರ ಸಮಿತಿಯಲ್ಲಿ ಶೋಭಾ ಗುಪ್ತಾ ಕೆಲಸ ಮಾಡಿದ್ದಾರೆ.
“FLAG – Free Legal Aid Group” ಎಂಬ ಸಂಘಟನೆಯ ಸಂಸ್ಥಾಪಕರೂ ಆಗಿರುವ ವಕೀಲೆ ಶೋಭಾ ಗುಪ್ತಾ, ಈ ಸಂಘಟನೆಯ ಮೂಲಕ ಕಾನೂನಿನ ತಪ್ಪು ಬದಿಯಲ್ಲಿರುವ ಬಾಲಾಪರಾಧಿಗಳಿಗೆ ಉಚಿತ ಕಾನೂನು ನೆರವನ್ನೂ ಒದಗಿಸುತ್ತಿದ್ದಾರೆ.