ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡಿದರೆ 1 ಕೋಟಿ ರೂ. ವರೆಗೆ ದಂಡ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ವಿಮಾನ ಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡಿದರೆ 1 ಕೋಟಿ ರೂ. ವರೆಗೆ ದಂಡ ವಿಧಿಸಲು ಕೇಂದ್ರ ಸರಕಾರ ವಿಮಾನ (ಭದ್ರತಾ) ನಿಯಮಗಳು, 2023ಕ್ಕೆ ತಿದ್ದುಪಡಿ ತಂದಿದೆ.
ಡಿಸೆಂಬರ್ 16ರ ಗಝೆಟ್ ಅಧಿಸೂಚನೆಯಲ್ಲಿ ನಾಗರಿಕ ವಾಯು ಯಾನ ಸಚಿವಾಲಯ ವಿಮಾನ (ಭದ್ರತೆ) ನಿಯಮಗಳು, 2023ರಲ್ಲಿ ಸೆಕ್ಷನ್ 30ಎಯನ್ನು ಸೇರಿಸಿದೆ.
ಇದರ ಪ್ರಕಾರ ಸುಳ್ಳು ಮಾಹಿತಿ ನೀಡುವ ಮೂಲಕ ವಿಮಾನ, ವಾಯು ನೆಲೆ ಅಥವಾ ನಾಗರಿಕ ವಾಯು ಯಾನ ಸೌಲಭ್ಯಕ್ಕೆ ಅಪಾಯ ಉಂಟು ಮಾಡುವುದು ಅಥವಾ ಇದು ಎರಡೂ; (ಬಿ) ಪ್ರಯಾಣಿಕರು, ವಿಮಾನದ ಸಿಬ್ಬಂದಿ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಅಥವಾ ಸಾರ್ವಜನಿಕರ ಆತಂಕಕ್ಕೆ ಕಾರಣವಾಗುವುದು; ಅಥವಾ (ಸಿ) ನಾಗರಿಕ ವಾಯು ಯಾನಕ್ಕೆ ಅಡ್ಡಿ ಉಂಟು ಮಾಡುವುದು ಶಿಕ್ಷಾರ್ಹವಾಗಿರುತ್ತದೆ.
ಹೊಸದಾಗಿ ಸೇರಿಸಲಾದ ಇನ್ನೊಂದು ನಿಯಮ 29ಎ ವಿಮಾನದ ಒಳಗೆ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿಗೆ ಪ್ರವೇಶ ನಿರಾಕರಿಸಲು ಅಥವಾ ಅವರು ವಿಮಾನವನ್ನು ತೊರೆಯುವಂತೆ ಲಿಖಿತವಾಗಿ ನಿರ್ದೇಶನಗಳನ್ನು ನೀಡಲು ಮಹಾ ನಿರ್ದೇಶಕ (ಡಿಜಿ)ರಿಗೆ ಅವಕಾಶ ನೀಡುತ್ತದೆ.
ಈ ನೂತನ ಎರಡು ನಿಯಮಗಳ ಅಡಿಯಲ್ಲಿ ಅಪರಾಧ ಎಸಗಿದರೆ, ಅಪರಾಧಿ ವ್ಯಕ್ತಿಯೇ ಅಥವಾ 300 ಮಂದಿ ಇರುವ ಸಂಘಟನೆಯೇ ಎಂಬುದನ್ನು ಅವಲಂಬಿಸಿ 1ಲಕ್ಷ ರೂ., 50 ಲಕ್ಷ ರೂ., 75 ಲಕ್ಷ ರೂ. ಅಥವಾ 1 ಕೋಟಿ ರೂ. ದಂಡ ವಿಧಿಸಲಾಗುತ್ತದೆ.
2024 ಜನವರಿ 14ರಿಂದ ಒಟ್ಟು 999 ಹುಸಿ ಬಾಂಬ್ ಕರೆಗಳನ್ನು ವಿಮಾನಯಾನ ಸಂಸ್ಥೆಗಳು ಸ್ವೀಕರಿಸಿವೆ. ಅಕ್ಟೋಬರ್ ತಿಂಗಳೊಂದರಲ್ಲೇ 666 ಕರೆಗಳನ್ನು ವಿಮಾನ ಯಾನ ಸಂಸ್ಥೆಗಳು ಸ್ವೀಕರಿಸಿವೆ ಎಂದು ನಾಗರಿಕ ವಾಯು ಯಾನ ಸಚಿವಾಲಯ ಸಂಸತ್ತಿಗೆ ತಿಳಿಸಿದೆ.
ಆದರೆ, ಈ ನಿಯಮ ಹಿಂದಿನ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ.