ಝಾನ್ಸಿ ಸರ್ಕಾರಿ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: 10 ನವಜಾತ ಶಿಶುಗಳು ಸಜೀವ ದಹನ
16 ಕಂದಮ್ಮಗಳ ಸ್ಥಿತಿ ಚಿಂತಾಜನಕ
PC: x.com/iamharunkhan
ಹೊಸದಿಲ್ಲಿ: ಉತ್ತರ ಪ್ರದೇಶದ ಝಾನ್ಸಿ ನಗರದ ಆಸ್ಪತ್ರೆಯಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಕನಿಷ್ಠ 10 ನವಜಾತಶಿಶುಗಳು ಸಾವನ್ನಪ್ಪಿದ್ದು, ಇತರ 16 ಶಿಶುಗಳಿಗೆ ಗಂಭೀರ ಸುಟ್ಟಗಾಯಗಳಾಗಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿವೆ. ನಗರದ ಮಹಾರಾಣಿ ಲಕ್ಷ್ಮಿಬಾಯಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ನವಜಾತ ಶಿಶು ತೀವ್ರ ನಿಗಾ ಘಟಕ (ಎನ್ಐಸಿಯು)ದಲ್ಲಿ ಶುಕ್ರವಾರ ರಾತ್ರಿ 10:30ರ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ. ದುರಂತ ನಡೆದ ಸಂದರ್ಭ ಶಿಶು ತೀವ್ರ ನಿಗಾಘಟಕದಲ್ಲಿ ಕನಿಷ್ಠ 56 ನವಜಾತ ಶಿಶುಗಳು ಇದ್ದುದಾಗಿ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಶಂಕಿಸಲಾಗಿದ್ದು. ಆಸ್ಪತ್ರೆಯ ಎನ್ಐಸಿಯು ವಿಭಾಗಕ್ಕೆ ಬೆಂಕಿ ಹರಡುತ್ತಿದ್ದಂತೆಯೇ ಕಾಲೇಜ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವಾರ್ಡ್ನ ಕಿಟಕಿಗಳನ್ನು ಒಡೆದುಹಾಕಿ ರೋಗಿಗಳನ್ನು ಮತ್ತು ಶಿಶುಗಳನ್ನು ತೆರವುಗೊಳಿಸಿದರು.
ದುರಂತದ ಕಾರಣದ ಬಗ್ಗೆ ತನಿಖೆ ನಡೆಸಲು ಆರು ಮಂದಿಯ ವೈದ್ಯರನ್ನೊಳಗೊಂಡ ವಿಶೇಷ ಸಮಿತಿಯನ್ನು ರಚಿಸಲಾಗಿದ್ದು, 24 ತಾಸುಗಳೊಳಗೆ ವರದಿಯನ್ನು ನೀಡುವಂತೆ ವಿಭಾಗೀಯ ಆಯುಕ್ತ ಹಾಗೂ ಉಪ ಮಹಾ ಅಧೀಕ್ಷಕ (ಡಿಐಜಿ)ರಿಗೆ ಸೂಚಿಸಲಾಗಿದೆಯೆಂದು ಝಾನ್ಸಿ ಜಿಲ್ಲಾಧಿಕಾರಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಝಾನ್ಸಿಯ ವಿಭಾಗೀಯ ಆಯುಕ್ತ ಬಿಮಲ್ ಕುಮಾರ್ ದುಬೆ ಅವರು ಮಧ್ಯರಾತ್ರಿಯ ವೇಳೆಗೆ ಆಸ್ಪತ್ರೆ ತಲುಪಿದ್ದಾರೆ. ಘಟನೆ ಸಂಭವಿಸಿದ ಸಂದರ್ಭ ಎನ್ಐಸಿಯುನ ಒಳವಿಭಾಗದಲ್ಲಿದ್ದ 40ಕ್ಕೂ ಅಧಿಕ ಶಿಶುಗಳನ್ನು ಪಾರು ಮಾಡಲಾಗಿದೆ.
ಬೆಂಕಿ ಆಕಸ್ಮಿಕ ಸಂಭವಿಸಿದ ಕೆಲವೇ ನಿಮಿಷಗಳ ಬಳಿಕ ಅಗ್ನಿಶಾಮಕದಳವು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತು. ಅಗ್ನಿ ಅವಘಡಕ್ಕೀಡಾದ ಆಸ್ಪತ್ರೆಯ ಆವರಣದಲ್ಲಿ ಮೃತ ಶಿಶುಗಳ ಹೆತ್ತವರು, ಬಂಧುಗಳು ರೋದಿಸುತ್ತಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂದಿತ್ತು. 2-3 ದಿನಗಳ ಹಿಂದಷ್ಟೇ ಜನಿಸಿದ ಕಂದಮ್ಮಗಳನ್ನು ಅಗ್ನಿದುರಂತದಲ್ಲಿ ಕಳೆದುಕೊಂಡ ತಂದೆತಾಯಿಗಳ ಆಕ್ರಂದನ ಹೇಳತೀರದಾಗಿತ್ತು.
ದುರಂತಕ್ಕೆ ಸಂಬಂಧಿಸಿ 12 ತಾಸುಗಳೊಳಗೆ ವರದಿಯನ್ನು ಸಲ್ಲಿಸುವಂತೆ ಆದಿತ್ಯನಾಥ್ ಅವರು ವಿಭಾಗೀಯ ಆಯುಕ್ತ ಬಿಮಲ್ ಕುಮಾರ್ ಹಾಗೂ ಡಿಐಜಿ ಕಲಾನಿಧಿ ನೈದನಿ ಅವರಿಗೆ ಆದೇಶಿಸಿದ್ದಾರೆ.
ಭೀಕರ ಅಗ್ನಿ ಅವಘಡಕ್ಕೆ ಸಾಕ್ಷಿಯಾದ ಝಾನ್ಸಿ ಮಹಾರಾಣಿ ಲಕ್ಷ್ಮಿಬಾಯಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಯು 1968ರಲ್ಲಿ ತನ್ನ ಸೇವೆಗಳನ್ನು ಆರಂಭಿಸಿತ್ತು ಹಾಗೂ ಉತ್ತರಪ್ರದೇಶದ ಬುಂದೇಲ್ಖಂಡ ಪ್ರದೇಶ ಅತಿ ದೊಡ್ಡ ಆಸ್ಪತ್ರೆಗಳಲ್ಲೊಂದಾಗಿದೆ.
ಪ್ರಧಾನಿ ಶೋಕ: ಮೃತ ಶಿಶುಗಳ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ
ಝಾನ್ಸಿಯ ಮಹಾರಾಣಿ ಲಕ್ಷ್ಮಿಬಾಯಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಹಾಗೂ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರಧನವನ್ನು ಘೋಷಿಸಿದ್ದಾರೆ. ಗಾಯಾಳುಶಿಶುಗಳಿಗೆ ತಲಾ 50 ಸಾವಿರ ರೂ.ಗಳನ್ನು ಅವರು ಪ್ರಕಟಿಸಿದ್ದಾರೆ.
ಉತ್ತರಪ್ರದೇಶದ ಝಾನ್ಸಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡವು ಹೃದಯವಿದ್ರಾವಕವಾಗಿದೆ. ಈ ದುರಂತದಲ್ಲಿ ತಮ್ಮ ಅಮಾಯಕ ಮಕ್ಕಳನ್ನು ಕಳೆದುಕೊಂಡವರಿಗೆ ನನ್ನ ಗಾಢವಾದ ಸಂತಾಪಗಳು. ಈ ಆಘಾತವನ್ನು ಸಹಿಸುವ ಶಕ್ತಿಯನ್ನು ಅವರಿಗೆ ನೀಡುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ’’ ಎಂದು ಮೋದಿ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡಾ ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು,ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಮಕ್ಕಳು ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದವರು ಹೇಳಿದ್ದಾರೆ.
ಉತ್ತರ ಪ್ರದೇಶ ಸರಕಾರದಿಂದ ತಲಾ 5 ಲಕ್ಷ ರೂ. ನೆರವು
ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು , ಮೃತ ಶಿಶುಗಳ ಹೆತ್ತವರಿಗೆ ರಾಜ್ಯ ಸರಕಾರದಿಂದ ತಲಾ 5 ಲಕ್ಷ ರೂ.ಗಳ ಆರ್ಥಿಕ ನೆರವನ್ನು ಘೋಷಿಸಿದರು. ಅವಘಡದಲ್ಲಿ ಸುಟ್ಟಗಾಯಗಳಾದ ಶಿಶುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆಯೂ ಅವರು ಆದೇಶಿಸಿದ್ದಾರೆ.