ಜಮ್ಮು-ಕಾಶ್ಮೀರದಲ್ಲಿ ದಶಕದ ಪ್ರಥಮ ಚುನಾವಣೆ: ಇಂದು ಮೊದಲ ಹಂತ ಆರಂಭ
PC: x.com/moneycontrolcom
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಗುವಿನ ವಾತಾವರಣದ ನಡುವೆಯೂ ಸಂಘರ್ಷ ರಹಿತ ಚುನಾವಣೆಯನ್ನು ನಡೆಸಲು ಆಡಳಿತ ಯಂತ್ರ ಸಜ್ಜಾಗಿದ್ದು, ಬುಧವಾರ ಮೊದಲ ಹಂತದಲ್ಲಿ 24 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ರಾಜ್ಯದ ಜನತೆಗೆ ಇದು ಕಳೆದ ಒಂದು ದಶಕದಲ್ಲಿ ಮೊಟ್ಟಮೊದಲ ಚುನಾವಣೆಯಾಗಿದ್ದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸುವ ಸಾಧ್ಯತೆ ಇದೆ.
ಸೋಮವಾರವೇ ಪ್ರಚಾರ ಅಬ್ಬರಕ್ಕೆ ತೆರೆಬಿದ್ದಿದ್ದು, 48 ಗಂಟೆಗಳ ತೆರೆಮರೆಯ ಕಸರತ್ತಿನ ಬಳಿಕ ಮುಂಜಾನೆ 7ಕ್ಕೆ ಮತದಾನ ಆರಂಭವಾಗಿದೆ. ದಕ್ಷಿಣ ಕಾಶ್ಮೀರದ 16 ಹಾಗೂ ಜಮ್ಮು ವಿಭಾಗದ ಏಳು ಜಿಲ್ಲೆಗಳ ಎಂಟು ಕ್ಷೇತ್ರಗಳಲ್ಲಿ ಇದೀಗ ಚುನಾವಣೆಯ ಕುರುಹಾಗಿ ಕೇವಲ ಪಕ್ಷದ ಧ್ವಜಗಳು, ಪೋಸ್ಟರ್ ಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆಗೊಂಡ ಭದ್ರತಾ ಸಿಬ್ಬಂದಿಯಷ್ಟೇ ಗೋಚರಿಸುತ್ತದೆ.
90 ಸದಸ್ಯಬಲದ ವಿಧಾನಸಭೆ, ಈಗಾಗಲೇ ಮುಂಚೂಣಿಯಲ್ಲಿರುವ ಹಲವು ಮಂದಿ ರಾಜಕಾರಣಿಗಳು ಮತ್ತು ಹೊಸ ಮುಖಗಳಿಗೆ ಅಗ್ನಿಪರೀಕ್ಷೆಯಾಗಲಿದೆ. ಎಲ್ಲ ಪಕ್ಷಗಳಲ್ಲಿ ಕಂಡುಬಂದಿರುವ ಬಂಡಾಯದ ಬಾವುಟ ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮೊದಲ ಹಂತದಲ್ಲಿ 24 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 90 ಮಂದಿ ಪಕ್ಷೇತರರು ಸೇರಿದಂತೆ 219 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.
ಕುಲಗಾಂವ್ ನಲ್ಲಿ ಸಿಪಿಎಂನ ಮುಹಮ್ಮದ್ ಯೂಸಫ್ ತಾರಿಗಾಮಿ ಐದನೇ ಅವಧಿಗೆ ವಿಧಾನಸಭೆಗೆ ಆಯ್ಕೆಯಾಗುವ ಪ್ರಯತ್ನ ನಡೆಸಿದ್ದರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ಅಹ್ಮದ್ ಮಿರ್ ಅವರು ದೂರು ಕ್ಷೇತ್ರದಿಂದ ಹ್ಯಾಟ್ರಿಕ್ ಕನಸು ಕಾಣುತ್ತಿದ್ದಾರೆ. ಮಾಜಿ ಸಿಎಂ ಮೆಹಬೂಬಾ ಮುಫ್ತಿಯವರ ಪುತ್ರಿ ಇಲ್ತಿಜಾ ಮುಫ್ತಿ ಶ್ರೀಗುಫ್ವಾರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದು, ಕುಟುಂಬದ ಮೂರನೇ ತಲೆಮಾರು ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಂತಾಗಿದೆ.
ಮಿತ್ರಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಬನಿಹಾಳ್, ಭದೇರ್ವಾ ಮತ್ತು ದೋಡಾದಲ್ಲಿ ಪರಸ್ಪರ ಸೌಹಾರ್ದ ಸ್ಪರ್ಧೆಗೆ ಇಳಿದಿವೆ. ನ್ಯಾಷನಲ್ ಕಾನ್ಫರೆನ್ಸ್ ನ ಬಂಡಾಯ ಅಭ್ಯರ್ಥಿ ಪ್ಯಾರೇಲಾಲ್ ಶರ್ಮಾ ಇಂದ್ರೇವಾಲ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ಬಿಜೆಪಿ ಬಂಡಾಯ ಅಭ್ಯರ್ಥಿಗಳಾದ ರಾಕೇಶ್ ಗೋಸ್ವಾಮಿ ಮತ್ತು ಸೂರಜ್ ಸಿಂಗ್ ಪರಿಹಾರ್ ಕ್ರಮವಾಗಿ ರಾಮ್ಬನ್ ಮತ್ತು ಪಡ್ಡೆರ್-ನಾಗಸೇನಿ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ.