ಎಚ್ಎಎಲ್ ನಿಂದ ಮೊದಲ ಎಲ್ ಸಿ ಎ ವಿಮಾನ ವಾಯು ಪಡೆಗೆ ಹಸ್ತಾಂತರ
ಎಚ್ಎಎಲ್ | PHOTO: ANI
ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯು ತನ್ನ ಮೊದಲ ಲಘು ಯುದ್ಧ ವಿಮಾನ (ಎಲ್ ಸಿ ಎ) ತೇಜಸ್ ನ ಎರಡು ಸೀಟುಗಳ ಆವೃತ್ತಿಯನ್ನು ಬುಧವಾರ ಕೇಂದ್ರ ರಕ್ಷಣಾ ಇಲಾಖೆಯ ಸಹಾಯಕ ಸಚಿವ ಅಜಯ್ ಭಟ್ ಅವರ ಉಪಸ್ಥಿತಿಯಲ್ಲಿ ಭಾರತೀಯ ವಾಯು ಪಡೆಗೆ ಹಸ್ತಾಂತರಿಸಿತು.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಜಯ್ ಭಟ್ ಅವರು ಎರಡು ಆಸನಗಳ ಲಘು ಯುದ್ಧ ವಿಮಾನವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅಜಯ್ ಭಟ್, ಇದು ಆತ್ಮ ನಿರ್ಭರತೆಗೆ ದೊಡ್ಡ ಉತ್ತೇಜನವಾಗಿದೆ ಎಂದರು ‘‘ನಾನು ಈ ಐತಿಹಾಸಿಕ ಕಾರ್ಯಕ್ರಮದ ಭಾಗವಾಗಲು ಹೆಮ್ಮೆ ಪಡುತ್ತೇನೆ. ರಕ್ಷಣೆಯಲ್ಲಿ ಸ್ವದೇಶಿ ಉತ್ಪಾದನೆಯ ನೇತೃತ್ವ ವಹಿಸಿರುವ ಎಚ್ಎಎಲ್ ನ ಉತ್ಸಾಹಕ್ಕೆ ವಂದಿಸುತ್ತೇನೆ’’ ಎಂದು ಅವರು ಹೇಳಿದರು. ‘‘ಎಲ್ ಸಿ ಎ ತೇಜಸ್ ನ ಅಭಿವೃದ್ಧಿಯು ನಮ್ಮ ರಕ್ಷಣಾ ಖರೀದಿಯ ವಿಧಾನದಲ್ಲಿ ಬದಲಾವಣೆಯನ್ನು ಕೂಡ ತಂದಿದೆ. ವಿಶ್ವದರ್ಜೆಯ ವಿಮಾನಗಳ ವಿನ್ಯಾಸ, ಅಭಿವೃದ್ಧಿ ಹಾಗೂ ಉತ್ಪಾದನೆಯ ಪ್ರತಿಭೆ, ಜ್ಞಾನ ಹಾಗೂ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂಬುದನ್ನು ಇದು ನಿರೂಪಿಸಿದೆ’’ ಎಂದು ಅವರು ಹೇಳಿದರು.
ವಾಯು ಪಡೆಯ ಮುಖ್ಯಸ್ಥ ವಿ.ಆರ್. ಚೌಧರಿ ಮಾತನಾಡಿ, ಭಾರತೀಯ ವಾಯು ಪಡೆ ಇನ್ನೂ 97 ಎಲ್ ಸಿ ಎ ಗಳನ್ನು ಖರೀದಿಸಲು ಮುಂದಾಗಿದೆ. ಇದರೊಂದಿಗೆ ವಾಯು ಪಡೆ 220 ಎಲ್ಎಸಿಗಳನ್ನು ಹೊಂದಲಿದೆ ಎಂದರು. ಎಚ್ಎಎಲ್ ನ ಸಿಎಂಡಿ (ಹೆಚ್ಚುವರಿ ಉಸ್ತುವಾರಿ) ಸಿ.ಬಿ. ಅನಂತಕೃಷ್ಣನ್ ಮಾತನಾಡಿ, ಐಒಸಿ ಹಾಗೂ ಎಫ್ಒಸಿ ಗುತ್ತಿಗೆಗೆ ಸಂಬಂಧಿಸಿ ಎಲ್ಲಾ ಎರಡು ಆಸನಗಳ ವಿಮಾನವನ್ನು ಪಸಕ್ತ ವಿತ್ತ ವರ್ಷದಲ್ಲಿ ಭಾರತೀಯ ವಾಯು ಪಡೆಗೆ ನೀಡಲು ಕಂಪೆನಿ ಬದ್ಧವಾಗಿದೆ ಎಂದರು.
ಎರಡು ಆಸನಗಳ ಈ ಆವೃತ್ತಿಯ ವಿಮಾನ ಭಾರತೀಯ ವಾಯು ಪಡೆಯ ತರಬೇತು ಅಗತ್ಯತೆಗಳಿಗೆ ಬೆಂಬಲಿಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಅಗತ್ಯವಾದಲ್ಲಿ ಯುದ್ಧ ವಿಮಾನದ ಪಾತ್ರವನ್ನು ಕೂಡ ನಿರ್ವಹಿಸಲಿದೆ.