ಇನ್ಸ್ಟಾಗ್ರಾಮರ್ನ ಹತ್ಯೆ ಪ್ರಕರಣದ ಐವರು ಆರೋಪಿಗಳ ಬಂಧನ
ಜನರನ್ನು ಬೆದರಿಸಿ ಅವಮಾನಿಸಿ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದ ಇನ್ಸ್ಟಾಗ್ರಾಮರ್!
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಉದ್ದೇಶಪೂರ್ವಕವಾಗಿ ಜನರ ಮೇಲೆ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸುವ ರೀಲ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುತ್ತಿದ್ದ 28 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆಗೈದ ಪ್ರಕರಣದ ಐವರು ಆರೋಪಿಗಳನ್ನು ದಿಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಅಂಜು ಯಾನೆ ಅನ್ನು (34), ಪವನ್ ಯಾನೆ ವಿಕಾಸ್ (34), ಅಭಿನವ್ ರಾಜ್ ಯಾನೆ ಅನ್ನು ಪುಡಿ (27), ಸಂದೀಪ್ ಘಾವರಿ(35) ಹಾಗೂ ಮುಕೇಶ್ ಕುಮಾರ್ (35) ಬಂಧಿತ ಆರೋಪಿಗಳು.
ಎಪ್ರಿಲ್ 17ರಂದು ಪೂರ್ವ ದಿಲ್ಲಿಯ ತ್ರಿಲೋಕ್ಪುರಿ ಪ್ರದೇಶದಲ್ಲಿ ಅಶೋಕ್ ಯಾನೆ ಥಂಡಾ ಪಾನಿ ಎಂಬಾತನ ಮೃತದೇಹವು ಆತನ ನಿವಾಸದ ಸಮೀಪ ಪತ್ತೆಯಾಗಿತ್ತು. ಮೃತದೇಹದಲ್ಲಿ ಹಲವಾರು ಗಾಯದ ಗುರುತುಗಳು ಕಂಡುಬಂದಿದ್ದವು.
ಸೈಕಲ್ ರಿಕ್ಷಾ ಚಾಲಕನೊಬ್ಬ ಅಶೋಕ್ ನನ್ನು ಎಲ್ಬಿಎಸ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆತ ಆಗಲೇ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದರು. ಪ್ರಕರಣದ ಸಾಕ್ಷಿಯಾದ ಸೈಕಲ್ ರಿಕ್ಷಾ ಚಾಲಕನನ್ನ್ನು ಪತ್ತೆಹಚ್ಚಲು ಪೊಲೀಸರು ಯತ್ನಿಸಿದರೂ, ಆತನ ಸುಳಿವು ಸಿಕ್ಕಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಆನಂತರ ಪೊಲೀಸರು ಇದೊಂದು ಕೊಲೆ ಪ್ರಕರಣವೆಂದು ದಾಖಲಿಸಿ ತನಿಖೆಯನ್ನು ಆರಂಭಿಸಿದ್ದರು. ತಾಂತ್ರಿಕ ಮಟ್ಟದ ತನಿಖೆ, ಸಿಸಿಟಿವಿ ವೀಡಿಯೊಗಳ ಸ್ಕ್ಯಾನಿಂಗ್,ಅಪರಾಧ ವಿಧಿವಿಜ್ಞಾನ ವಿಶ್ಲೇಷಣೆ ಹಾಗೂ ಯುವಕನನ್ನು ಆಸ್ಪತ್ರೆಗೆ ಕರೆತಂದ ರಿಕ್ಷಾಚಾಲಕನ ಸಾಗಿ ಬಂದ ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದ ಪೊಲೀಸರಿಗೆ ಶಂಕಿತ ಆರೋಪಿಗಳ ಗುರುತು ಪತ್ತೆಹಚ್ಚಲು ಸಾಧ್ಯವಾಯಿತು. ಆನಂತರ ಎಲ್ಲಾ 5 ಮಂದಿಯನ್ನು ಬಂಧಿಸಲಾಯಿತೆಂದು ದಿಲ್ಲಿ ಪೊಲೀಸ್ ಅಧಿಕಾರಿ ತಿಳಸಿಇದ್ದರು.
ಥಂಡಾ ಪಾನಿ ಎಂಬ ಹೆಸರಿನಲ್ಲಿ ರೀಲ್ಸ್ ಗಳನ್ನು ಮಾಡುತ್ತಿದ್ದ ಅಶೋಕ್ ಜನರನ್ನು ಬೆದರಿಸಿ ಅವರನ್ನು ಸಾರ್ವಜನಿಕವಾಗಿ ಅವಮಾನಿಸುತ್ತಿದ್ದ. ಈ ಕೃತ್ಯವನ್ನು ರೆಕಾರ್ಡ್ ಮಾಡಿ ಅವುಗಳನ್ನು ಇನ್ಸ್ಟಾಗ್ರಾಂನಲ್ಲಿ ಪ್ರಸಾರ ಮಾಡುತ್ತಿದ್ದನೆನ್ನಲಾಗಿದೆ.
ಆತ ಒಮ್ಮೆ ಬಂಧಿತ ಆರೋಪಿಗಳಲ್ಲೊಬ್ಬನಿಗೆ ಬೆದರಿಕೆಯೊಡ್ಡಿ ಜನರ ಮುಂದೆ ಮೊಣಕಾಲೂರುವಂತೆ ಮಾಡಿದ್ದ ಹಾಗೂ ಆನಂತರ ಘಟನೆಯ ವೀಡಿಯೊವನ್ನು ಚಿತ್ರೀಕರಿಸಿ, ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ವೀಡಿಯೊ ಚಿತ್ರೀಕರಣಕ್ಕೊಳಗಾದ ವ್ಯಕ್ತಿ, ಆ ದಿನ ಅಶೋಕ್ ಏಕಾಂಗಿಯಾಗಿದ್ದಾಗ ತನ್ನ ಜೊತೆಗಾರರ ನೆವಿನಿಂದ ಆತನನ್ನು ಅಪಹರಿಸಿದ್ದ. ಅಶೋಕ್ ನನ್ನು ಕಾರಿನಲ್ಲಿ ಕೊಂಡೊಯ್ದು ಲಾಠಿಗಳು,ರಾಡ್ಗಳಿಂದ ಬರ್ಬರವಾಗಿ ಥಳಿಸಿ ಹತ್ಯೆಗೈಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಆರೋಪಿಗಳು ಕಲ್ಯಾಣಪುರಿಯಲ್ಲಿ ಕಾರಿನಿಂದ ಹೊರತೆಗೆದರು ಹಾಗೂ ಸೈಕಲ್ ರಿಕ್ಷಾ ಚಾಲಕನಿಗೆ 500 ರೂ. ನೀಡಿ, ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ್ದರೆಂದು ಪೊಲೀಸರು ಹೇಳಿದ್ದಾರೆ.